ಮಾನ್ಯತೆ ನವೀಕರಣದಲ್ಲಿ ಭ್ರಷ್ಟಾಚಾರ, ಅಕ್ರಮದ ವಿರುದ್ಧ ಭುಗಿಲೆದ್ದ ಆಕ್ರೋಶ, ಸಮಗ್ರ ತನಿಖೆಗೆ ಒತ್ತಾಯ

ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ಭೋಗೇಶ ಸೋಲಾಪೂರ, ಮಲ್ಲಿಕಾರ್ಜುನ ಬಟಗಿ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅಧ್ಯಕ್ಷ ಲಕ್ಷ್ಮಣ ಕಂಬಾಗಿ, ಭೋಗೇಶ ಸೋಲಾಪೂರ, ಮಲ್ಲಿಕಾರ್ಜುನ ಬಟಗಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅಕ್ರಮ
  • ಮಾನ್ಯತೆ ನವೀಕರಣದಲ್ಲಿ ಗೋಲ್‌ಮಾಲ್
  • ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ
  • ನವೀಕರಿಸಿದ ಶಾಲೆಗಳನ್ನು ರದ್ದುಗೊಳಿಸಿ
ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳು, ನಿಯಮ ಉಲ್ಲಂಘನೆಗಳು ಹಾಗೂ ಭ್ರಷ್ಟಾಚಾರದ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಪದಾಧಿಕಾರಿಗಳು ಗುರುವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವೇದಿಕೆಯ ಅಧ್ಯಕ್ಷ ಲಕ್ಷ್ಮಣ ಕಂಬಾಗಿ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಮಾಜದ ಅಭಿವೃದ್ಧಿ ಹಾಗೂ ಭವಿಷ್ಯದ ಪೀಳಿಗೆಯ ಶಿಕ್ಷಣದ ಗುಣಮಟ್ಟವನ್ನು ರೂಪಿಸುವ ಅತ್ಯಂತ ಪ್ರಮುಖ ಇಲಾಖೆ ಆಗಿದೆ. ಈ ಇಲಾಖೆಯ ಆಡಳಿತ ಕ್ರಮಗಳು ಪಾರದರ್ಶಕತೆ, ನಿಷ್ಠೆ ಹಾಗೂ ಕಾನೂನುಬದ್ಧತೆಯ ಆಧಾರದ ಮೇಲೆ ನಡೆಯುವುದು ಅನಿವಾರ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯವೈಖರಿಯಲ್ಲಿ ಕೆಲವು ಗಂಭೀರ ಅಕ್ರಮಗಳು ಮತ್ತು ನಿಯಮ ಉಲ್ಲಂಘನೆಗಳು ನಡೆದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಹಾಗೂ ಸಂಬಂಧಿತ ದಾಖಲೆಗಳು ನಮ್ಮ ಗಮನಕ್ಕೆ ಬಂದಿವೆ. ಹೀಗಾಗಿ ಇಲಾಖೆಯಲ್ಲಿ ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದೈಹಿಕ ಶಿಕ್ಷಕರ ಬಡ್ತಿ ಪ್ರಕ್ರಿಯೆಯಲ್ಲಿ ಸರ್ಕಾರ ಹೊರಡಿಸಿದ ಸುತ್ತೋಲೆಗಳಲ್ಲಿರುವ ನಿಯಮಾವಳಿಗಳನ್ನು ಮೀರಿ ಕ್ರಮ ಕೈಗೊಳ್ಳಲಾಗಿದೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ. ಈ ಸಂಬಂಧಿತ ಸರ್ಕಾರಿ ಸುತ್ತೋಲೆಗಳ ಪ್ರತಿಗಳು ಹಾಗೂ ಇತರ ದಾಖಲೆಗಳು ನಮ್ಮ ಬಳಿ ಲಭ್ಯವಿದ್ದು ಅಗತ್ಯವಿದ್ದಲ್ಲಿ ಪರಿಶೀಲನೆಗಾಗಿ ಸಲ್ಲಿಸಲು ಸಿದ್ಧರಾಗಿದ್ದೇವೆ. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 14 ಜನರ ನಿಯೋಜನೆ ಮಾಡುವ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆಯ ಆಯುಕ್ತರ ಅನುಮತಿ ಪಡೆಯದೇ ಇಬ್ಬರನ್ನು ತಾತ್ಕಾಲಿಕವಾಗಿ ನಿಯೋಜಿಸಿರುವುದು ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಕ್ರಮಗಳು ಸರ್ಕಾರದ ನಿಗದಿತ ಆಡಳಿತಾತ್ಮಕ ನಿಯಮಗಳಿಗೆ ವಿರುದ್ಧವಾಗಿರುವ ಸಾಧ್ಯತೆ ಇದೆ. 353 ಶಾಲೆಗಳಿಗೆ ಮಾನ್ಯತೆ ನವೀಕರಣ ನೀಡಿರುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಗಳು ಮತ್ತು ಅಕ್ರಮಗಳು ನಡೆದಿರುವ ಸಾಧ್ಯತೆ ಇದ್ದು ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷದ ಮುಖಂಡ ಭೋಗೇಶ ಸೋಲಾಪೂರ ಮಾತನಾಡಿ, ಡಿಡಿಪಿಐ ಲಾಗಿನ್ ಐಡಿ ಕದ್ದು ಮಾನ್ಯತೆ ನವೀಕರಣಗೊಳಿಸಿದ್ದಾರೆ ಎಂದು ಡಿಡಿಪಿಐ ಅವರೇ ಹೇಳಿದ್ದಾರೆ. ಈ ಸಂಬಂಧ ಡಿಡಿಪಿಐ ಅವರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಕೂಡಲೇ ಡಿಡಿಪಿಐ ಅವರು ನವೀಕರಿಸಿದ ಎಲ್ಲ ಶಾಲೆಗಳನ್ನು ರದ್ದುಪಡಿಸಬೇಕು. ಹೋದ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಮಟ್ಟದಲ್ಲಿ ಬಂದ ಕಾರಣ ವಿಜಯಪುರ ಮಾನ ಮರ್ಯಾದೆ ರಾಜ್ಯ ಮಟ್ಟದಲ್ಲಿ ಹರಾಜುವಾಗಿದೆ. ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶ್ರಮಿಸದೆ ಇಂತಹ ಭ್ರಷ್ಟಾಚಾರದಲ್ಲಿ ಮೂಗು ತೋರಿಸಿ ವೈಯಕ್ತಿಕ ಸ್ವಾರ್ಥ ಮೆರೆಯುತ್ತಿರುವುದು ದುರಾದೃಷ್ಟಕರ ಸಂಗತಿ ಎಂದರು.
ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪೂಜಾ ಜುಮ್ಮೆವಾಲೆ, ಇಂದುಮತಿ ಜಾಲವಾದಿ, ಪ್ರೇಮಾ ಲೋನಾರಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net