ಕೇವಲ ರಾಜೀನಾಮೆಯಲ್ಲ; ಪ್ರಸಂಗ ಬಂದರೆ ರಾಜಕೀಯ ನಿವೃತ್ತಿಗೂ ಸಿದ್ಧ ! ಶಾಸಕ ಯಶವಂತರಾಯಗೌಡ ಗುಡುಗು

ಕ್ಷೇತ್ರದ ಜನರಿಗಾಗಿ ಯಾವುದೇ ತ್ಯಾಗಕ್ಕೂ ರೆಡಿ * ಸಂಕಷ್ಟದಲ್ಲಿ ಧ್ವನಿ ಎತ್ತದಿದ್ದರೆ ಅದ್ಯಾವ ರಾಜಕಾರಣ?
ಯಶವಂತರಾಯಗೌಡ ಪಾಟೀಲ
ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು. ಯಶವಂತರಾಯಗೌಡ ಪಾಟೀಲ
Published on: 

ವಿಜಯಪುರ: ‘ಕ್ಷೇತ್ರದ ಜನರಿಗೋಸ್ಕರ ಕೇವಲ ರಾಜೀನಾಮೆಯಲ್ಲ; ರಾಜಕೀಯ ನಿವೃತ್ತಿಗೂ ಸಿದ್ಧ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಗುಡುಗಿದ್ದಾರೆ.

‘ರಾಜಕೀಯದಲ್ಲಿ ರಾಜೀನಾಮೆ ಎನ್ನುವುದು ಕೊನೆಯ ಅಸ್ತ್ರ, ರಾಜೀನಾಮೆ ಹಿಂದೆ ಕ್ಷೇತ್ರದ ಹಿತ ಅಡಗಿದೆ, ಕಳೆದ 40 ವರ್ಷಗಳಿಂದ ಕ್ಷೇತ್ರದ ಜನ ಬಂಡೆಯಂತೆ ಗಟ್ಟಿಯಾಗಿ ನನ್ನ ಜೊತೆಗೆ ನಿಂತಿದ್ದಾರೆ. ಅವರು ಸಂಕಷ್ಟದಲ್ಲಿದ್ದಾಗ ಗಟ್ಟಿಯಾಗಿ ಧ್ವನಿ ಎತ್ತದೇ ಹೋದರೆ ಅದೆಂಥ ರಾಜಕಾರಣ, ಅದ್ಯಾವ ವ್ಯಕ್ತಿತ್ವ?’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.

‘ಜಿಲ್ಲಾ ಪಂಚಾಯಿಂದ ಹಿಡಿದು ಶಾಸಕ ಸ್ಥಾನದವರೆಗೆ ಸುದೀರ್ಘ 40 ವರ್ಷದ ರಾಜಕಾರಣದಲ್ಲಿ ಜನ ನನ್ನ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ. ಅವರಿಗೆ ನೋವಾದಾಗ ರಾಜೀನಾಮೆ ಕೊಡಲಿಲ್ಲವೆಂದರೆ ಅದೆಂಥ ರಾಜಕಾರಣ. ಅದು ನನ್ನ ಬದ್ಧತೆ. ನಾನು ಬದುಕಿ ಬಂದ ಬಗೆಯೇ ಅಂಥದ್ದು. ಈ ಹಿಂದೆ ಭೀಮಾಶಂಕರ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ, ನೀರಾವರಿ ವಿಚಾರದಲ್ಲಿಯೂ ಅಂಥದ್ದೊಂದು ಬದ್ಧತೆ ಮೆರೆದಿರುವುದ ಎಲ್ಲರೂ ಗಮನಿಸಿದ್ದಾರೆ. ನನ್ನ ಆರಾಧ್ಯ ದೈವ ಲಚ್ಯಾಣದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಿಂತು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ಮಿಸಿಯೇ ಸಿದ್ಧ ಎಂದು ಪಣ ತೊಟ್ಟಿದ್ದೆ. ಅಂದುಕೊಂಡಂತೆ ಕಾರ್ಖಾನೆ ನಿರ್ಮಿಸಿ ಬದ್ಧತೆ ಮೆರೆದಿದ್ದೇನೆ. ಆ ಸಂತೃಪ್ತಿ ನನ್ನಲ್ಲಿದೆ. ನೀರಾವರಿ ಯೋಜನೆಗಳಿಗಾಗಿಯೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಇಷ್ಟಕ್ಕೆಲ್ಲ ಕ್ಷೇತ್ರದ ಜನರೇ ಕಾರಣ. ಈಗ ಅವರು ಸಂಕಷ್ಟದಲ್ಲಿದ್ದಾಗ ನಾನು ಸುಮ್ಮನಿದ್ದರೆ ಅದೇನರ್ಥ? ನನ್ನ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಯೋಚಿಸಿ’ ಎಂದರು.

‘ಮೊದಲ ಬಾರಿಗೆ ರಾಜೀನಾಮೆ ಸಲ್ಲಿಸಿದ್ದು ಇಂಡಿ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲವೆಂಬ ಕೊರಗು ಕ್ಷೇತ್ರದಲ್ಲಿ ಮನೆ ಮಾಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಹೈಕಮಾಂಡ್ ಮಾತು ಕೊಟ್ಟಿದ್ದನ್ನು ಉಳಿಸಿಕೊಳ್ಳದ ಕಾರಣ ನೋವಿತ್ತು. ಅದೊಂದು ಭಾವನಾತ್ಮಕ ವಿಚಾರ. ಇದೀಗ ಭೀಕರ ಬರ ಆವರಿಸಿದ್ದರಿಂದ ಜನ ಸಂಕಷ್ಟದಲ್ಲಿದ್ದರು. ರಾಜ್ಯದ 239 ತಾಲೂಕುಗಳ ಪೈಕಿ 188 ತಾಲೂಕು ಬರ ಘೋಷಣೆ ಮಾಡಿದ ಬಳಿಕ ಮತ್ತು ಜಿಲ್ಲೆಯಲ್ಲಿ 13 ತಾಲೂಕು ಪೈಕಿ ಇಂಡಿ ಮತ್ತು ಚಡಚಣ ಆಗಲಿಲ್ಲವೆಂದರೆ ಯಾವ ಸಂದೇಶ ರವಾನೆಯಾಗುತ್ತದೆ? ಹೀಗಾಗಿ ರಾಜೀನಾಮೆ ನಿರ್ಧಾರ ಕೈಗೊಳ್ಳಬೇಕಾಯಿತು. ಸದನದಲ್ಲಿ ಮುಖ್ಯಮಂತ್ರಿಗಳು ಸಹ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಕ್ಷೇತ್ರದ ಜನರ ಹಿತಕ್ಕಾಗಿ ಕೈಗೊಂಡ ನಿರ್ಧಾರ ಸರಿಯಾಗಿದೆ ಎಂದರಲ್ಲದೇ ಕೂಡಲೇ ಬರ ಘೋಷಣೆ ಪಟ್ಟಿಯಲ್ಲಿಯೂ ಸೇರ್ಪಡೆಗೊಳಿಸಿದರು. ಇದು ನನ್ನ ಬದ್ಧತೆ’ ಎಂದರು.

‘ಬರ ಘೋಷಣೆಯಾಗದ ಹಿನ್ನೆಲೆ ಕೆಲವು ಭಾವನೆಗಳನ್ನು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದು ನಿಜ ಮತ್ತು ಸಹಜ. ನನ್ನ ಜನರಿಗೆ ಯಾವಾಗ ತೊಂದರೆಯಾಗಿದೆಯೋ ಆಗೆಲ್ಲ ಗಟ್ಟಿಯಾಗಿಯೇ ಧ್ವನಿ ಎತ್ತಿದ್ದೇನೆ. ಕಷ್ಟ ಎದುರಿಸಿದ ಪ್ರದೇಶದಿಂದ ಬಂದವರು ನಾವು. ಆ ಅರಿವು ಇಟ್ಟುಕೊಂಡೇ ಕ್ಷೇತ್ರದ ಬದಲಾವಣೆ ಮಾಡಿದ್ದೇವೆ. ಆ ವಿಚಾರದಲ್ಲಿ ಸಂತೃಪ್ತಿ ಇದೆ. ಜನರು ಕೂಡ ಅಷ್ಟೇ ಪ್ರೀತಿ ವಿಶ್ವಾಸ ತೋರಿಸಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ಸಮಸ್ಯೆಯಾದರೆ ಎಂದಿಗೂ ಸಹಿಸಲ್ಲ. ಅವರು ನನ್ನನ್ನು ಬೆಳೆಸಿದ್ದಾರೆ. ಹೀಗಾಗಿ ಮೊದಲು ಅವರು ಆ ಬಳಿಕ ನಮ್ಮ ಪಕ್ಷ. ಅವರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಯಶವಂತರಾಯಗೌಡರು ಭಾವನಾತ್ಮಕವಾಗಿ ನುಡಿದರು.

ಎದುರಾಳಿಗಳಿಗೆ ತಿರುಗೇಟು:

‘ಬರ, ನೆರೆಹಾವಳಿ, ಭೂಕಂಪದಂಥ ಸನ್ನಿವೇಶಗಳಲ್ಲಿ ರಾಜಕಾರಣ ಬೇಡ. ಬರ ಮತ್ತು ನೆರೆ ಬಂದಾಗ ಈ ಹಿಂದಿನ ಸರ್ಕಾರಗಳು ಯಾವ ನಿರ್ಧಾರ ಕೈಗೊಂಡಿವೆ ಎಂಬುದನ್ನು ಆಲೋಚಿಸಿ ಮಾತನಾಡಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆಯಲ್ಲ, ಎಲ್ಲರೂ ಒಟ್ಟಿಗೆ ಹೋಗಿ ಪರಿಹಾರ ಕೇಳೋಣ ನಡೆಯಿರಿ’ ಎಂದು ಎದುರಾಳಿಗಳ ಟೀಕೆಗಳಿಗೆ ಶಾಸಕರು ಚಾಟಿ ಬೀಸಿದರು.

‘ಮನಮೋಹನ್ ಸಿಂಗ್ ಹಾಗೂ ಪಿ. ಚಿದಂಬರಂ ಅವರು ದೊಡ್ಡ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು. ಈಗಲೂ ಅಂಥ ನಿರ್ಧಾರ ಕೈಗೊಳ್ಳಲು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರಿಗೆ ಹೇಳಿ. ಇಂದು ದೇಶಾದ್ಯಂತ ಬರದ ಸನ್ನಿವೇಶವಿದೆ. ಶ್ರೀಶೈಲದಂಥ ಅರಣ್ಯ ಪ್ರದೇಶದಲ್ಲಿಯೂ ಬರ ಆವರಿಸಿದರೆ. ನೆರೆಯ ರಾಜ್ಯಗಳಲ್ಲಿಯೂ ಇದೆ. ಇಂಥ ಸಂದರ್ಭ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಪರಿಹಾರಕ್ಕೆ ಮುಂದಾಗಬೇಕು’ ಎಂದರು.

ಪಕ್ಷದಲ್ಲಿ ಭಿನ್ನಾಭಿಪ್ರಾಯ ಸಹಜ:

ಬರಕ್ಕಿಂತ ಹೆಚ್ಚಾಗಿ ಪಕ್ಷದ ಕುರಿತ ಕೆಲವು ಅಸಮಾಧಾನದ ಮಾತುಗಳನ್ನಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಯಶವಂತರಾಯಗೌಡರು, ‘ಎಚ್.ಕೆ. ಪಾಟೀಲರು ಮತ್ತು ನಾನು ಸಹಜವಾಗಿಯೇ ಕೆಲವು ಭಾವನೆ ವ್ಯಕ್ತಪಡಿಸಿದ್ದೇವೆ. ಸಿಎಂ ಕೂಡ ಆ ಭಾವನೆಗೆ ಬೆಲೆ ಕೊಟ್ಟಿದ್ದಾರೆ. ಅಂತೆಯೇ ಬರ ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ. ಘೋಷಣೆ ವಿಳಂಭವಾಗಿದ್ದು ನಿಜ. ಅದಕ್ಕೆ ಕೇಂದ್ರ ಸರ್ಕಾರದ ಕೆಲವು ಮಾನದಂಡಗಳು ಸಹ ಕಾರಣ’ಎಂದರು.

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬರ ಪರಿಶೀಲನೆಗೆ ಬಂದಾಗ ಕ್ಷೇತ್ರದ ಶಾಸಕರೇ ಇರಲಿಲ್ಲವೆಂಬ ಪ್ರತಿಪಕ್ಷದವರ ಟೀಕೆಗೆ ಪ್ರತಿಕ್ರಿಯಿಸುತ್ತಾ, ‘ಸಚಿವರು ಬರುವ ವಿಚಾರ ನನಗೆ ತಿಳಿಸಿರಲಿಲ್ಲ. ಆಗ ನಾನು ಕೆಲವು ಆಪ್ತರ ಅಗಲಿಕೆ ಹಿನ್ನೆಲೆ ಸಂತಾಪ ವ್ಯಕ್ತಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net