ಹಾಲು ಉತ್ಪಾದನೆಯಲ್ಲಿ ರಾಷ್ಟ್ರೀಯ ಸ್ಥಾನಮಾನ

ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯಲ್ಲಿ ಆಯೋಜಿಸಿದ್ದ ಕ್ಷೀರ ಪೈಲಟ್ ಯೋಜನೆಗೆ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಲಾಯಿತು. ಪದ್ಮಶ್ರೀ ಪುರಸ್ಕೃತ ಮತ್ತು ಬೆಂಗಳೂರಿನ ಅಸೆಲ್‌ ಕಂಪನಿ ಸಂಸ್ಥಾಪಕ ಪ್ರಶಾಂತ ಪ್ರಕಾಶ, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಬಸನಗೌಡ ಎಂ. ಪಾಟೀಲ, ಜಿಲ್ಲಾಧಿಕಾರಿ ಡಾ. ಆನಂದ ಕೆ.  ಮತ್ತಿತರರಿದ್ದಾರೆ.
ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯಲ್ಲಿ ಆಯೋಜಿಸಿದ್ದ ಕ್ಷೀರ ಪೈಲಟ್ ಯೋಜನೆಗೆ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಲಾಯಿತು. ಪದ್ಮಶ್ರೀ ಪುರಸ್ಕೃತ ಮತ್ತು ಬೆಂಗಳೂರಿನ ಅಸೆಲ್‌ ಕಂಪನಿ ಸಂಸ್ಥಾಪಕ ಪ್ರಶಾಂತ ಪ್ರಕಾಶ, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಬಸನಗೌಡ ಎಂ. ಪಾಟೀಲ, ಜಿಲ್ಲಾಧಿಕಾರಿ ಡಾ. ಆನಂದ ಕೆ. ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪದ್ಮಶ್ರೀ ಪುರಸ್ಕೃತ ಪ್ರಶಾಂತ ಪ್ರಕಾಶ ವಿಶ್ವಾಸ ವ್ಯಕ್ತ
  • ಕ್ಷೀರ ಪೈಲೆಟ್ ಯೋಜನೆಗೆ ಚಾಲನೆ
ವಿಜಯಪುರ: ಕ್ಷೀರ ಯೋಜನೆಗೆ ಚಾಲನೆ ಸಿಕ್ಕಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ವಿಜಯಪುರ ಜಿಲ್ಲೆ ದೇಶದಲ್ಲೇ ಅತೀ ಹೆಚ್ಚು ಹಾಲು ಉತ್ಪಾದನೆಯ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಪದ್ಮಶ್ರೀ ಪುರಸ್ಕೃತ ಮತ್ತು ಬೆಂಗಳೂರಿನ ಅಸೆಲ್ ಕಂಪನಿ ಸಂಸ್ಥಾಪಕ ಪ್ರಶಾಂತ ಪ್ರಕಾಶ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಬಿಎಲ್‌ಡಿಇ ಸಂಸ್ಥೆಯಲ್ಲಿ ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ ಸಹಯೋಗದಲ್ಲಿ ಸುಸ್ಥಿರ ಹೈನುಗಾರಿಕೆ ಉತ್ತೇಜಿಸುವ ಉದ್ದೇಶದೊಂದಿಗೆ ಕೈಗೊಂಡಿರುವ `ಕ್ಷೀರ ಪೈಲೆಟ್ ಯೋಜನೆ'ಗೆ ಶನಿವಾರ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಚಾಲನೆ ನೀಡಿ ಅವರು ಮಾತಾಡಿದರು.
ಕಳೆದ 15 ರಿಂದ 20 ವರ್ಷಗಳ ಕಾಲ ನವೋದ್ಯಮಗಳಿಗೆ ಉತ್ತೇಜನ ನೀಡಿ ನಗರಾಭಿವೃದ್ಧಿ ಮಾಡುವತ್ತ ಗಮನ ಹರಿಸಿದೆ. ಸಚಿವ ಎಂ.ಬಿ. ಪಾಟೀಲ ಅವರ ಸಹಯೋಗದಲ್ಲಿ ಈಗ ಬಿಯಾಂಡ್ ಬೆಂಗಳೂರು ಅಂದರೆ ಗ್ರಾಮೀಣ ಭಾಗಗಳಲ್ಲಿಯೂ ಕೈಗಾರಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲು ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಽಪತಿ ಬಸನಗೌಡ ಪಾಟೀಲ ಅವರು ನನ್ನ ಜೊತೆ ಈಗಾಗಲೇ 15 ಸಭೆಗಳನ್ನು ಮಾಡಿದ್ದಾರೆ.
ತಂತ್ರಜ್ಞಾನ ಬಳಸಿ ಹಾಲು ಉತ್ಪಾದನೆ ಹೆಚ್ಚಿಸಲು ರೂಪುರೇಷೆ ಸಿದ್ಧಪಡಿಸಿದ್ದಾರೆ. ಜಿಲ್ಲೆಯ ಜನ ಕಾಯಕ ನಿಷ್ಠರಾಗಿದ್ದು, ಮುಂಬರುವ ದಿನಗಳಲ್ಲಿ ಶ್ವೇತಕ್ರಾಂತಿಗೂ ಕೊಡುಗೆ ನೀಡಲಿದ್ದಾರೆ.  ಈ ಯೋಜನೆಯ ಯಶಸ್ಸಿಗೆ ಸಚಿವರು ಬೆನ್ನೆಲುಬಾಗಿ ನಿಂತಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆ ಹೈನೋದ್ಯಮದಲ್ಲಿ ದೇಶದ ಪ್ರಮುಖ ಮೂರು ಜಿಲ್ಲೆಗಳಲ್ಲಿ ಒಂದಾಗಲಿಗೆ ಎಂದರು. 

ನವೋದ್ಯಮಿಗಳಿಗೆ ನೆರವು

ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಇದು ರೈತಪರ, ಮಹಿಳೆಯರ ಪರ, ಯುವಕರ ಪರ ಮತ್ತು ಪಕ್ಷಾತೀತ ಯೋಜನೆಯಾಗಿದೆ. ನಾವು ಕೈಗೊಂಡ ಕೋಟಿ ವೃಕ್ಷ ಅಭಿಯಾನದಂತೆ ಎಲ್ಲರೂ ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ಕ್ಷೀರ ಯೋಜನೆಯಡಿ ಸಣ್ಣದಾಗಿ ಹೈನುಗಾರಿಕೆ ಪ್ರಾರಂಭಿಸಿ ಲೋಪದೋಷ ಸರಿಪಡಿಸಿಕೊಂಡು ಹೈನುಗಾರಿಕೆಯನ್ನು ವಿಸ್ತರಿಸಲು ರೂಪುರೇಷೆ ಸಿದ್ದಪಡಿಸಲಾಗಿದೆ. ಯುವಕರು ಕೂಡ ವೃತ್ತಿಕೌಶಲ ಹೆಚ್ಚಿಸಿಕೊಂಡು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮತ್ತು ಈ ಮೂಲಕ ತೋಟಗಾರಿಕೆ, ಹೈನುಗಾರಿಕೆಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಲು ಇದು ನೆರವಾಗಲಿದೆ.  ಪೈಲೆಟ್ ಯೋಜನೆಗೆ ಆಯ್ಕೆಯಾಗಿರುವ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಶಾಂತ ಪ್ರಕಾಶ ಅವರು ನವೋದ್ಯಮಿಗಳಿಗೆ ಸ್ಟಾರ್ಟಟ್ ಮೂಲಕ ಉದ್ಯಮ ಪ್ರಾರಂಭಿಸಲು ನೆರವಾಗುತ್ತಿದ್ದಾರೆ. ಅವರು ಈ ಯೋಜನೆಗೆ ಕೈ ಜೋಡಿಸಿರುವುದು ಸಂತಸ ತಂದಿದೆ.  ಯುವ ಉದ್ಯಮಿಗಳಿಗೆ ಬದುಕು ನೀಡಿ ಅವರನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.

ರೈತರಿಗೆ ತರಬೇತಿ

ಕೃಷಿಕಲ್ಪ ಫೌಂಡೇಶನ್ ಮುಖ್ಯ ಕಾರ್ಯ ನಿರ್ವಣಾಽಕಾರಿ ಸಿ.ಎಂ. ಪಾಟೀಲ ಮಾತನಾಡಿ, ಬಸನಗೌಡ ಪಾಟೀಲ ಅವರು ಕಳೆದ ಮೂರು ವರ್ಷಗಳಿಂದ ಈ ಯೋಜನೆ ಜಾರಿಗೆ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಈ ಯೋಜನೆ ಜಾರಿಗೂ ಮುಂಚೆ ವಿಜಯಪುರ ಜಿಲ್ಲೆಯ 16 ಹಳ್ಳಿಗಳಲ್ಲಿ ಸಂಚರಿಸಿ ಸಮಗ್ರ ಅಧ್ಯಯನ ನಡೆಸಲಾಯಿತು. ಸಾಕಷ್ಟು ಚರ್ಚೆ ನಡೆಸಿ ಯೋಜನೆ ರೂಪಿಸಲಾಯಿತು. ನಮ್ಮ ರೈತರು ಶ್ರಮಜೀವಿಗಳು. ಯೋಜನೆ ಜಾರಿಗೆ ಸೂಕ್ತವಾದ ಐದು ಗ್ರಾಮಗಳನ್ನು ಆಯ್ಕೆ ಮಾಡಿ ತಿಪಟೂರಿನ ಮಾದರಿಯಲ್ಲಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಯುವ ರೈತರಿಗೆ ತರಬೇತಿ ನೀಡಲಾಗಿದೆ. ಹಾಲು ಉತ್ಪಾದನೆಯಿಂದ ಆಗುವ ಲಾಭಗಳು ಕುರಿತು ಚಿಂತನೆ ನಡೆಸಲಾಗಿದೆ. ಬಿಎಲ್‌ಡಿಇ ಸಂಸ್ಥೆ ಈ ಯೋಜನೆಗೆ ಅಗತ್ಯವಾಗಿರುವ ಎಲ್ಲ ನೆರವನ್ನು ನೀಡಿದೆ. ಸಂಸ್ಥೆಯ ಇನಕ್ಯೂಬೇಶನ್ ಸೆಂಟರ್ ಸಹಯೋಗದಲ್ಲಿ ಸ್ಟಾರ್ಟಪ್‌ಗಳಿಗೂ ಅವಕಾಶ ನೀಡಲಾಗುವುದು. ರೈತ ಉತ್ಪಾದಕ ಸಂಸ್ಥೆಗಳ ಆದಾಯ ಹೆಚ್ಚಳ, ಮಾರುಕಟ್ಟೆ ಸೃಷ್ಟಿ, ಕ್ಷೀರ ಮತ್ತು ಉದ್ಯಮಶೀಲತೆ ಬೆಳವಣಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಹಕರ ಸೃಷ್ಟಗೆ ಕ್ರಮ

ಅಕ್ಷಯಕಲ್ಪ ಫೌಂಡೇಶನ್ ಸಂಸ್ಥಾಪಕ ಶಶಿಕುಮಾರ ಮಾತನಾಡಿ, ಕಳೆದ 40 ವರ್ಷಗಳಲ್ಲಿ ವಿಶ್ವದಲ್ಲಿ 2/3ರಷ್ಟು ಕೃಷಿ ಯೋಗ್ಯ ಭೂಮಿ ಹಾಳಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ 60 ವರ್ಷಗಳಲ್ಲಿ ಕೃಷಿ ಯೋಗ್ಯ ಭೂಮಿ ಸಂಪೂರ್ಣವಾಗಿ ಮಾಯವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಕಳೆದ ಒಂದು ಶತಮಾನದ ಹಿಂದೆ ಇದ್ದ ಕೃಷಿ ಉತ್ಪಾದನೆ ಈಗ ಗಣನೀಯವಾಗಿ ಕಡಿಮೆಯಾಗಿದೆ. ಮಣ್ಣಿನ ಗುಣ ಕಾಪಾಡಿಕೊಂಡು ಕೃಷಿ ಉತ್ಪಾದನೆ ಹೆಚ್ಚಿಸಲು ಸಂಸ್ಥೆ ಈ ಯೋಜನೆಯಡಿ ಕೆಲಸ ಮಾಡಲಿದೆ. ಸ್ಥಳೀಯವಾಗಿ ಗೊಬ್ಬರ ತಯಾರಿಕೆ, ಹೈನುಗಾರಿಕೆ ಉಪವಸ್ತುಗಳನ್ನು ಉತ್ಪಾದಿಸಲು ತರಬೇತಿ ನೀಡಲಾಗುವುದು. ಜಾನುವಾರುಗಳ ಆರೋಗ್ಯ ಸಂರಕ್ಷಣೆ, ವೈಜ್ಞಾನಿಕವಾಗಿ ಮೇವು ಉತ್ಪಾದನೆ, ಹಾಲು ಸಂಸ್ಕರಣೆಗೆ ಸೂಕ್ತ ತರಬೇತಿ ನೀಡಿ ಹಾಲು ಉತ್ಪಾದನೆ ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ. ಉತ್ಪಾದನೆಗೆ ತಕ್ಕಂತೆ ಗ್ರಾಹಕರನ್ನು ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಕೃಷಿ ಪ್ರಧಾನವಾಗಿರುವ ಈ ಯೋಜನೆಯಿಂದ ಗ್ರಾಮೀಣಾಭಿವೃದ್ಧಿಯಾಗಲಿದೆ.  ಸಮಗ್ರ ಕೃಷಿಯಲ್ಲಿ ಕ್ಷೀರಕ್ರಾಂತಿ ಪಾತ್ರ ಮುಖ್ಯವಾಗಿದೆ. ಈ ಯೋಜನೆಗೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕೆಎಂಎಫ್ ಸೇರಿದಂತೆ ಎಲ್ಲ ಇಲಾಖೆಗಳು ಕೈಜೊಡಿಸಿ ಯಶಸ್ವಿಯಾಗಿ ಮಾಡಬೇಕು ಎಂದು ಹೇಳಿದರು.
ವಿಜಯಪುರ ಮತ್ತು ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈರನಗೌಡ ಕರಿಗೌಡ್ರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೂ ಹಾಲು ಉತ್ಪಾದಕರ ಸಂಘಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಡಾ. ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ಸುಭಾಷ ಕನ್ನೂರ ಮತ್ತು  ವೀರಣ್ಣ ರೊಟ್ಟಿ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುಂಚೆ ವಿಜಯಪುರ- ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಗೊಣಸಗಿ ರೈತರೊಂದಿಗೆ ಕ್ಷೀರ ಯೋಜನೆಯ ಕುರಿತು ಸಂವಾದ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net