

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ತಂದೆ ಕುರಿತು ಅವಹೇಳನ ಮಾಡುವುದು, ಸಂವಿಧಾನದ ಪ್ರತಿ ಹಿಡಿದು ರಸ್ತೆ ಮೇಲೆಲ್ಲ ಉರುಳಾಡುವುದು, ಸ್ವಂತ ಪಕ್ಷವಿದ್ದರೂ ಸಿಜೆಪಿಯಂಥ ಅನಧಿಕೃತ ಪಕ್ಷಕ್ಕೆ ಬೆಂಬಲ ನೀಡುವುದು, ಅರಾಜಕತೆ ಸೃಷ್ಠಿಸುವ ಪ್ರಯತ್ನದಲ್ಲಿ ತೊಡಗಿರುವುದನ್ನು ಗಮನಿಸಿದರೆ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರಲ್ಲಿ ಖಿನ್ನತೆಯ ಆವರಿಸಿರುವ ಸಾಧ್ಯತೆ ಕಂಡು ಬರುತ್ತಿದೆ. ಹೀಗಾಗಿ ಕೂಡಲೇ ಚಿಕಿತ್ಸೆ ನೀಡುವುದು ಅಗತ್ಯ’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶ ಕಂಡ ಅಪ್ರತಿಮ ನಾಯಕ. ಪ್ರಪಂಚವೇ ಇಂದು ಅವರನ್ನು ವಿಶ್ವ ಗುರು ಎಂದು ಸಂಬೋಧಿಸುತ್ತಿವೆ. ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಕಾಂಗ್ರೆಸ್ ನಾಯಕರು ವೈಯಕ್ತಿಕ ತೇಜೋವಧೆ ನಡೆಸಿದ್ದಾರೆ. ಈ ಹಿಂದೆ ಅವರ ತಾಯಿ ಅವರ ಕುರಿತು ಹೀಗಳೆದಿದ್ದರು. ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರದ ಕಾರ್ಯಕ್ರಮವೊಂದರದಲ್ಲಿ ಭಾಷಣ ಮಾಡುತ್ತಾ ‘ಮೋದಿ ಅವರ ಅಪ್ಪನೂ ಹೋಗಬೇಕಾಗುತ್ತದೆ’ ಎಂಬ ಪದ ಬಳಸಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದಿದ್ದಾರೆ.
‘ಸತತ ಸೋಲುಗಳಿಂದಾಗಿ ಮಾನಸಿಕವಾಗಿ ಕುಗ್ಗಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ವರ್ತನೆ ಗಮನಿಸಿದರೆ ಖಿನ್ನತೆಯ ಲಕ್ಷಣಗಳು ಕಂಡು ಬರುತ್ತಿವೆ. ಅವರು ಮಾನಸಿಕ ಸ್ಥಿತಿಮಿತತೆ ಕಳೆದುಕೊಂಡಂತೆ ಕಾಣುತ್ತಿದೆ. ಇತ್ತೀಚೆಗಂತೂ ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂಬ ಭ್ರಮೆಯಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮೋದಿ ಅವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಪ್ರಧಾನಿ ಮೋದಿ ಅವರು ಇಂಥ ಆರೋಪಗಳಿಗೆ ಕುಗ್ಗುವ-ಜಗ್ಗುವ ವ್ಯಕ್ತಿ ಅಲ್ಲ’ ಎಂದಿದ್ದಾರೆ.
‘ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಆಶಯಗಳನ್ನೇ ಕೊಂದಿರುವ ಗಾಂಧಿ ಮನೆತನ ಇದೀಗ ಅದೇ ಸಂವಿಧಾನದ ಪ್ರತಿಗಳನ್ನು ಹಿಡಿದು ಬೀದಿ ಬದಿಯಲ್ಲಿ ಉರುಳಾಡುವ ಸ್ಥಿತಿ ನಿರ್ಮಾಣವಾಗಿದೆ. ಅಂದು ಸಂವಿಧಾನದ ರಕ್ಷಣೆಗೆ ನಿಂತಿದ್ದರೆ ಇಂದು ರಸ್ತೆ ಮೇಲೆ ಬಿದ್ದು ಹೊರಳಾಡುವ ಸ್ಥಿತಿ ಬರುತ್ತಿರಲಿಲ್ಲ. ಈ ದೇಶದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಚಿನ್ನದ ಚಮಚಾ ಬಾಯಲ್ಲಿ ಇರಿಸಿಕೊಂಡು ವಿದೇಶದಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿದ್ದ ರಾಹುಲ್ ಗಾಂಧಿಗಾಗಲಿ, ಪ್ರಿಯಾಂಕಾ ಗಾಂಧಿಗಾಗಲಿ ಈ ದೇಶದ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳ ಪರಿಜ್ಞಾನವೇ ಇಲ್ಲ. ಇದೀಗ ಅವರೊಂದಿಗೆ ಕೂಡಿ ಮಲ್ಲಿಕಾರ್ಜುನ ಖರ್ಗೆ ಅವರು ಸಹ ತಮ್ಮತನ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಮೋದಿ ಅವರ ತಂದೆಯ ಕುರಿತಾದ ಅವಹೇಳನವೇ ಸಾಕ್ಷಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.