ರಾಜ್ಯದಲ್ಲಿ ಹೆಚ್ಚಿದ ದರೋಡೆ ಪ್ರಕರಣ, ಸಿದ್ರಾಮಣ್ಣನ ಸರ್ಕಾರ ಸಂಪೂರ್ಣ ವಿಫಲ ಎಂದ ಸಂಸದ ರಮೇಶ ಜಿಗಜಿಣಗಿ

RAMESH-JIGAJINAGI
RAMESH-JIGAJINAGI
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಬ್ಯಾಂಕ್ ದರೋಡೆ ಪ್ರಕರಣ
  • ಸಿದ್ರಾಮಣ್ಣನ ಸರ್ಕಾರ ಸಂಪೂರ್ಣ ವಿಫಲ
  • ಪರಮೇಶ್ವರ ಒಬ್ಬ ‘ವೇಸ್ಟ್ ಮಿನಿಸ್ಟರ್’
ವಿಜಯಪುರ: ರಾಜ್ಯದಲ್ಲಿ ಬ್ಯಾಂಕ್ ದರೋಡೆ, ಕಳ್ಳತನ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚಾಗಿದ್ದು, ಆಡಳಿತ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಉತ್ತಮ ಆಡಳಿತ ನೀಡುವಲ್ಲಿ ಸಿದ್ರಾಮಣ್ಣನ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು.
ಬೆಂಗಳೂರಿನಲ್ಲಿ ಹಾಡಹಗಲೇ ಬ್ಯಾಂಕ್ ಹಣ ದೋಚಲಾಗಿದೆ. ಸಿದ್ರಾಮಣ್ಣನ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದಲ್ಲಿ ರಾಜ್ಯದ ನಾಲ್ಕೈದು ಕಡೆ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್‌ಗಳ ದರೋಡೆ ನಡೆದಿದೆ.
ವಿಜಯಪುರ ಜಿಲ್ಲೆಯೊಂದರಲ್ಲೇ ಎರಡು ಬ್ಯಾಂಕ್‌ಗಳಲ್ಲಿ ದರೋಡೆ ನಡೆದಿದೆ. ರಾಜ್ಯದ ಇತರ ಭಾಗಗಳಲ್ಲಿಯೂ ಇಂಥ ದರೋಡೆ ನಡೆದಿದ್ದು, ರಾಜ್ಯದ ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ಗೃಹ ಸಚಿವ ಪರಮೇಶ್ವರಣ್ಣ ಖಾತೆ ನಿಭಾಯಿಸುವಲ್ಲಿ ಅಸಮರ್ಥರಾಗಿದ್ದಾರೆ ಎಂದು ಜಿಗಜಿಣಗಿ ಹರಿಹಾಯ್ದಿದ್ದಾರೆ.
ದಿನ ಬೆಳಗಾದರೆ ಈ ರೀತಿಯ ಬೆಚ್ಚಿ ಬೀಳಿಸುವ ಘಟನೆಗಳು ಸಾಮಾನ್ಯವಾಗಿವೆ. ಪ್ರತಿಯೊಬ್ಬರೂ ಮನೆಯಿಂದ ಹೊರಬರಲು ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ಉಗ್ರಗಾಮಿಗಳಿಗೆ ಜೈಲಿನಲ್ಲಿ ಆತಿಥ್ಯ ನೀಡಲಾಗುತ್ತಿದೆ, ಹೊರಗಡೆ ಅಪರಾಧಿಕ ಕೃತ್ಯಗಳು ವ್ಯಾಪಕವಾಗಿವೆ. ಇವುಗಳನ್ನು ತಡೆಗಟ್ಟುವಲ್ಲಿ ರಾಜ್ಯದ ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಪರಮೇಶ್ವರ ಒಬ್ಬ ‘ವೇಸ್ಟ್ ಮಿನಿಸ್ಟರ್’ ಆಗಿದ್ದಾರೆಂದು ಜಿಗಜಿಣಗಿ ಲೇವಡಿ ಮಾಡಿದ್ದಾರೆ. ಅಲ್ಲದೇ ಕೂಡಲೇ ಗೃಹ ಖಾತೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳು ಎದುರಿಸುತ್ತಿದ್ದರೂ ಸಹ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕೇವಲ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆ, ಅವರ ಈ ದರಿದ್ರ ನಡವಳಿಕೆಯಿಂದ ಜನತೆ ನರಕಯಾತನೆ ಅನುಭವಿಸುವಂತಾಗಿದೆ ಎಂದರು.
ರಾಜ್ಯದಲ್ಲಿ ರಸ್ತೆಗಳು ಹಾಳಾಗಿ ಹೋಗಿವೆ, ಈ ಬಗ್ಗೆ ಸಣ್ಣ ಬಾಲಕನೋರ್ವ ಪ್ರಧಾನಿಗೆ ಪತ್ರ ಬರೆಯುವಂತಾಗಿದೆ. ಬಿಹಾರ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗುವುದಂತೂ ಸತ್ಯ, ರಾಜ್ಯದಲ್ಲಿ ಇನ್ನಷ್ಟೂ ಕಾನೂನು-ಸುವ್ಯವಸ್ಥೆ ಬಿಗಡಾಯಿಸುವ ಮುನ್ನವೇ ಎಚ್ಚೆತ್ತುಕೊಳ್ಳಿ, ಕೇವಲ ಒಂದು ಸಮುದಾಯ ಖುಷಿ ಪಡಿಸಲು ಉಳಿದ ಸಮಾಜಗಳನ್ನು ತುಳಿಯುವ ಹಾಗೂ ಅವರನ್ನು ತೊಂದರೆಗೆ ತಳ್ಳುವ ಕೆಲಸ ಮಾಡಬೇಡಿ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net