ಕೈ ಪಕ್ಷದ ಆಡಳಿತಕ್ಕೆ ಎರಡೂವರೆ ವರ್ಷ ಭರ್ತಿ, ಹಗರಣ ಭ್ರಷ್ಟಾಚಾರ ದರೋಡೆಯೇ ಕಾಂಗ್ರೆಸ್ ಸಾಧನೆ ಎಂದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಂಜೀವ ಐಹೊಳೆ, ಈರಣ್ಣ ರಾವೂರ ಇದ್ದಾರೆ.
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಂಜೀವ ಐಹೊಳೆ, ಈರಣ್ಣ ರಾವೂರ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಸಾಧನೆ
  • ಸಂಸದ ರಮೇಶ ಜಿಗಜಿಣಗಿ ಲೇವಡಿ
  • ಭೂ ಹಗರಣ, ಭ್ರಷ್ಟಾಚಾರ, ದರೋಡೆ ಪ್ರಕರಣಗಳೇ ಕಾಂಗ್ರೆಸ್ ಸಾಧನೆ
ವಿಜಯಪುರ: ಭೂ ಹಗರಣ, ಭ್ರಷ್ಟಾಚಾರ, ದರೋಡೆ ಪ್ರಕರಣಗಳೇ ರಾಜ್ಯ ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಸಾಧನೆ ಎಂದು ಸಂಸದ ರಮೇಶ ಜಿಗಜಿಣಗಿ ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದ್ದು, ಎಲ್ಲೆಡೆ ಸಂಭ್ರಮಾಚರಿಸಿಕೊಳ್ಳುತ್ತಿದೆ. ಆದರೆ, ಈ ಎರಡೂವರೆ ವರ್ಷದ ಸಾಧನೆ ಗಮನಿಸಿದರೆ ಕಂಡಿದ್ದು ಕೇವಲ ಹಗರಣ, ಭ್ರಷ್ಟಾಚಾರ ಮತ್ತು ದರೋಡೆ ಪ್ರಕರಣಗಳು ಮಾತ್ರ. ಅಧಿಕಾರಿಗಳ ಅನವಶ್ಯಕ ವರ್ಗಾವಣೆ, ಜಾತಿ ಸಮೀಕ್ಷೆಯಂಥ ವ್ಯರ್ಥ ಪ್ರಲಾಪಗಳು ಬಿಟ್ಟರೆ ಕಾಂಗ್ರೆಸ್ ಜನಪರ ಆಡಳಿತ ಮರೀಚಿಕೆಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಭೂ ಒಡೆತನ ಯೋಜನೆಯಲ್ಲಾದ ಹಗರಣಗಳು ಮಾರ್ದನಿಸಿದವು. ಆಶ್ರಯ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಲು ಲಂಚ ಕೊಡಬೇಕೆಂದು ತಮ್ಮದೇ ಪಕ್ಷದ ಶಾಸಕರು ಆಡಿದ ಮಾತುಗಳು ಎಲ್ಲೆಡೆ ಪ್ರತಿಧ್ವನಿಸಿದವು.
ರಾಜ್ಯದೆಲ್ಲೆಡೆ ಹಾಡುಹಗಲೇ ಘಟಿಸಿದ ಕೊಲೆ, ಸುಲಿಗೆ ಮತ್ತು ದರೋಡೆ ಪ್ರಕರಣಗಳು ಜನರ ನಿದ್ದೆಗೆಡಿಸಿದವು. ವಿಜಯಪುರ ಜಿಲ್ಲೆಯಲ್ಲಿಯೇ ಎರಡು ಬ್ಯಾಂಕ್‌ಗಳ ದರೋಡೆ ದೊಡ್ಡ ಪ್ರಮಾಣದಲ್ಲಾಯಿತು. ರಾಜ್ಯದಲ್ಲಿ ಇಂಥ ಒಟ್ಟು ಐದು ಪ್ರಮುಖ ದರೋಡೆ ಪ್ರಕರಣಗಳು ಜನರ ನಿದ್ದೆಗೆಡಿಸಿದವು. ದಲಿತರಿಗೆ ಮೀಸಲಾಗಿದ್ದ ಎಸ್‌ಸಿಪಿ-ಟಿಎಸ್‌ಪಿಯ ಆರು ಸಾವಿರ ಕೋಟಿ ರೂಪಾಯಿ ದುರುಪಯೋಗವಾಯಿತು. ದಲಿತರ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳಲಾಯಿತು. ಇವುಗಳೇ ಕಾಂಗ್ರೆಸ್ ಸಾಧನೆ ಎಂದು ಲೇವಡಿ ಮಾಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜ್‌ಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದ್ದು, ಅದಕ್ಕೆ ತಮ್ಮದೂ
ವಿರೋಧ ವ್ಯಕ್ತಪಡಿಸಿಯಾಗಿದೆ. ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯಲ್ಲಿ ಕಾಲೇಜ್ ಸ್ಥಾಪಿಸಬಾರದೆಂಬುದು ನಮ್ಮ ಒತ್ತಾಯ ಕೂಡ ಆಗಿದೆ. ಈ ಬಗ್ಗೆ ಈಗಾಗಲೇ ತಮ್ಮ ನಿಲುವು ಪ್ರಕಟಿಸಲಾಗಿದ್ದು, ಈ ಕುರಿತು ಸಂಸತ್‌ನಲ್ಲಿಯೂ ಚರ್ಚಿಸುವುದಾಗಿ ಜಿಗಜಿಣಗಿ ತಿಳಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಆಲಮೇಲದಲ್ಲಿ ತೋಟಗಾರಿಕೆ ಕಾಲೇಜ್ ಘೋಷಣೆಯಾಗಿದೆ. ಎರಡು ಬಜೆಟ್ ಮಂಡನೆಯಾದರೂ ಈವರೆಗೂ ಪ್ರಾರಂಭವಾಗಿಲ್ಲ. ಇಂಥ ಅನೇಕ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ವಿಜಯಪುರ ಜಿಲ್ಲೆಯ ತೋಟಗಾರಿಕೆ ಬೆಳೆಗಳು ದೇಶ- ವಿದೇಶಗಳಲ್ಲಿಯೂ ಪ್ರಸಿದ್ದಿ ಪಡೆದಿವೆ. ದ್ರಾಕ್ಷಿ, ದಾಳಿಂಬೆ, ನಿಂಬೆ ಹೀಗೆ ಅನೇಕ ಫಲಗಳು ಹೆಸರುವಾಸಿಯಾಗಿವೆ. ಆದರೆ ಕಷ್ಟಪಟ್ಟು ಬೆಳೆಯುವ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಹೀಗಾಗಿ 2016-17 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದ್ರಾಕ್ಷಿ ಬೆಳೆಗಾರರಿಗಾಗಿ ವಿಮೆ ಸೌಲಭ್ಯ ಜಾರಿಗೊಳಿಸಿದರು. ರೈತರು ವಿಮೆ ಕಂತು ಕಟ್ಟುತ್ತಾ ಬಂದರೂ 2023-24 ರ ವಿಮೆ ಹಣ ಈವರೆಗೂ ಪಾವತಿಯಾಗಿಲ್ಲ ಎಂದರು.
ಮುಖಂಡರಾದ ಸಂಜೀವ ಐಹೊಳೆ, ಈರಣ್ಣ ರಾವೂರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net