ಕೇವಲ 2500 ರೂಪಾಯಿ ಪರಿಹಾರ ಘೋಷಣೆ, ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ ಎಂದ ಸಂಸದ ರಮೇಶ ಜಿಗಜಿಣಗಿ

ಸರ್ಕಾರದ ಖಜಾನೆ ಖಾಲಿ ಖಾಲಿ * ರೈತರ ಕೈಗೆ ಚೆಂಬು-ತೆಂಗಿನ ಚಿಪ್ಪು
RAMESH JIGAJINAGI
ರಮೇಶ ಜಿಗಜಿಣಗಿ, ಸಂಸದರುRAMESH JIGAJINAGI
Published on: 

ವಿಜಯಪುರ: ‘ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರ ನೆರವಿಗೆ ಧಾವಿಸಲಾಗದಂತಹ ಅಸಹಾಯಕ ಸ್ಥಿತಿಗೆ ತಲುಪಿದೆ. ಇದೀಗ ಕೇವಲ 2500 ರೂಪಾಯಿ ಪರಿಹಾರ ಘೋಷಿಸುವ ಮೂಲಕ ಈ ಸರ್ಕಾರ ಪಾಪರ್ ಆಗಿದೆ ಎಂಬುದನ್ನು ಸಾಬೀತುಪಡಿಸಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶಭರಿತ ಆರೋಪ ಹೊರಹಾಕಿದ್ದಾರೆ.

‘ರಾಜ್ಯದಲ್ಲಿ ಮಳೆ ಪ್ರಮಾಣ ಸಂಪೂರ್ಣ ಕ್ಷೀಣಿಸಿದೆ. ಬರದಿಂದ ಜನ ತತ್ತರಿಸಿದ್ದಾರೆ. ಇಂಥ ಸಂದರ್ಭದಲ್ಲಿ ನೆರವಿಗೆ ಧಾವಿಸುವುದನ್ನು ಬಿಟ್ಟು ಕಾಲ ಹರಣ ಮಾಡುತ್ತಿದೆ. ಬರ ಘೋಷಣೆ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಿದ್ದಲ್ಲದೇ ಇದೀಗ ಕೇವಲ 2500 ರೂಪಾಯಿ ಪರಿಹಾರ ಘೋಷಿಸಿರುವುದು ನಾಚಿಕೆಗೇಡು’ ಎಂದಿದ್ದಾರೆ.

‘ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಜನರ ಕೈಗೆ ಚೆಂಬು ಕೊಟ್ಟಿದೆ. ಅಭಿವೃದ್ಧಿ ಕೇಳಿದವರ ಕೈಗೆ ತೆಂಗಿನ ಚಿಪ್ಪು ನೀಡುತ್ತಿದೆ. ಜನರ ತೆರಿಗೆ ಹಣ ನುಂಗಿ ನೀರು ಕುಡಿದ್ದಲ್ಲದೇ ಇದೀಗ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದತ್ತ ಕೈಚಾಚುತ್ತಿದೆ. ಅಕ್ರಮ, ಭ್ರಷ್ಟಾಚಾರ, ಹಗರಣಗಳಲ್ಲಿ ಮಿಂದೇಳುತ್ತಿರುವ ಈ ಸರ್ಕಾರದಲ್ಲ ಖಜಾನೆ ಖಾಲಿಯಾಗಿದೆ. ಈ ಸರ್ಕಾರ ಮುಂದಿನ ಆರು ತಿಂಗಳು ಕಠಿಣ ಪರಿಸ್ಥಿತಿ ಇದೆ ಎಂದು ಆರ್ಥಿಕ ಇಲಾಖೆಯೇ ತಿಳಿಸಿದೆ. ಹೀಗಾಗಿ ಇರುವ ಯೋಜನೆಗಳನ್ನು ನಿಭಾಯಿಸಲಾಗದ ಸ್ಥಿತಿಗೆ ತಲುಪಿದೆ. ಕೇಂದ್ರ ಸಹಾಯ ಹಸ್ತ ಚಾಚಿದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ನಾಚಿಕೆಯಾಗಬೇಕು’ ಎಂದಿದ್ದಾರೆ.

‘ಬರ ಘೋಷಣೆಗೆ ಸಂಬಂಧಿಸಿದಂತೆ ಬಿಜೆಪಿ ಒತ್ತಟ್ಟಿಗಿರಲಿ ಕಾಂಗ್ರೆಸ್‌ನ ಶಾಸಕರುಗಳೇ ಸಿಡಿದೇಳುತ್ತಿದ್ದಾರೆ. ತಮ್ಮದೇ ಸರ್ಕಾರದ ನಡೆಗೆ ಬೇಸತ್ತು ರಾಜೀನಾಮೆ ಪತ್ರ ಬೀಸಾಕುತ್ತಿದ್ದಾರೆ. ಇಂಥ ಸ್ಥಿತಿ ಹಿಂದೆಂದೂ ಈ ರಾಜ್ಯದ ಜನ ಕಂಡಿರಲಿಲ್ಲ. ಕೇವಲ ಬರ ಘೋಷಣೆಗೆ ಇಷ್ಟೆಲ್ಲ ಸರ್ಕಸ್ ಮಾಡಿರುವ ಕಾಂಗ್ರೆಸ್ ಸರ್ಕಾರ ಪರಿಹಾರ ವಿಷಯದಲ್ಲಿಯೂ ಅನ್ಯಾಯ ಮಾಡಿತು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರವಾಹ ಉಂಟಾದ ಸಂದರ್ಭ ಹಿಂದೆ ಮುಂದೆ ನೋಡದೇ ತುರ್ತಾಗಿ ಮನೆ ನಿರ್ವಹಣೆಗೆಂದು 10 ಸಾವಿರ ರೂಪಾಯಿ ಪರಿಹಾರ ಹಣ ನೀಡಲಾಯಿತು. ಆದರೆ, ಭೀಕರ ಬರದಲ್ಲಿಯೂ ರಾಜ್ಯ ಸರ್ಕಾರ ಕೇವಲ 2500 ರೂಪಾಯಿ ಘೋಷಿಸಿರುವುದು ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಈ ಕೂಡಲೇ ರೈತರಿಗೆ ತುರ್ತಾಗಿ 50 ಸಾವಿರ ರೂಪಾಯಿ ಪರಿಹಾರ ಕೊಡಬೇಕು. ಬಳಿಕ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಹಾನಿಯಾದ ಬೆಳೆಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬರದ ನೆಪ ಹೇಳಿಕೊಂಡು ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸಬಾರದು. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಟಾನದೊಂದಿಗೆ ಘೋಷಿತ ಎಲ್ಲ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಬರಪರಿಹಾರ ಕೂಡ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬರದ ನೆಪವೊಡ್ಡಿ ಬೆಲೆ ಏರಿಕೆಗೆ ಮುಂದಾಗಬಾರದು. ಹಾಗೊಂದು ವೇಳೆ ಈ ಸರ್ಕಾರ ಜನರಿಗೆ ಗಾಯದ ಮೇಲೆ ಬರೆ ಎಳೆಯಲು ಮುಂದಾದರೆ ತಕ್ಕ ಪಾಠ ನಿಶ್ಚಿತ’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net