ಮೋದಿ ವಿಫಲತೆಯ-ಸಿದ್ದು ಸಾಧನೆಯ ಸರದಾರ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಪ್ರತಿಕ್ರಿಯೆ

ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ರವಿ ಬಿರಾದಾರ, ಫಯಾಜ್ ಕಲಾದಗಿ ಇದ್ದರು.
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ರವಿ ಬಿರಾದಾರ, ಫಯಾಜ್ ಕಲಾದಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ರಮೇಶ ಜಿಗಜಿಣಗಿಗೆ ಪ್ರತಿಕ್ರಿಯೆ
  • ರಾಜ್ಯ ಸರ್ಕಾರದ ಸಾಧನೆ ಕುರಿತು ಮನವರಿಕೆ
  • ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಟೀಕೆ
ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಾಧನೆ ಕುರಿತು ಲೇವಡಿ ಮಾಡಿರುವ ಸಂಸದರ ರಮೇಶ ಜಿಗಜಿಣಗಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಅವರು ‘ಪ್ರಧಾನಿ ನರೇಂದ್ರ ಮೋದಿ ವಿಫಲತೆಯ ಸರದಾರ-ಸಿದ್ದರಾಮಯ್ಯ ಸಾಧನೆಯ ಸರದಾರ’ ಎಂಬ ಘೋಷವಾಕ್ಯ ಮೊಳಗಿಸಿದರು.
ಈಚೆಗೆ ತುಮಕೂರಿನಲ್ಲಿ ನಡೆದ ಕರ್ನಾಟಕ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ಕುರಿತು ಸಂಸದ ರಮೇಶ ಜಿಗಜಿಣಗಿ ಟೀಕಿಸಿದ್ದಾರೆ. ವೈಫಲ್ಯಗಳ ಹಾರ ಹಾಕುವುದಾಗಿ ಹೇಳಿದ್ದಾರೆ. ಆ ಹಾರ ಹಾಕಬೇಕಿರುವುದು ಪ್ರಧಾನಿ ಮೋದಿ ಅವರಿಗೆ ಎಂಬುದನ್ನು ಸಂಸದರು ಮರೆಯಬಾರದು. ಸಂಸದರು ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಏನೆಂಬುದನ್ನು ತಿಳಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸವಾಲೆಸೆದರು.
ಸಿದ್ದರಾಮಯ್ಯ ಸರ್ಕಾರದ ಸಾಧನೆ ಅಪಾರ. ಈ ಹಿಂದಿನ 2013-18 ರ ಅವಧಿ ಹಾಗೂ ಈಗಿನ ಅವಧಿಯಲ್ಲಿ ಅನೇಕ ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ಅವರ ಪಂಚಗ್ಯಾರಂಟಿ ಜನರ ಮನಗೆದ್ದಿವೆ. ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಮಾಡಿದ ಸಾಧನೆ ಏನು? ಎಂದು ಪ್ರಶ್ನಿಸಿದರು.
ಈ ಹಿಂದೆ ಆಧಾರ್ ಕಾರ್ಡ್ ವಿರೋಧಿಸಿದ ಮೋದಿಯೇ ಅಧಿಕಾರಕ್ಕೆ ಬರುತ್ತಿದ್ದಂತೆ ಆಧಾರ್ ಕಾರ್ಡ್ ಜಾರಿಗೊಳಿಸಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿ ಈವರೆಗೂ ಆ ಬೇಡಿಕೆ ಈಡೇರಿಸಿಲ್ಲ. ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದರು, ಪೆಟ್ರೋಲ್-ಡೀಸೆಲ್ ಬೆಲೆ ತಗ್ಗಿಸುವ ಭರವಸೆ ನೀಡಿದರು, ಆದರೆ ಇಂದು ಪರಿಸ್ಥಿತಿ ಏನಾಗಿದೆ? ಕೇವಲ ಒಂದೇ ವಾರದಲ್ಲಿ ಎರಡು ಬಾರಿ ಬೆಲೆ ಏರಿಕೆಯಾಗಿದೆ ಎಂದರು.
ನರೇಂದ್ರ ಮೋದಿ ಅವರು ಪಿಎಂ ಕೇರ್ ಫಂಡ್ ಮಾಹಿತಿ ನೀಡುತ್ತಿಲ್ಲ, ಭಯೋತ್ಪಾದನೆಗೆ ಕಡಿವಾಣ ಹಾಕಲಿಲ್ಲ, ಪುಲ್ವಾಮಾದಲ್ಲಿ ದಾಳಿ ನಡೆದಾಗ ಎಲ್ಲೋ ಫೋಟೋ ಶೂಟ್‌ನಲ್ಲಿ ತೊಡಗಿಸಿಕೊಂಡಿದ್ದರು. ಈವರೆಗೂ ಆ ದಾಳಿ ಕುರಿತು ಸ್ಪಷ್ಟತೆ ಇಲ್ಲ, ಪಹಲ್ಗಾಮ್ ದಾಳಿ ತಡೆಯಲಾಗಲಿಲ್ಲ, ಇದೆಲ್ಲ ವಿಫಲತೆ ಅಲ್ಲವೇ? ಐದು ಬಾರಿ ನೀಟ್ ಪತ್ರಿಕೆ ಸೋರಿಕೆಯಾದವು, ಬಿಜೆಪಿ ಆಡಳಿತ ರಾಜ್ಯದಲ್ಲೇ ಹೀಗಾಗಿದೆ. ಬಿಜೆಪಿ ಕಾರ್ಯಕರ್ತರೇ ಅದರಲ್ಲಿ ಭಾಗಿಯಾಗಿರುವುದು ಕಂಡು ಬರುತ್ತಿದ್ದಾರೆ. ಅರೆಸ್ಟ್ ಆದವರು ಧರ್ಮೇಂದ್ರ ಪ್ರಧಾನ ಅವರೊಂದಿಗೆ ಫೋಟೋ ತೆಗೆಯಿಸಿಕೊಳ್ಳುತ್ತಾರೆ, ರಫೆಲ್ ಹಗರಣದ ಫೈಲ್ ಕಳೆದುಹೋದರೂ ನ್ಯಾಯಾಲಯ ಅದನ್ನು ಮಾಫಿ ಮಾಡಿತು. ಇದೆಲ್ಲ ಬಿಜೆಪಿಯ ಸಾಧನೆಗಳೇ ಎಂದು ಲೇವಡಿ ಮಾಡಿದರು.
ಮುಖಂಡರಾದ ರವಿ ಬಿರಾದಾರ, ಫಯಾಜ್ ಕಲಾದಗಿ ಇದ್ದರು.

ಜಿಗಜಿಣಗಿ ಸಿಎಂ ಆದರೆ ಖುಷಿ

ಕರ್ನಾಟಕದ ಸಿಎಂ ಆಗಬೇಕೆಂಬುದು ಸಂಸದ ರಮೇಶ ಜಿಗಜಿಣಗಿ ಅವರ ಮನದಿಂಗತ. ಈ ಕಾರಣಕ್ಕಾಗಿಯೇ ಅವರು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸಿಎಂ ಆದರೆ ಖಂಡಿತ ನಮಗೆ ಖುಷಿ ಇದೆ. ಏಕೆಂದರೆ ನಮ್ಮ ಜಿಲ್ಲೆಯ ದಲಿತ ನಾಯಕರೊಬ್ಬರು ಸಿಎಂ ಆದರೆ ನಮಗೂ ಖುಷಿ ವಿಚಾರವೇ. ಆದರೆ, ಬಿಜೆಪಿಯಲ್ಲಿ ಅದು ಸಾಧ್ಯವಾದೀತೇ? ಎಂದು ಗಣಿಹಾರ ಕಾಲೆಳೆದರು.

ಜಿಗಜಿಣಗಿ ಏಳನೇ ಬಾರಿ ಲೋಕಸಭೆ ಸದಸ್ಯರು. ಸೌಮ್ಯ ಮತ್ತು ಸಾತ್ವಿಕ ರಾಜಕಾರಣಿ. ಆದರೆ, ಈಚೆಗೆ ಅವರು ನೀಡುತ್ತಿರುವ ಹೇಳಿಕೆ ಗಮನಿಸಿದರೆ ರಾಜ್ಯ ರಾಜಕಾರಣಕ್ಕೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಹಾಗಂತ ವಿನಾಕಾರಣ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದರು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net