ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ, ನವೆಂಬರ್‌ಗೆ ತೆಗೆಯುತ್ತಾರೆ ಎಂದ ಶಾಸಕ ಯತ್ನಾಳ

ಜೆಸಿಬಿ ಅಧಿಕಾರಕ್ಕೆ ಬರುವುದು ನಿಶ್ಚಿತ * ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಿದ್ದಾರೆ ಫಿಕ್ಸ್
ವಿಜಯಪುರ ನಗರದ ಗಗನ ಮಹಲ್ ಬಳಿ ನಡೆದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಮುಖಂಡರಾದ ಎಂ.ಎಸ್. ರುದ್ರಗೌಡರ, ಶಂಕರ ಹೂಗಾರ ಇತರರಿದ್ದಾರೆ.
ವಿಜಯಪುರ ನಗರದ ಗಗನ ಮಹಲ್ ಬಳಿ ನಡೆದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಮುಖಂಡರಾದ ಎಂ.ಎಸ್. ರುದ್ರಗೌಡರ, ಶಂಕರ ಹೂಗಾರ ಇತರರಿದ್ದಾರೆ.
Published on: 

ವಿಜಯಪುರ: ‘ಹೊರಗಡೆ ಪೂಜ್ಯ ತಂದೆಯವರು ಎನ್ನುವುದು, ಮನೆಯಲ್ಲಿ ಮುದಿಗೂಬೆ ಎಂದು ಕರೆಯುವುದು, ತಮ್ಮ ತಂದೆಯದ್ದೇ ಸಿಡಿ ಮಾಡಿ ಬ್ಲಾೃಕ್‌ಮೇಲ್ ಮಾಡುವ ನಾ’ಲಾಯಕನೇ ನಾಲಾಯಕರ ಗುರು, ಈತನನ್ನು ನವೆಂಬರ್‌ಗೆ ಕಿತ್ತೆಸೆಯುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇಲ್ಲಿನ ಗಗನ ಮಹಲ್ ಮುಂಭಾಗದಲ್ಲಿ ‘ರೈತರಿಗೆ ಬರಪರಿಹಾರ ನೀಡುವುದು, ಎಸ್‌ಐಆರ್ ಪ್ರಕ್ರಿಯೆಯಲ್ಲಾದ ಲೋಪ ದೋಷಗಳ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ಕೇಂದ್ರ ಚುನಾವಣೆ ಆಯುಕ್ತ ಜ್ಞಾನೇಶಕುಮಾರ ತೇಜೋವಧೆ ಖಂಡಿಸಿ’ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಅವರು ಮಾತನಾಡಿದರು.

‘ರಾಜ್ಯದಲ್ಲಿ ವಿರೋಧ ಪಕ್ಷ ಸತ್ತಿದೆ. ಅವರಿಗೆ ಅಂಜಿಕೆ ಇದೆ. ಏನಾದರೂ ತೆಗೆದರೆ ಏನು ಮಾಡೋದು ಎಂಬ ಅಂಜಿಕೆ ಇದೆ. ಹೀಗಾಗಿ ನಾವು ಹೋರಾಟ ಮಾಡುತ್ತೇವೆ. ಶಕ್ತಿ ಪ್ರದರ್ಶನ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಸಿಬಿ ಸರ್ಕಾರ ಬರುತ್ತದೆ. ವಿಜಯಪುರದ ಎಂಟು ಕ್ಷೇತ್ರಗಳ ಅಭ್ಯರ್ಥಿಗಳು ಸಿದ್ಧರಾಗಿದ್ದಾರೆ. ಹಂತ ಹಂತವಾಗಿ ಘೋಷಣೆ ಮಾಡುತ್ತೇವೆ’ ಎಂದರು.

ವಿಜಯೇಂದ್ರ ಅವರನ್ನು ಪರೋಕ್ಷವಾಗಿ ನಾಲಾಯಕ ಎಂದು ಸಂಬೋಧಿಸಿದ ಯತ್ನಾಳರು, ‘ನಮ್ಮ ಕಾರ್ಪೋರೇಟರ್‌ಗಳನ್ನು ನಾಲಾಯಕ್ ಎಂದು ಕರೆಯುವ ನೀನು ನಾಲಾಯಕರ ಗುರು’ ಎಂದರು.

ಬಿಜೆಪಿಗೆ ಪುಕ್ಸಟ್ಟೆ ಬಾ ಅಂದ್ರೆ ಹೋಗಲ್ಲ

ದ್ಯ ‘ಕಳ್ಳರು ಆಡಳಿತ ನಡೆಸಿದ್ದಾರೆ, ನೀವು ಐದು ವರ್ಷ, ನಾವು ಐದು ವರ್ಷ, ನೀವು ತಿಂದಿದ್ದನ್ನು ನಾವು ಮುಚ್ಚಿ ಹಾಕುತ್ತೇವೆ ಎಂಬ ರಾಜಿ ಮಾಡಿಕೊಳ್ಳುವ ವ್ಯವಸ್ಥೆ ಸಾಕಾಗಬೇಕು, ಹೊಸ ರಾಜಕೀಯ ವ್ಯವಸ್ಥೆ ಮುನ್ನೆಲೆಗೆ ತರಬೇಕಿದೆ’ ಎಂದು ಯತ್ನಾಳ ಆಶಿಸಿದರು.

‘ಬಿಜೆಪಿಗೆ ಬಾ ಎಂದರೆ ಈ ಸಲ ಪುಕ್ಸಟ್ಟೆ ಹೋಗಲ್ಲ. ಉತ್ತರ ಕರ್ನಾಟಕದಲ್ಲಿ ನಾನು ಹೇಳಿದವರಿಗೆ ಟಿಕೆಟ್ ಕೊಡಬೇಕು. ಹಾಗೆಲ್ಲ ಸುಮ್ಮ ಸುಮ್ಮನೇ ಹೋಗಲ್ಲ. ಕರಾರು ಮಾಡಿ ಹೋಗುವೆ. ಷರತ್ತು ಇಲ್ಲದೇ ಸಾಮಾನ್ಯ ಕಾರ್ಯಕರ್ತನಾಗಿ ಸೇರಿದ್ದೇನೆಂದು ಹೇಳು ಎಂದರೆ ಹೇಳುವ ವ್ಯಕ್ತಿ ನಾನಲ್ಲ’ ಎಂದು ಪ್ರತಿಕ್ರಿಯಿಸಿದರು.

ಸಿಎಂ ನಿಧಿಗೆ ಸಂಬಳ ಘೋಷಣೆ

‘ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ಸರ್ಕಾರ ಭಿಕ್ಷೆ ನೀಡುವಂತೆ 2500 ರೂಪಾಯಿ ಘೋಷಿಸಿದೆ. ಈ ಮೊತ್ತವನ್ನು ಎಂ.ಬಿ. ಪಾಟೀಲರೇ ನೀಡಬಹುದಿತ್ತು. ಸರ್ಕಾರ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿಯಾದರೂ ಪರಿಹಾರ ಘೋಷಿಸಬೇಕು’ ಎಂದು ಯತ್ನಾಳ ಒತ್ತಾಯಿಸಿದರಲ್ಲದೇ ುುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಆರು ತಿಂಗಳ ಸಂಬಳ ನೀಡುವುದಾಗಿ ಘೋಷಿಸಿದರು.

‘ವಿಧಾನ ಸೌಧದಲ್ಲಿ ಹಸಿರು ಶಾಲು ಹಾಕಿಕೊಂಡು ರಕ್ತ ಕುದಿಯುತ್ತದೆ ಎಂದು ಭಾಷಣ ಮಾಡುವವರ ಮೈಯಲ್ಲಿ ರಕ್ತವೇ ಇಲ್ಲ. ಬರ ಘೋಷಣೆ ಮಾಡಿದ್ದಕ್ಕೂ ಮೆರವಣಿಗೆ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದರಲ್ಲದೇ, ‘ಕೆರೆ ತುಂಬಿದ್ದರಿಂದ ಇಂಡಿ ಶಾಸಕರಿಗೆ ಲುಕ್ಸಾನ್ ಆಗಿದೆ. ಏಕೆಂದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ನಿಂತು ಹೋಗಿದೆ’ ಎಂದು ಲೇವಡಿ ಮಾಡಿದರು.

‘ಸರ್ಕಾರ ಬಿಡದಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಕೃಷ್ಣಾ ನೀರಾವರಿ ಯೋಜನೆಗೆ ಹಣ ನೀಡಬೇಕು. ಯುಕೆಪಿ ಭೂಸ್ವಾಧೀನಕ್ಕೆ ಪರಿಹಾರ ಕೊಡಬೇಕು. ತೆಲಂಗಾಣಕ್ಕೆ, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು’ ಎಂದರು.

ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಪ್ರಮುಖರಾದ ದಯಾಸಾಗರ ಪಾಟೀಲ, ಪ್ರಭುಗೌಡ ದೇಸಾಯಿ, ಅಪ್ಪುಗೌಡ ಪಾಟೀಲ ಮನಗೂಳಿ, ಚಂದ್ರು ಚೌಧರಿ, ಎಂ.ಎಸ್. ರುದ್ರಗೌಡರ, ಶಂಕರ ಹೂಗಾರ ಇತರರಿದ್ದರು. ಮೆರವಣಿಗೆಯಲ್ಲಿ ಜೆಸಿಬಿ ಧ್ವಜಗಳು ರಾರಾಜಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net