ಶಾಸಕ ಯಶವಂತರಾಯಗೌಡ ಪಾಟೀಲ ಸಂಕಲ್ಪ, ರಾಜೀನಾಮೆ ನಿರ್ಧಾರ ವಾಪಸ್ ಬೆನ್ನಲ್ಲೇ ಪಣ, ಇನ್ನೆಂದೂ ನಿರೀಕ್ಷೆಯನ್ನೇ ಇಟ್ಟುಕೊಳ್ಳಲಾರೆ...!

ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರದ ಜನರೇ ನನ್ನ ಹೈಕಮಾಂಡ್
  • ಅವರ ಮನೆ ಬಾಗಿಲಿಗೆ ಹೋಗುವೆ
  • ಯಾರ ಬಳಿಗೂ ಇನ್ನು ಹೋಗಲಾರೆ
  • ನಿರೀಕ್ಷೆ ಇಲ್ಲದೇ ಕಾರ್ಯನಿರ್ವಹಿಸುವೆ

ವಿಜಯಪುರ:

‘ರಾಜ್ಯ ಹಾಗೂ ರಾಷ್ಟ್ರೀಯ ನಾಯ

ಕರ ಮನವೊಲಿಕೆ, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಒತ್ತಾಸೆ, ಗುರು-ಹಿರಿಯರ ಸಲಹೆ, ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಜಾತ್ಯಾತೀತ ತತ್ವ-ಸಿದ್ಧಾಂತದ ಮೇಲಿರುವ ಬದ್ಧತೆಯಿಂದಾಗಿ ರಾಜೀನಾಮೆ ನಿರ್ಧಾರ ವಾಪಸ್ ಪಡೆದಿದ್ದು, ಇನ್ನೆಂದೂ ರಾಜಕೀಯ ಜೀವನದಲ್ಲಿಯೇ ನಿರೀಕ್ಷೆ ಇಟ್ಟುಕೊಳ್ಳಲಾರೆ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸಂಕಲ್ಪಗೈದರು.

‘ಮಂತ್ರಿ ಸ್ಥಾನದ ಯಾವುದೇ ನಿರೀಕ್ಷೆಗಳೇ ಇರಲಿಲ್ಲ, ಆ ನಿರೀಕ್ಷೆ ಹುಟ್ಟುಹಾಕಿದ್ದೇ ನಾಯಕರು, ಹೀಗಾಗಿ ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಪಟ್ಟು ಹಿಡಿಯಬೇಕಾಯಿತು, ಇಲ್ಲದೇ ಹೋದರೆ ಇಷ್ಟೆಲ್ಲ ಭಾವನಾತ್ಮಕ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ, ಇನ್ಮುಂದೆ ಯಾವತ್ತೂ ನಿರೀಕ್ಷೆಗಳನ್ನು ಹುಟ್ಟುಹಾಕಬೇಡಿ, ಸಚಿವ ಸಂಪುಟ ರಚನೆ ಪ್ರತಿಕ್ರಿಯೆ ಸುದೀರ್ಘ ಸಮಯ ಮುಂದೂಡಬೇಡಿ, ಅದು ಹೊಸ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ, ಆ ನಿರೀಕ್ಷೆಯ ತುಡಿತವೇ ಕೊನೆಗೆ ನಿರಾಸೆಯನ್ನುಂಟು ಮಾಡುತ್ತದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಭಾವುಕರಾಗಿ ಮತ್ತು ಅಷ್ಟೇ ಸ್ಥಿತಪ್ರಜ್ಞೆಯಿಂದ ಭಾವನೆಗಳನ್ನು ಹೊರಹಾಕಿದರು.
‘ಮತದಾರರ ಮನೆ ಬಾಗಿಲು ಹೊರತುಪಡಿಸಿ ಇನ್ಮುಂದೆ ಜೀವನದಲ್ಲಿಯೇ ಅವಕಾಶ ಕೇಳಿಕೊಂಡು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ, ಅಸಲಿಗೆ ನಿರೀಕ್ಷೆಗಳನ್ನೇ ಇರಿಸಿಕೊಳ್ಳಲ್ಲ. ಬಹುಶಃ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನದ ಭಾಗ್ಯವೇ ಇದ್ದಂತಿಲ್ಲ. ವಾಸ್ತು ಸರಿಯಿಲ್ಲ ಎನ್ನಿಸುತ್ತದೆ, ಇನ್ನೂ ಭಾವನೆಗಳು ಸಾಕಷ್ಟಿವೆ, ಅವುಗಳನ್ನೆಲ್ಲ ಹೊರಹಾಕಲಾಗಲ್ಲ, ಎಲ್ಲದಕ್ಕೂ ಸಮಯ, ಸಂದರ್ಭ, ಕಾಲವೇ ನಿರ್ಣಯ ತೆಗೆದುಕೊಳ್ಳಲಿದೆ’ ಎಂದರು.
‘ಹೈಕಮಾಂಡ್‌ನ ಯಾವುದೇ ಭರವಸೆಗಳಿಗೆ ತಲೆ ಬಾಗಿಲ್ಲ, ನಿಗಮ-ಮಂಡಳಿಯ ಅಪೇಕ್ಷಿತನಾಗಿದ್ದರೆ ಈ ಹಿಂದೆಯೇ ತೆಗೆದುಕೊಳ್ಳುತ್ತಿದ್ದೆ. ಆದರೆ, ಕನಸು ಕಂಡಿದ್ದೆಲ್ಲ ನನಸಾಗಿದೆ. ಸಚಿವರ ಕ್ಷೇತ್ರಗಳಿಗೆ ಕೊಡದಷ್ಟು ಅನುದಾನ ನನ್ನ ಕ್ಷೇತ್ರಕ್ಕೆ ಸಿಕ್ಕಿದೆ. ಅಸಾಧ್ಯ ಎನ್ನುವಂಥ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಿ ತೋರಿಸಿದ್ದೇವೆ. ಹೀಗಾಗಿ ಜನ ನನ್ನ ಮೇಲೆ ಅಪಾರ ಅಭಿಮಾನ ಇರಿಸಿಕೊಂಡಿದ್ದಾರೆ. ಅಪಾರ ನಂಬಿಕೆಯೊಂದಿಗೆ ಆರಿಸಿ ತಂದಿದ್ದಾರೆ. ಹೀಗಾಗಿ ಅವರೇ ನನ್ನ ಹೈಕಮಾಂಡ್. ರಾಜೀನಾಮೆಯಿಂದಾಗಿ ಅವರ ಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಅವರ ಭಾವನೆಗಳಿಗೆ ಸ್ಪಂದಿಸಿ ರಾಜೀನಾಮೆ ನಿರ್ಧಾರ ಹಿಂಪಡೆದಿರುವುದಾಗಿ’ ಪ್ರತಿಕ್ರಿಯಿಸಿದರು.

ಶಾಸಕ ಯತ್ನಾಳಗೆ ತಿರುಗೇಟು

‘ಯತ್ನಾಳ ಯಾವ ಪಕ್ಷದಲ್ಲಿದ್ದರೋ ಅದೇ ಪಕ್ಷಕ್ಕೆ ನಿಷ್ಠೆಯಿಂದ ಇರಲಿಲ್ಲ, ಆ ಪಕ್ಷ ಅವರನ್ನು ಈಗ ಎಲ್ಲಿರಿಸಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿರುಗೇಟು ನೀಡಿದರು.
ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಡಿದ್ದ ಯತ್ನಾಳರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಯತ್ನಾಳ ಹೀಗೆ ಮಾತನಾಡಿ ಮಾತನಾಡಿಯೇ ಇಲ್ಲಿಗೆ ಮುಟ್ಟಿದ್ದಾರೆ. ಅವರ ರಾಜಕಾರಣ ಎಲ್ಲರಿಗೂ ಗೊತ್ತಿದೆ. ಜನ ಅವಕಾಶ ಕೊಟ್ಟಿದ್ದಾರೆ. ಸೈಲೆಂಟಾಗಿ, ಸ್ಮೂತ್ ಆಗಿ ರಾಜಕಾರಣ ಮಾಡುವುದನ್ನು ಕಲಿಯಿರಿ, ಇನ್ನಾದರೂ ಬದಲಾಗಿ’ ಎಂದರು.
ಮುಂದುವರಿದು, ‘ಇಂಥ ಹತ್ತು ಬಸನಗೌಡರಿಗೆ ನೋಡುತ್ತೇನೆ ನಾ. ಜಿಲ್ಲೆಯ ರಾಜಕಾರಣದಲ್ಲಿ ಯಾರು ಯಾರು ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನಿಮ್ಮಂಥವರಿಂದ ನಾನು ಪಾಠ ಕಲಿಯಬೇಕಿಲ್ಲ. ನಿಮಗೆ ಪಕ್ಷ ನಿಷ್ಠೆ ಇಲ್ಲ. ನನ್ನ ತಂದೆ ಕಾಂಗ್ರೆಸ್‌ನಲ್ಲಿದ್ದರು, ನಾನು ಸಹ ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಕಾಂಗ್ರೆಸ್‌ನಲ್ಲಿಯೇ ಮಡಿಯುತ್ತೇನೆ. ಹೀಗೆ ಹೇಳುವ ತಾಕತ್ತು ಯತ್ನಾಳರಿಗೆ ಇದೆಯೇ?’ ಎಂದು ಸವಾಲೆಸೆದರು.
ಅಲ್ಲದೇ, ‘ಒಮ್ಮೆ ಜನತಾದಳಕ್ಕೆ ಹೋಗೋದು ಮತ್ತೆ ಮರಳಿ ಬರೋದು, ಮತ್ತೆ ಹೋಗೋದು ನಾ ಮಾಡಿಲ್ಲ. ಭಾವನಾತ್ಮಕವಾಗಿ ಒಂದು ಕ್ಷಣ ಏನೋ ಆಗಿದೆ. ಆದರೆ, ಕೇವಲ 3 ಗಂಟೆಯಲ್ಲಿ ರಾಷ್ಟ್ರೀಯ ನಾಯಕರು ಸ್ಪಂದಿಸಿದ್ದಾರೆ. ಸುದೀರ್ಘ ರಾಜಕಾರಣಕ್ಕೆ ನನ್ನ ಪಕ್ಷ ಅವಕಾಶ ಕೊಟ್ಟಿದೆ’ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net