ಮಾಧ್ಯಮ ಸಮಾಜ ತಿದ್ದುವ ಸಾಧನ

ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾನಿಪ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಚಿವ ಡಾ.ಎಂ.ಬಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದಾರೆ.
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಕಾನಿಪ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಚಿವ ಡಾ.ಎಂ.ಬಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ. ಪಾಟೀಲ ಹೇಳಿಕೆ
  • ಕಾನಿಪ ಸಂಘದ ಪದಾಧಿಕಾರಿಗಳ ಪದಗ್ರಹಣ
ವಿಜಯಪುರ: ಪತ್ರಿಕೆಗಳು ಮಾನವೀಯತೆಯ ಪ್ರತಿಬಿಂಬಗಳು, ಸಮಾಜದ ಓರೆಕೋರೆ ತಿದ್ದುವ ಸಾಧನಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ನಡೆದ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಪತ್ರಿಕೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ ಎಂದೇ ಬಹುತೇಕರು ಭಾವಿಸಿದ್ದರು. ಆದರೆ, ಪರಿಸ್ಥಿತಿ ಸಹ ಅದೇ ರೀತಿ ಭಾಸವಾಗುವಂತೆ ಮಾಡಿತ್ತು. ಆದರೆ ಇಂದಿಗೂ ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಪತ್ರಿಕೆ ಓದುವುದರಿಂದ ಸಿಗುವ ಸಮಾಧಾನವೇ ಬೇರೆ. ಹೀಗಾಗಿ ಪತ್ರಿಕೆಗಳು ಇಂದಿಗೂ ಬಹುಮುಖ್ಯ ಪಾತ್ರ ವಹಿಸುತ್ತಿವೆ ಎಂದರು.
ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ಗಳು ಅಂದಿನ ಅನುಭವ ಮಂಟಪದ ಸ್ವರೂಪಗಳು, ಚುನಾವಣೆಯಿಂದ ಆಯ್ಕೆಯಾಗಲು ಸಾಧ್ಯವಾಗದ ಸಣ್ಣ ಸಮುದಾಯಗಳಿಗೆ, ಕ್ರೀಡೆ, ಪತ್ರಿಕೋದ್ಯಮ, ಸಾಹಿತ್ಯ, ಸಂಗೀತದ ದಿಗ್ಗಜರು ಆಡಳಿತಕ್ಕೆ ಮಾರ್ಗದರ್ಶನ ನೀಡಲು ರಾಜ್ಯಸಭೆ, ವಿಧಾನ ಪರಿಷತ್ ಅಸ್ತಿತ್ವದಲ್ಲಿವೆ. ಆದರೆ ಈಗ ಅವುಗಳು ಸಹ ರಿಯಲ್ ಎಸ್ಟೇಟ್ ಉದ್ಯಮಿದಾರರ ತಾಣವಾಗುತ್ತಿರುವುದು ನೋವಿನ ಸಂಗತಿ ಎಂದರು.
ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ, ಮೊಹರೆ ಹನುಮಂತರಾಯರಂತಹ ಅನೇಕ ಧೀಮಂತ ಪತ್ರಕರ್ತರು ಪತ್ರಿಕಾ ಕ್ಷೇತ್ರವನ್ನು ಬೆಳಗಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪತ್ರಕರ್ತರ ಭವನಕ್ಕೆ ಪೂರಕ ಸೌಲಭ್ಯ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಅನುದಾನ ಒದಗಿಸುವುದಾಗಿ ವಾಗ್ದಾನ ಮಾಡಿದರು.
ಕಾನಿಪ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ನೈಜ ಪತ್ರಕರ್ತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತಾವೇ ಹೋರಾಟ ಮಾಡುವ ಅವಶ್ಯಕತೆ ಇದೆ. ಇಂದಿನ ಬ್ಲಾಕ್‌ಮೇಲ್‌ ಮಾಡುವ ಕೆಲವು ವಿಸಿಟಿಂಗ್ ಕಾರ್ಡ್ ಪತ್ರಕರ್ತರ ಮಧ್ಯೆ ನೈಜತೆ, ನಿಖರತೆಯ ಜವಾಬ್ದಾರಿ ನಿಭಾಯಿಸುತ್ತ ಮುನ್ನಡೆಯಬೇಕಿದೆ ಎಂದರು.
ಜಿಲ್ಲಾ ಘಟಕದ ನೂತನ ಅಧ್ಯಕ್ಷ ಅಶೋಕ ಯಡಹಳ್ಳಿ ಮಾತನಾಡಿ, ಸಂಘದ ಮಹತ್ವದ ಜವಾಬ್ದಾರಿಯನ್ನು ಪತ್ರಕರ್ತ ಬಾಂಧವರು ನನ್ನ ಹೆಗಲಿಗೆ ಏರಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪತ್ರಕರ್ತರ ಧ್ವನಿಯಾಗಿ ಕಾರ್ಯ ಮಾಡುವೆ, ಎಲ್ಲರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ, ಹಿರಿಯ ಪತ್ರಕರ್ತ ಗೋಪಾಲ ನಾಯಕ, ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಉಪಾಧ್ಯಕ್ಷ ಶಶಿಕಾಂತ ಮೆಂಡೆಗಾರ, ಬಸವರಾಜ ಉಳ್ಳಾಗಡ್ಡಿ, ಮೊಹ್ಮದ್‌ಸಮೀರ್ ಇನಾಮದಾರ, ಕಾರ್ಯದರ್ಶಿ ಅವಿನಾಶ ಬಿದರಿ, ಸದ್ದಾಂ ಹುಸೇನ ಜಮಾದಾರ, ವಿನೋದ ಸಾರವಾಡ, ಕೋಶಾಧ್ಯಕ್ಷ ರಾಹುಲ್ ಆಪ್ಟೆ ಮತ್ತಿತರರಿದ್ದರು.
ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಗೋಪಾಲ ನಾಯಕ ರಚಿಸಿದ `ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳ ಸೂಕ್ತಿಗಳು' ಪುಸ್ತಕ ಲೋಕಾರ್ಪಣೆಗೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net