ವಿಜಯಪುರ: ‘ಸಂವಿಧಾನದಲ್ಲಿ ಮನುಸ್ಮತಿಯ ಆಶಯಗಳಿವೆ’ ಎಂದಿರುವ ಕನ್ಹೇರಿಯ ಕಾಡಸಿದ್ಧೇಶ್ವರ ಸ್ವಾಮೀಜಿ ಊರ್ಫ್ ಬಾಪುಗೌಡ ಮೇಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ, ಹಿಂದುಳಿದ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರಲ್ಲದೇ, ಕನ್ಹೇರಿ ಸ್ವಾಮೀಜಿ ಕ್ಷಮೆ ಯಾಚಿಸದೇ ಹೋದರೆ ಕಂಡಲ್ಲಿ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂವಿಧಾನದ ಆಶಯಕ್ಕೆ ಧಕ್ಕೆ ತರುವಂಥ ಹೇಳಿಕೆ ಕನ್ಹೇರಿ ಸ್ವಾಮೀಜಿ ಮಾತನಾಡಿದ್ದಾರೆ. ಈಗಾಗಲೇ ಅವರ ಮೇಲೆ ದೂರು ದಾಖಲಿಸಲು ಸಿದ್ಧತೆ ನಡೆದಿದೆ. ಅಲ್ಲದೇ, ನ. 26 ರಂದು ಬೃಹತ್ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ. ಅಷ್ಟರಲ್ಲಿ ಸ್ವಾಮೀಜಿ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರಿಗೆ ೇರಾವ್ ಹಾಕಬೇಕಾಗುತ್ತದೆ. ಮಾತ್ರವಲ್ಲ, ಮಹಾರಾಷ್ಟ್ರದಲ್ಲಿ ಅತ್ಯಂತ ಬಲಿಷ್ಠವಾಗಿರುವ ದಲಿತ ಸಂಘಟನೆಗಳಿಂದ ಕನ್ಹೇರಿ ಸ್ವಾಮೀಜಿ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಎಚ್ಚರಿಸಿದರು.
ಮಾಜಿ ಶಾಸಕ ರಾಜು ಆಲಗೂರ ಮಾತನಾಡುತ್ತಾ, ಸಂವಿಧಾನದಲ್ಲಿ ಮನುಸ್ಮತಿಯ ಆಶಯಗಳಿಲ್ಲವೆಂಬ ಕಾರಣಕ್ಕಾಗಿಯೇ ಈ ಹಿಂದೆ ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ನಂತ ಪತ್ರಿಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೇ, ಮನುವಾದಿಗಳು ಸಂವಿಧಾನದ ಪ್ರತಿಯನ್ನೇ ಸುಟ್ಟು ಪ್ರತಿಭಟಿಸಿದ್ದರು. ಈ ಕುರಿತು ಅರಿವು ಬಾಪುಗೌಡ ಮೇಟಿಗೆ ಇದ್ದಂತಿಲ್ಲ ಎಂದರು.
ನಾಡಿನ ಮಠಾಧೀಶರು ಹಾಗೂ ಸ್ವಾಮೀಜಿಗಳ ಬಗ್ಗೆ ನಮಗೆ ಅಪಾರ ಗೌರವ, ಭಕ್ತಿ ಇದೆ. ಆದರೆ, ವಿವೇಕ ಇಲ್ಲದ, ಅಧ್ಯಯನ ಇಲ್ಲದ ಸ್ವಾಮಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದನ್ನು ಸಹಿಸುವುದಿಲ್ಲ. ಸಂವಿಧಾನ ಪರವಾಗಿರುವ, ಅಂಬೇಡ್ಕರ್ ಪರವಾಗಿರುವವರ ಭಾವನೆಗೆ ಧಕ್ಕೆಯಾಗಿದೆ. ಆರ್ಎಸ್ಎಸ್ ಗುಲಾಮನಾಗಿ ಕಾವಿತೊಟ್ಟು, ಅನಾಗರಿಕ ಭಾಷೆ ಬಳಸುವ ಕನ್ಹೇರಿ ಸ್ವಾಮಿ ಮೇಲೆ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಅನೈತಿಕ, ಅಧಃಪತನದಲ್ಲಿರುವ ನೀವು ಶ್ರೇಷ್ಠ ಸಂವಿಧಾನದಲ್ಲಿ ಮನುಸ್ಮತಿಯ ಆಶಯಗಳಿವೆ ಎಂಬುದನ್ನು ಸಹಿಸಲು ಸಾಧ್ಯವಿಲ್ಲ. ಮನುಸ್ಮತಿಯನ್ನು ಕೇವಲ ಅಂಬೇಡ್ಕರ್ ಒಬ್ಬರೇ ಸುಟ್ಟಿಲ್ಲ; ಅನೇಕ ಮೇಲ್ಜಾತಿಯ ಪ್ರಗತಿಪರರು ಸೇರಿ ಸುಟ್ಟಿರುವುದು ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಬಿಜೆಪಿ, ಆರ್ಎಸ್ಎಸ್ ಮತ್ತು ಮನುವಾದಿಗಳು ಬ್ರಾಹ್ಮಣ್ಯ ಭಾರತ ಕಟ್ಟಲು ಹೊರಟಿದ್ದಾರೆ. ಅವರಿಗೆ ದಲಿತರು ಮತ್ತು ಅಂಬೇಡ್ಕರ್ವಾದಿಗಳು ಸವಾಲಾಗಿ ಪರಿಣಮಿಸಿದ್ದಾರೆ. ಹೀಗಾಗಿ ಸ್ವಾಮೀಜಿ ತಿಳಿಯದೇ ಯಾರನ್ನೋ ಮೆಚ್ಚಿಸಲು ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಆಪಾದಿಸಿದರು.
ದಲಿತ ಮುಖಂಡರಾದ ಚಂದ್ರಶೇಖರ ಕೊಡಬಾಗಿ, ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ ಹಾಗೂ ಮತ್ತಿತರರು ಮಾತನಾಡಿ, ‘ಮತಾಂಧ, ಜಾತಿವಾದಿ, ಮನುಸ್ಮತಿಯ ವಿಷಬೀಜ ಮನಸ್ಸಿನಲ್ಲಿ ತುಂಬಿಕೊಂಡಿರುವ ಕನ್ಹೇರಿ ಸ್ವಾಮೀಜಿ ಹೇಳಿಕೆಯನ್ನು ಖಂಡನೀಯ. ಆರ್ಎಸ್ಎಸ್, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಗುಲಾಮರಾಗಿ ಸಂವಿಧಾನ ವಿರೋಧಿ ಹೇಳಿಕೆ ನೀಡುವುದನ್ನು ಖಂಡಿಸುವುದಾಗಿ ತಿಳಿಸಿದರು.
ಮುಖಂಡರಾದ ಸುರೇಷ ಘೋಣಸಗಿ, ಸಂಜೀವ ಕಂಬಾಗಿ, ವಿನಾಯಕ ಗುಣಸಾಗರ, ಅಶೋಕ ಚಲವಾದಿ, ನಾಗರಾಜ ಲಂಬು, ರಾಜಶೇಖರ ಕೂಚಬಾಳ, ಅಶೋಕ ಬಿಜಾಪುರ, ರಾಜು ತೊರವಿ ಮತ್ತಿತರರಿದ್ದರು.