ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಲಿ

ಮುದ್ದೇಬಿಹಾಳದಲ್ಲಿ ಖಾಲಿ ಸರ್ಕಾರಿ ಹುದ್ದೆಗಳ ತಕ್ಷಣ ಭರ್ತಿಗೆ ಆಗ್ರಹಿಸಿ ತಹಸೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಸಲ್ಲಿಸಿದರು. ಅನೀಲ ವಾಲಿಕಾರ, ಮುತ್ತಣ್ಣ ಒಡ್ಡೋಡಗಿ, ಮುತ್ತು ಕನ್ನೂರ, ಜುಮ್ಮಣ್ಣ ಹೊಕ್ರಾಣಿ, ಬಸವರಾಜ ಹುಲಗಣ್ಣಿ ಇತರರಿದ್ದರು.
ಮುದ್ದೇಬಿಹಾಳದಲ್ಲಿ ಖಾಲಿ ಸರ್ಕಾರಿ ಹುದ್ದೆಗಳ ತಕ್ಷಣ ಭರ್ತಿಗೆ ಆಗ್ರಹಿಸಿ ತಹಸೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಮನವಿ ಸಲ್ಲಿಸಿದರು. ಅನೀಲ ವಾಲಿಕಾರ, ಮುತ್ತಣ್ಣ ಒಡ್ಡೋಡಗಿ, ಮುತ್ತು ಕನ್ನೂರ, ಜುಮ್ಮಣ್ಣ ಹೊಕ್ರಾಣಿ, ಬಸವರಾಜ ಹುಲಗಣ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗಾಕಾಂಕ್ಷಿ ಯುವ ಅಧಿವೇಶನ
  • ತಹಸೀಲ್ದಾರ್‌ಗೆ ಮನವಿ
ಮುದ್ದೇಬಿಹಾಳ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿನ ಖಾಲಿ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಬೇಕು ಎಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಉದ್ಯೋಗಾಕಾಂಕ್ಷಿ ಯುವಕರು ಹಾಗೂ ಜನಸಾಮಾನ್ಯರ ವೇದಿಕೆಯ ಸಂಘಟನೆ ಕಾರ್ಯಕರ್ತರು ಯುವ ಅಧಿವೇಶನವನ್ನು ನಡೆಸಿದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಕರು ಹಾಗೂ ಚಿಂತಕರು ಅಧಿವೇಶನದಲ್ಲಿ ಭಾಗವಹಿಸಿ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ, ಖಾಲಿ ಹುದ್ದೆಗಳ ಹೆಚ್ಚಳ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಅಸಮರ್ಪಕತೆ ಕುರಿತು ತೀವ್ರ ಚರ್ಚೆ ನಡೆಸಿದರು. ಬಳಿಕ ಅಽವೇಶನದಲ್ಲಿ ಕೈಗೊಂಡ ನಿರ್ಣಯಗಳನ್ನು ತಹಸೀಲ್ದಾರ್ ಕೀರ್ತಿ ಚಾಲಕ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಮುಖಂಡರಾದ ಪಿ.ಬಿ. ಗೌಡರ ಹಾಗೂ ಯಲ್ಲಪ್ಪ ಹೆಗಡೆ ಮಾತನಾಡಿ, ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಸುಮಾರು 2.84 ಲಕ್ಷ ಸರ್ಕಾರಿ ಹುದ್ದೆಗಳು ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸುಮಾರು 9.64 ಲಕ್ಷ ಹುದ್ದೆಗಳು ದೀರ್ಘಕಾಲದಿಂದ ಖಾಲಿಯೇ ಉಳಿದಿರುವುದು ಆತಂಕಕಾರಿ ಸಂಗತಿ ಎಂದರು.
ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ದೃಷ್ಟಿಯಿಂದ ಈ ಹುದ್ದೆಗಳನ್ನು ಇನ್ನಷ್ಟು ವಿಳಂಬ ಮಾಡದೆ ತಕ್ಷಣವೇ ಭರ್ತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಕೆಪಿಎಸ್ಸಿ, ಕೆಇಎ, ಕೆಎಸ್‌ಪಿ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ನೇಮಕಾತಿ ನಡೆಸುವ ಎಲ್ಲಾ ಪ್ರಾಧಿಕಾರಗಳು ಪ್ರತಿವರ್ಷ ಖಾಲಿ ಹುದ್ದೆಗಳ ವಿವರ ಹಾಗೂ ಪರೀಕ್ಷಾ ದಿನಾಂಕವನ್ನು ಒಳಗೊಂಡ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಿ ನಿಗದಿತ ವೇಳೆಯಂತೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಕೇಂದ್ರ ಮಟ್ಟದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸುವಂತೆ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಅಕ್ರಮಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು. ಜತೆಗೆ ಉದ್ಯೋಗಾಕಾಂಕ್ಷಿಗಳಿಗೆ ಹೊರೆಯಾಗುತ್ತಿರುವ ದುಬಾರಿ ಅರ್ಜಿ ಶುಲ್ಕವನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯೂ ಅಧಿವೇಶನದಲ್ಲಿ ಮುಂದಿಡಲಾಯಿತು.
ರಾಜ್ಯದ ನೇಮಕಾತಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಕೇಂದ್ರದ ಮಾದರಿಯಲ್ಲಿ ಕೆಪಿಎಸ್ಸಿಯನ್ನು ಸಮಗ್ರವಾಗಿ ಪುನರ್‌ರಚನೆ ಮಾಡಬೇಕು. ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನು ವರ್ಷಗಟ್ಟಲೆ ಮುಂದೂಡುತ್ತಿರುವುದರಿಂದ ಸಾವಿರಾರು ಯುವಕರು ವಯೋಮಿತಿ ಮೀರುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪರೀಕ್ಷಾ ಅಕ್ರಮಗಳು ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವುದು ದುಃಖಕರ ಸಂಗತಿ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ತಕ್ಷಣವೇ ಯುವಕರ ಬೇಡಿಕೆಗಳತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ನ್ಯಾಯವಾದಿ ಪಿ.ಬಿ. ಮಾತಿನ ಅಧ್ಯಕ್ಷತೆ ವಹಿಸಿದ್ದರು. ಅನೀಲ ವಾಲಿಕಾರ, ಮುತ್ತಣ್ಣ ಒಡ್ಡೋಡಗಿ, ಮುತ್ತು ಕನ್ನೂರ, ಜುಮ್ಮಣ್ಣ ಹೊಕ್ರಾಣಿ, ಬಸವರಾಜ ಹುಲಗಣ್ಣಿ, ಸಿದ್ದು ವಾಲಿಕಾರ, ಸೀತಪ್ಪ ಗಣಿ ಸೇರಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net