ಸಮುದಾಯ ಭವನ ಕಾಮಗಾರಿ ಬಿಲ್ ಮಾಡಲು ಲಂಚಕ್ಕೆ ಬೇಡಿಕೆ, ಪಿಆರ್‌ಇಡಿ ಕಿರಿಯ ಅಭಿಯಂತರ ಲೋಕಾಯುಕ್ತ ಬಲೆಗೆ

ಲೋಕಾಯುಕ್ತ
ಲೋಕಾಯುಕ್ತ
Published on

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿ ಬಿಲ್ ಮಾಡಲು ಲಂಚಕ್ಕೆ ಬೇಡಿಕೆ
  • ಕಿರಿಯ ಅಭಿಯಂತರ ಲೋಕಾಯುಕ್ತ ಬಲೆಗೆ
  • 6 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ಬಂಧನ
ವಿಜಯಪುರ: ಸಮುದಾಯ ಭವನ ನಿರ್ಮಾಣ ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇರಿಸಿ 6 ಸಾವಿರ ರೂಪಾಯಿ ಪಡೆಯುತ್ತಿದ್ದ ಕಿರಿಯ ಅಭಿಯಂತರ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಇಲ್ಲಿನ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಅಭಿಯಂತರ ವಿಷ್ಣು ಪೋಳ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ 2023-24ನೇ ಸಾಲಿನ ಅನುದಾನದಲ್ಲಿ ವಿಜಯಪುರ ತಾಲ್ಲೂಕಿನ ಕತಕನಹಳ್ಳಿ ಗ್ರಾಮದ ಮರಗಮ್ಮ (ದುರ್ಗಾದೇವಿ) ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಯ ಬಿಲ್ ಮಂಜೂರಿಸಿಕೊಳ್ಳಲು ಕಾಮಗಾರಿಯ ದಾಖಲಾತಿಗಳಿಗೆ ಸಹಿ ಮಾಡಿ ಕೊಡಲು ವಿಷ್ಣು ಪೋಳ 6 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿದ್ದನು.
ಈ ಕುರಿತು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್‌ಪಿ ಟಿ. ಮಲ್ಲೇಶ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಮಲ್ಲಿಕಾರ್ಜುನ ತುಳಸಿಗೇರಿ ನೇತೃತ್ವದ ಇನ್‌ಸ್ಪೆಕ್ಟರ್ ಆನಂದ ವಿ.ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ ಅವರನ್ನೊಳಗೊಂಡ ತಂಡ ಬುಧವಾರ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತು.
ಬುಧವಾರ ಮಧ್ಯಾಹ್ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಲಂಚದ ಹಣ ಪಡೆದುಕೊಳ್ಳುವಾಗ ಲೋಕಾಯುಕ್ತರ ತಂಡ ಹೊಂಚು ಹಾಕಿ ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net