ಪ್ರವಚನಗಳ ಆಲಿಕೆ ಸಮಾಜಮುಖಿ ಕಾರ್ಯಕ್ಕೆ ಪೂರಕ

ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜುಗೌಡ ಪಾಟೀಲ ಮಾತನಾಡಿದರು. ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀ, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಸೋಮನಗೌಡ  ಪಾಟೀಲ ಮನಗೂಳಿ ಮತ್ತಿತರರಿದ್ದರು.
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜುಗೌಡ ಪಾಟೀಲ ಮಾತನಾಡಿದರು. ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀ, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಸೋಮನಗೌಡ ಪಾಟೀಲ ಮನಗೂಳಿ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ, ಬಸವನಬಾಗೇವಾಡಿ
ಸಮಾಜದಲ್ಲಿ ಮಠಮಾನ್ಯಗಳು ಹಮ್ಮಿಕೊಳ್ಳುವ ಪುರಾಣ, ಆಧ್ಯಾತ್ಮಿಕ ಪರಂಪರೆ ಪ್ರವಚನ, ಧರ್ಮ ಬೋಧನೆ, ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಅನೇಕರಿಗೆ ಸಮಾಜಮುಖಿ ಕೆಲಸಕ್ಕೆ ಸಹಕಾರವಾಗಿದೆ ಎಂದು ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಶತಾಯುಷಿ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿಯ ೪೩ನೇ ಪುಣ್ಯ ಸ್ಮರಣೋತ್ಸವ, ಲಿಂ. ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮೀಜಿಯವರ ೧೩ನೇ ಯಾತ್ರಾ ಮಹೋತ್ಸವ ಹಾಗೂ ರಾಜ್ಯಮಟ್ಟದ ಸಂಗನಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಶಿವಶರಣೆ ಅಕ್ಕಮಹಾದೇವಿಯ ಪುರಾಣ ಮಹಾಮಂಗಲ, ಧರ್ಮ ಚಿಂತನ ಸಮಾರಂಭದಲ್ಲಿ ಅವರು ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮಗಳಿಂದ ಅದೆಷ್ಟೋ ಜನರು ಪರಿರ್ವತನೆಗೊಂಡು ನಾವು ಕೂಡ ಸಮಾಜಕ್ಕೆ ಏನನ್ನಾದರೂ ಮಾಡಬೇಕೆಂಬ ಅಭಿಲಾಷೆಯೊಂದಿಗೆ ಸಾಮೂಹಿಕ ವಿವಾಹ, ಪ್ರಸಾದ ಸೇವೆ, ಕಲ್ಯಾಣ ಕಾರ್ಯಗಳು ತೊಡಗಿಕೊಂಡಿದ್ದಾರೆ ಎಂದು ಹೇಳಿದರು.

ಭಗವಂತ ನೀಡಿರುವ ಅಲ್ಪ ಐಶ್ವರ್ಯದಲ್ಲಿ ಗುಡಿ-ಗುಂಡಾರ ಮಠ-ಮಾನ್ಯಗಳಿಗೆ ದಾನ, ಧರ್ಮ ಮಾಡುವುದರಲ್ಲಿ ಸಿಗುವ ತೃಪ್ತಿ, ಸಂತೋಷ ಮತ್ತೆ ಬೇರೆ ಯಾವುದರಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮನಗೂಳಿ ಹಿರೇಮಠ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಕೇವಲ ಧರ್ಮ ಬೋಧನೆಗಷ್ಟೇ ಸೀಮಿತವಾಗದೆ ಸಮಾಜದಲ್ಲಿ ಹಲವು ಬಡ ಕುಟುಂಬಗಳ ಮಕ್ಕಳಿಗೆ ಶಿಕ್ಷಣ, ಆಶ್ರಯ, ದಾಸೋಹ ಮತ್ತು ಕಲ್ಯಾಣ ಮಂಟಪ ನಿರ್ಮಾಣದ ಜತೆಗೆ ಅನೇಕ ಸಾಂಸ್ಕೃತಿಕ, ಸಾಹಿತ್ಯ, ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಸಮಾನತೆ ಸಾರುವ ಕಾರ್ಯವನ್ನು ಮಠದ ಪೀಠಾಧಿಪತಿ ಅಭಿನವ ಸಂಗನಬಸವ ಶ್ರೀಗಳು ಮಾಡಿಕೊಂಡು ಬರುತ್ತಿದ್ದು, ಶ್ರೀಮಠದ ಹಿರಿಯ ಪೂಜ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು.

ಮುತ್ತಗಿ ಹಿರೇಮಠದ ಶ್ರೀ ವೀರರುದ್ರಮನಿ ಶಿವಾಚಾರ್ಯ ಶ್ರೀ, ಮನಗೂಳಿ ಹಿರೇಮಠದ ಪೀಠಾಧ್ಯಕ್ಷರಾದ ಅಭಿನವ ಸಂಗನಬಸವ ಶಿವಾಚಾರ್ಯ ಶ್ರೀಗಳು ಮಾತನಾಡಿದರು.
ಯರನಾಳ ವಿರಕ್ತಮಠದ ಗುರುಸಂಗನಬಸವ ಶ್ರೀ, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಸೋಮನಗೌಡ ಪಾಟೀಲ ಮನಗೂಳಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಮಾಜಿ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ, ಚೆನ್ನಪ್ಪ ಗೌಡ ಬಿರಾದಾರ, ಮಲ್ಲು ಕಲಾದಗಿ, ಎಸ್.ಎಸ್. ಮೂಡಲಗಿ , ಶಂಕರಗೌಡ ಪಾಟೀಲ, ವಿ.ಎಸ್. ಪಾಟೀಲ, ಉಮೇಶ ಕೌಲಗಿ ಮತ್ತಿತರರಿದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net