ರಾಹುಲ್ ಗಾಂಧಿ ಫೋನ್ ಟ್ಯಾಪಿಂಗ್ ಕುರಿತು ತನಿಖೆಯಾಗಲಿ, ಸಚಿವ ಎಂ.ಬಿ. ಪಾಟೀಲ ಆಗ್ರಹ

ದೇಶದಲ್ಲಿ ಮೋದಿ ವರ್ಚಸ್ಸು ಕುಗ್ಗಿದೆ * ಹತಾಶಗೊಂಡ ಬಿಜೆಪಿಯಿಂದ ಷಡ್ಯಂತ್ರ
m b patil
ವಿಜಯಪುರದ ಗೃಹ ಕಚೇರಿಯಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on: 

ವಿಜಯಪುರ: ‘ಇಡಿ, ಐಟಿ, ಸಿಬಿಐನಂಥ ಸಂಸ್ಥೆಗಳನ್ನೆಲ್ಲ ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಅವರ ಫೋನ್ ಟ್ಯಾಪಿಂಗ್ ಮಾಡುವ ವಿಷಯ ದೊಡ್ಡದೇನಲ್ಲ. ಈ ಕುರಿತು ತನಿಖೆಯಾಗಬೇಕು’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

ದೇಶದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಫೋನ್ ಟ್ಯಾಪಿಂಗ್ ಅನುಭವ ಆಗಿರಬೇಕು. ಏಕೆಂದರೆ ಜೆನ್‌ಝಿ ಹೋರಾಟ, ಮತಪಟ್ಟಿ ಪರಿಷ್ಕರಣ ವಿಚಾರ, ನಿರುದ್ಯೋಗ ಸಮಸ್ಯೆ, ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟದಲ್ಲಿ ರಾಹುಲ್ ಗಾಂಧಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹತಾಶಗೊಂಡ ಬಿಜೆಪಿ ಫೋನ್ ಟ್ಯಾಪಿಂಗ್ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ನರೇಂದ್ರ ಮೋದಿ ಅವರ ವರ್ಚಸ್ಸು ಕುಗ್ಗುತ್ತಿದೆ. ಹೀಗಾಗಿ ಹತಾಶಗೊಂಡ ಬಿಜೆಪಿ ಫೋನ್ ಟ್ಯಾಪಿಂಗ್‌ನಂಥ ಷಡ್ಯಂತ್ರದಲ್ಲಿ ಭಾಗಿಯಾದರೂ ಅಚ್ಚರಿಯಿಲ್ಲ. ಇವಿಎಂ ಯಂತ್ರ ಹ್ಯಾಕ್ ಮಾಡೋದು, ಫೋನ್ ಟ್ಯಾಪಿಂಗ್ ಮಾಡೋದು ಬಿಜೆಪಿ ಪಾಲಿಗೆ ಹೊಸದೇನಲ್ಲ ಎಂದರು.

ಕೇವಲ ಏಳು ಕಿಮೀ ಮೆಟ್ರೊ ಚಾಲನೆಗೆ ಪ್ರಧಾನಿ ಬರಬೇಕಿತ್ತಾ? ಎಂದು ಲೇವಡಿ ಮಾಡಿದ ಎಂ.ಬಿ. ಪಾಟೀಲರು, ಬಹುತೇಕ ಅಭಿವೃದ್ಧಿ ಕಾಮಗಾರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಾಲು ಇರುತ್ತದೆ. ಆದರೆ, ಭದ್ರಾ ಮೇಲ್ದಂಡೆಯಂಥ ಬೃಹತ್ ಯೋಜನೆಗಳಿಗೆ ಕ್ಯಾಬಿನೆಟ್‌ನಲ್ಲಿ 5 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿರುವ ಬಿಜೆಪಿ ಈವರೆಗೂ ಕೊಟ್ಟಿಲ್ಲ. ಅದನ್ನು ಕೊಡಲಿ. ಕಬ್ಬು ಬೆಳೆಗಾರರಿಗೆ ಎಂಎಸ್‌ಪಿ, ಎಫ್‌ಆರ್‌ಪಿ ನಿಗದಿ ಮಾಡಲಿ. ಬರ ಪರಿಹಾರ ಕೊಡಲಿ. ಈ ಬಗ್ಗೆ ವೇದಿಕೆ ಮೇಲೆಯೇ ಗಮನಕ್ಕೆ ತಂದಿದ್ದಾರೆ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬೇಡಿ ಎಂದಿದ್ದಾರೆ. ಆದರೂ, ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಬೃಹತ್ ಕೈಗಾರಿಕೆಗಳು ಬರದಂತೆ ಮಾಡಲಾಗುತ್ತಿದೆ ಎಂದರು.