ಕಾಯಕ ಸಮುದಾಯ ಸಂಘಟಿತರಾಗಲಿ

 ತಂಗಡಗಿ ಹಡಪದ ಅಪ್ಪಣ್ಣ ಮಹಾಸಂಸ್ಥಾನಮಠದಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು.ಮಾದಾರ ಚನ್ನಯ್ಯ ಶ್ರೀ, ಬಸವ ಮಾಚಿದೇವ ಶ್ರೀ, ಪುರುಷೋತ್ತಮಾನಂದಪುರಿ ಶ್ರೀ, ವೇಮನಾನಂದ ಶ್ರೀ, ಪ್ರಸನ್ನಾನಂದಪುರಿ ಶ್ರೀ ಮತ್ತಿತರರಿದ್ದರು.
ತಂಗಡಗಿ ಹಡಪದ ಅಪ್ಪಣ್ಣ ಮಹಾಸಂಸ್ಥಾನಮಠದಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು.ಮಾದಾರ ಚನ್ನಯ್ಯ ಶ್ರೀ, ಬಸವ ಮಾಚಿದೇವ ಶ್ರೀ, ಪುರುಷೋತ್ತಮಾನಂದಪುರಿ ಶ್ರೀ, ವೇಮನಾನಂದ ಶ್ರೀ, ಪ್ರಸನ್ನಾನಂದಪುರಿ ಶ್ರೀ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿಕೆ
  • ಅಪ್ಪಣ್ಣ ಮಠದಲ್ಲಿ ವಿವಿಧ ಕಾರ್ಯಕ್ರಮ
ತಂಗಡಗಿ: ಬಸವಣ್ಣನವರ ಕಾಲದ ಹಡಪದ ಸೇರಿ ಕಾಯಕ ಸಮುದಾಯಗಳು ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಂಘಟಿತ ಹೋರಾಟ ನಡೆಸಬೇಕು. ಇದರಿಂದ ಮಾತ್ರ ರಾಜಕೀಯ ಸ್ಥಾನಮಾನ ಸಿಗುವುದು ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಂಡು ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಆವರಣದಲ್ಲಿ ಸೋಮವಾರ ನಡೆದ ಹಡಪದ ಅಪ್ಪಣ್ಣ ಸಮಾಜದ ಪ್ರಥಮ ಜಗದ್ಗುರು ಲಿಂಗೈಕ್ಯ ಬಸವಪ್ರಿಯ ಅಪ್ಪಣ್ಣ ಮಹಾಸ್ವಾಮಿಗಳ 18ನೇ ಸ್ಮರಣೋತ್ಸವ, ಪೀಠಾಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ 18ನೇ ಪಟ್ಟಾಧಿಕಾರ ಮಹೋತ್ಸವ, ಸಹಜ ಶಿವಯೋಗ ಲಿಂಗದೀಕ್ಷೆ, ಕರ್ತೃ ಗದ್ದುಗೆಗೆ ಅಡಿಗಲ್ಲು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿಜಮುಕ್ತೆ ಲಿಂಗಮ್ಮ ತಾಯಿ ಭಾವಚಿತ್ರ ಅನಾವರಣ, ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಸಂಯುಕ್ತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಸವಣ್ಣನವರ ಅನುಭವ ಮಂಟಪದಲ್ಲಿ ಹಡಪದ ಅಪ್ಪಣ್ಣನವರಿಗೆ ವಿಶೇಷ ಸ್ಥಾನಮಾನವಿತ್ತು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಶಿವಶರಣರ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಇಂತಹ ಮಹಾನ್ ಪರಂಪರೆ ಹೊಂದಿರುವ ಹಡಪದ ಸಮಾಜಕ್ಕೆ ರಾಜಕೀಯವಾಗಿ ನ್ಯಾಯ ಸಿಕ್ಕಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅನೇಕ ಸಮಾಜಗಳ ಪ್ರತಿನಿಧಿಗಳು ಇದ್ದರೂ ಹಡಪದ ಸಮಾಜಕ್ಕೆ ಅವಕಾಶ ದೊರೆತಿಲ್ಲ. ಹಡಪದ, ಕುಂಬಾರ, ಉಪ್ಪಾರ, ಹೂಗಾರ, ಮಡಿವಾಳ, ಬಡಿಗೇರ ಸೇರಿ ಕಾಯಕ ಸಮುದಾಯಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಮಾತ್ರ ರಾಜಕೀಯವಾಗಿ ಮುಂದೆ ಬರಲು ಸಾಧ್ಯ ಎಂದರು.
ಕುಂಚಗಿರಿ ಹೊಸದುರ್ಗದ ಶಾಂತವೀರ ಸ್ವಾಮೀಜಿ, ಸಮಾಜದ ಅಧ್ಯಕ್ಷ ದೇವು ಹಡಪದ, ಗಂಗಾವತಿಯ ಸಂಗಮೇಶ ಸುಗ್ರೀವ ಮಾತನಾಡಿದರು.
ಪೀಠಾಧಿಪತಿ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿಗೆ ರುದ್ರಾಕ್ಷಿ ಕಿರೀಟಿ ತೊಡಿಸಿ ಗೌರವ ಸಲ್ಲಿಸಿದರು.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಿಕ್ಷಣ, ಸಾಹಿತ್ಯ, ಕೃಷಿ, ಸಮಾಜಸೇವೆ, ಧಾರ್ಮಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಡಪದ ಸಮಾಜದ ಸಾಧಕರಿಗೆ ಪ್ರಶಸ್ತಿ ಪ್ರದಾನ, ಬಾಗಲಕೋಟೆ ಬನಶಂಕರಿ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ಸೇರಿ ಹಲವು ಕಾರ್ಯಕ್ರಮಗಳು ನೆರವೇರಿದವು.
ಡಾ. ಅಭಿಷೇಕ ಪಾಟೀಲ, ಪೂರ್ಣಿಮಾ ನಿಲಗೂರ, ಪ್ರಸಾದ ನಂದಾಪೂರ, ವಿನೋದ ಹಾಗೂ ತಂಡದ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಮಾದಾರ ಚನ್ನಯ್ಯ ಶ್ರೀ, ಬಸವ ಮಾಚಿದೇವ ಶ್ರೀ, ಪುರುಷೋತ್ತಮಾನಂದಪುರಿ ಶ್ರೀ, ವೇಮನಾನಂದ ಶ್ರೀ, ಪ್ರಸನ್ನಾನಂದಪುರಿ ಶ್ರೀ, ಶಾಂತಭೀಷ್ಮ ಚೌಡಯ್ಯ ಶ್ರೀ, ಬಸವ ಕುಂಬಾರ ಗುಂಡಯ್ಯ ಶ್ರೀ, ಬಸವ ಪ್ರಸಾದ ಶ್ರೀ, ಬಸವರಾಜೇಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಸಿದ್ದಣ್ಣ ಮೇಟಿ, ಎಸ್.ಎಸ್. ಪಾಟೀಲ, ತಾಲೂಕು ಹಡಪದ ಸಮಾಜದ ಅಧ್ಯಕ್ಷ ಶಿವಪ್ಪ ಹಡಪದ, ಮುತ್ತಣ್ಣ ಹಡಪದ, ನಾಗೇಶ ನಾಗೂರ, ಕೀರಪ್ಪ ಹಡಪದ, ಕುಮಾರ ನಾವಿ ಸೇರಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು, ಸಮಾಜದ ಮುಖಂಡರು ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net