ದೇವರಹಿಪ್ಪರಗಿ ಪಟ್ಟಣದ ಕರಿದೇವರ ದೇವಸ್ಥಾನಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿದರು. ಗುರುನಾಥ ಮಾಸ್ತರ ಮುರಡಿ, ಶರಣು ಪೂಜಾರಿ, ಸುನೀಲ ಮಾಗಿ, ಮಾಜಿ ಸೈನಿಕ ಚಂದು ಪೂಜಾರಿ, ರಮೇಶ ಮುರಾಳ ಇತರರಿದ್ದರು.
ದೇವರಹಿಪ್ಪರಗಿ: ಸಮಾಜದಲ್ಲಿ ಸ್ಥಾನಮಾನ ಸಿಗಲು ಉತ್ತಮ ಶಿಕ್ಷಣವಂತ ರಾಗಬೇಕು. ಪ್ರತಿಯೊಂದು ರಂಗದಲ್ಲಿ ಮುಂದೆ ಬಂದು ಸಮಾಜಮುಖಿ ಬದುಕು ಸಾಗಿಸಬೇಕು. ಸಮಾಜದಲ್ಲಿ ಎಲ್ಲ ಸಮುದಾಯದವರೊಂದಿಗೆ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಸಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಪಟ್ಟಣದ ಐತಿಹಾಸಿಕ ಕರಿದೇವರ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು. ಅದರಲ್ಲಿ ವಿಶೇಷವಾಗಿ ಮಹಿಳೆಯರು ಪ್ರಥಮಾದ್ಯತೆ ಮೇರೆಗೆ ಶಿಕ್ಷಣವಂತರಾಗಬೇಕು. ಕೇವಲ ಒಬ್ಬ ಹೆಣ್ಣು ಮಗಳು ಶಾಲೆ ಕಲಿತರೆ ಇಡೀ ಮನೆ, ಕುಟುಂಬವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಗುರುನಾಥ ಮಾಸ್ತರ ಮುರಡಿ ಮಾತನಾಡಿ, ನಮ್ಮ ಸಮಾಜದ ಕೀರ್ತಿ ಹೆಚ್ಚಿಸಿದ ದಿಟ್ಟ ಮಹಿಳೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಇಡೀ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ. ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ ಮಹಿಳೆಯರ ಕುರಿತು ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ. ಇಡೀ ನಮ್ಮ ಸಮಾಜಕ್ಕೆ ಮಾದರಿ ಮಹಿಳೆಯಾಗಿದ್ದಾರೆ. ಇಂತಹ ಆದರ್ಶಪ್ರಾಯರು ನಮಗೆಲ್ಲ ಹೆಮ್ಮೆ ಎಂದರು.
ತಾಲೂಕು ಕುರುಬರ ಸಂಘದ ವತಿಯಿಂದ ಡಾ. ನಾಗಲಕ್ಷ್ಮೀ ಚೌಧರಿ ಅವರನ್ನು ಸನ್ಮಾನಿಸಿದರು.
ಸಂಘದ ಉಪಾಧ್ಯಕ್ಷ ಶರಣು ಪೂಜಾರಿ, ಸುನೀಲ ಮಾಗಿ, ಮಾಜಿ ಸೈನಿಕ ಚಂದು ಪೂಜಾರಿ, ರಮೇಶ ಮುರಾಳ, ಅಮ್ಮೋಗಿ ಕಗ್ಗೋಡ, ಭೀರು ಹಳ್ಳಿ, ಯಮನಪ್ಪ ದೇವಣಗಾಂವ, ಮಾಳಪ್ಪ ಪೂಜಾರಿ, ಮಾಳಪ್ಪ ದೇವಣಗಾಂವ, ಆದೇಶ ಪೂಜಾರಿ, ದೂಸಂಗಿ ಪೂಜಾರಿ, ಬಲವಂತ ಪೂಜಾರಿ, ಶಂಕರ ಜಮಾದಾರ, ಸಿದ್ಧಾರ್ಥ ರೂಗಿ ಇತರರಿದ್ದರು.