ಕಾರ್ಮಿಕರ ದಿನ ಆಚರಣೆ, ಕೆಂಪು ವಸ್ತ್ರಧಾರಿಗಳ ಬೃಹತ್ ಮೆರವಣಿಗೆ
ವಿಜಯಪುರ ನಗರದಲ್ಲಿ ಕಾರ್ಮಿಕ ಸಂಘಟನೆಗಳು ಬೃಹತ್ ಮೆರವಣಿಗೆ ನಡೆಸಿದವು. ಕಾರ್ಮಿಕ ಮುಖಂಡ ಈರಣ್ಣ ಬೆಳ್ಳುಂಡಗಿ, ಲಕ್ಷ್ಮಣ ಹಂದ್ರಾಳ, ಸೋಮಪ್ಪ ಆಯಟ್ಟಿ ಇತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾರ್ಮಿಕ ಮುಖಂಡರ ಅಮೋಘ ಭಾಷಣ
ಅಮೇರಿಕಾದ ಸಾಮ್ರಾಜ್ಯಶಾಹಿತ್ವಕ್ಕೆ ವಿರೋಧ
ಕುಸಿದ ಆರ್ಥಿಕತೆಯಿಂದಾಗಿ ಸಂಕಷ್ಟದಲ್ಲಿ ಕಾರ್ಮಿಕ ವರ್ಗ
ವಿಜಯಪುರ: ಕಾರ್ಮಿಕ ದಿನಾಚರಣೆ (ಮೇ 1) ಅಂಗವಾಗಿ ಲಾರಿ ಹಮಾಲರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೃಹತ್ ಮೆರವಣಿಗೆ ನಡೆಯಿತು.
ನಗರದ ಕೋರಿಚೌಕ್‌ದಿಂದ ಆರಂಭಗೊಂಡ ಮೆರವಣಿಗೆ ಸಿದ್ಧೇಶ್ವರ ದೇವಸ್ಥಾನ ಮಾರ್ಗವಾಗಿ, ಮಹಾತ್ಮ ಗಾಂಧಿ, ಬಸವೇಶ್ವರ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿ ಸಮಾವೇಶವಾಗಿ ಮಾರ್ಪಟ್ಟಿತು.
ಕಾರ್ಮಿಕ ಮುಖಂಡ ಈರಣ್ಣ ಬೆಳ್ಳುಂಡಗಿ ಮಾತನಾಡಿ, ಅಮೇರಿಕಾದ ಸಾಮ್ರಾಜ್ಯಶಾಹಿತ್ವ ಇಂದು ಪ್ರಪಂಚದಾದ್ಯಂತ ತನ್ನ ಪ್ರಾಬಲ್ಯ ಸ್ಥಾಪಿಸಲು ಹೊರಟಿದೆ. ಈ ಆಕ್ರಮಣಕಾರಿ ಧೋರಣೆಗೆ ವ್ಯಾಪಕವಾಗಿ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಈ ವರ್ಷದ ಕಾರ್ಮಿಕ ವರ್ಗವು ಮೇ ದಿನವನ್ನು ಆಚರಿಸುತ್ತಿದ್ದು, ಅಮೇರಿಕ ಅಧ್ಯಕ್ಷ ಟ್ರಂಪ್ ಧೋರಣೆಯನ್ನು ಖಂಡಿಸುತ್ತಿರುವುದಾಗಿ ತಿಳಿಸಿದರು.
ಸಾಮ್ರಾಜ್ಯಶಾಹಿ ಅಮೇರಿಕ ತನ್ನ ಪ್ರಾದೇಶಿಕ ಮತ್ತು ಕಾರ್ಯತಂತ್ರದ ಪ್ರಭಾವವನ್ನು ವಿಸ್ತರಿಸಲು ಬೆತ್ತಲೆ ಪ್ರಯತ್ನಗಳನ್ನು ಮಿಲಿಟರಿ ಶಕ್ತಿಯ ಮೂಲಕ ಪ್ರದರ್ಶಿಸುತ್ತಿದೆ. ಅಗತ್ಯವಿದ್ದರೆ ಬಲಪ್ರಯೋಗ ಸೇರಿದಂತೆ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನ ಪಡಿಸಿಕೊಳ್ಳುವುದು, ಕೆನಡಾವನ್ನು ಅಮೆರಿಕದ 51 ನೇ ರಾಜ್ಯವಾಗಿ ಸ್ವಾಧೀನಪಡಿಸಿಕೊಳ್ಳುವುದು, ಚೀನಾದ ಒಳಗೊಳ್ಳುವಿಕೆಯಿಂದಾಗಿ ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಪನಾಮ ಕಾಲುವೆಯನ್ನು ನಿಯಂತ್ರಿಸುವುದು ಮತ್ತು ಕ್ಯೂಬಾ -ಇರಾನ್‌ನಲ್ಲಿ ತನ್ನ ಆಡಳಿತ ಬದಲಾವಣೆ ಮಾಡುವ ಬಗ್ಗೆಯೂ ಟ್ರಂಪ್ ಗಮನ ಹರಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ, ಸಾರ್ವಭೌಮ ರಾಷ್ಟ್ರವಾದ ವೆನೆಜುವೆಲಾದ ಚುನಾಯಿತ ಅಧ್ಯಕ್ಷ ಮಡುರೊ ಮತ್ತು ವೆನೆಜುವೆಲಾದ ಸಂಸತ್ತಿನ ಸದಸ್ಯರಾಗಿದ್ದ ಅವರ ಪತ್ನಿ ಸಿಲಿಯಾ ಫೋರ್ಸ್ ಅವರನ್ನು ಅಮೆರಿಕ ಅಪಹರಿಸಿದೆ. ಇಂಥ ಅನೇಕ ಕೃತ್ಯಗಳನ್ನು ಖಂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಸಿಐಟಿಯು ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, ತೈಲ ಮತ್ತು ಅನಿಲ ಸಂಪನ್ಮೂಲಗಳು, ಜಾಗತಿಕ ವ್ಯಾಪಾರ ಮಾರ್ಗಗಳ ಮೇಲೆ ಹಿಡಿತ ಸಾಧಿಸಲು ಅಮೇರಿಕ ಮುಂದಾಗಿದೆ. ಸಮಾಜವಾದಿ ಚೀನಾಕ್ಕೆ ತನ್ನ ಇಂಧನ ಪೂರೈಕೆಗಳನ್ನು ಕಡಿತಗೊಳಿಸುವ ಮೂಲಕ ಅದರ ಅಭಿವೃದ್ಧಿಯನ್ನು ನಿಯಂತ್ರಿಸುವ ಪ್ರಯತ್ನಗಳ ಭಾಗವೂ ಇದಾಗಿದೆ ಎಂದರು.
ಸಿಐಟಿಯು ಸಹ ಸಂಚಾಲಕ ಸೋಮಪ್ಪ ಆಯಟ್ಟಿ ಮಾತನಾಡಿ, ಅಮೇರಿಕ ಧೋರಣೆಗಳನ್ನು ಖಂಡಿಸಿದರು.
ಸುರೇಶ ಜೀಬಿ ಮಾತನಾಡಿ, ಅಮೇರಿಕ-ಇರಾನ್ ಯುದ್ಧದ ಬಿಸಿ ಇಡೀ ವಿಶ್ವಕ್ಕೆ ತಟ್ಟಿದೆ. ಭಾರತದಲ್ಲಿಯೂ ಇಂಧನದ ಕೊರತೆ ಕಾಡುತ್ತಿದೆ. ಹೊಟೇಲ್-ಡಾಬಾಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕತೆ ಕುಸಿಯುತ್ತಿದೆ ಎಂದರು.