

ವಿಜಯಪುರ: ‘ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಪ್ರತಿ ವಿಧಾನ ಸಭೆ ಕ್ಷೇತ್ರಕ್ಕೆ ಕನಿಷ್ಠ 1 ಸ್ಥಾನವಾದರೂ ಅಲ್ಪಸಂಖ್ಯಾತರಿಗೆ ನೀಡಬೇಕು. ಹಾಗೊಂದು ವೇಳೆ ಪ್ರಾತಿನಿಧ್ಯ ಸಿಗದೇ ಹೋದರೆ ಮುಸ್ಲಿಂ ಯುವ ಜನತೆ ಕಾಂಗ್ರೆಸ್ ಪಾಲಿಗೆ ವ್ಯತಿರಿಕ್ತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ’ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಅವರು ಮನವಿ ಜೊತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
‘ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಅನಿವಾರ್ಯ ಎಂಬ ಭ್ರಮೆ ಬೇಡ. ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ನ್ನು ಸೋಲಿಸಿದ ಉದಾಹರಣೆಗೂ ಇದೆ. ಟಿಕೆಟ್ಗಾಗಿ ಸಿಎಂ, ಸಚಿವ ಹಾಗೂ ಶಾಸಕರನ್ನು ನಿಲ್ಲಿಸಿ ಕೇಳುವ ಅಧಿಕಾರ ಮುಸ್ಲಿಂರಿಗಿದೆ. ಏಕೆಂದರೆ ಕಾಂಗ್ರೆಸ್ಗೆ ಮುಸ್ಲಿಂರ ಕೊಡುಗೆ ಅಪಾರವಾಗಿದೆ. ಕಳೆದ 70 ವರ್ಷಗಳಿಂದ ಮುಸ್ಲಿಂರು ಕಾಂಗ್ರೆಸ್ ಬೆನ್ನಿಗೆ ನಿಂತಿದ್ದಾರೆ. ಅಧಿಕಾರಕ್ಕಾಗಿ ಅಲ್ಲ; ಕೇವಲ ಸಂವಿಧಾನದ ಉಳಿವು ಹಾಗೂ ಜಾತ್ಯತೀತತೆಯ ಉಳಿವಿಗಾಗಿ. ಆದ್ದರಿಂದ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಕಡೆಗಣಿಸಬಾರದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
‘ಈಗಾಗಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆದಿದೆ. ಜಿಲ್ಲೆಯ ಎಂಟು ವಿಧಾನ ಸಭೆ ಕ್ಷೇತ್ರಗಳಲ್ಲಿ ಎಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿದ್ದಾರೆ ಮತ್ತು ಆಕಾಂಕ್ಷಿಗಳು ಯಾರು ಎಂಬುದರ ಕುರಿತು ಸಭೆ ಕರೆಯಲಾಗುತ್ತಿದೆ. ಶೀಘ್ರದಲ್ಲೇ ಸಭೆ ನಡೆಸಿ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಬೇಡಿಕೆ ಸಲ್ಲಿಸಲಾಗುವುದು’ ಎಂದರು.
‘ಮುಸ್ಲಿಂರಿಗೆ ಟಿಕೆಟ್ ನೀಡಿದರೆ ಉಳಿದ ಜನಾಂಗ ಮತ ಹಾಕಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹಾಗೆ ಮತ ಹಾಕಿಸಲು ನಾಯಕರಾದವರು ಶ್ರಮಿಸಬೇಕು. ಕಾಂಗ್ರೆಸ್ ನಾಯಕರು ಹೇಳಿದಂತೆ ಮುಸ್ಲಿಂರು ಮತ ಹಾಕುತ್ತಾರೆ. ಆದರೆ, ಅವರಿಗೆ ಮತ ಹಾಕಿಸಲು ನೀವೂ ಶ್ರಮಿಸಬೇಕಲ್ಲವೇ? ನಿಮಗಾಗಿ ಸಮುದಾಯದ ಜನರಿಂದ ಮತ ಹಾಕಿಸಿರುತ್ತೇವೆ. ಇದೀಗ ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗೆ ಅವಕಾಶ ಕೊಟ್ಟರೆ ನಮಗೂ ಮುಂದಿನ ಚುನಾವಣೆಗಳಲ್ಲಿ ಅವರಿಂದ ಕಾಂಗ್ರೆಸ್ಗೆ ಮತ ಹಾಕಿಸಲು ಅನುಕೂಲವಾಗಲಿದೆ. ಇಲ್ಲವಾದರೆ ಸಮುದಾಯ ಕಾಂಗ್ರೆಸ್ ಕೈ ಬಿಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ’ ಎಂದು ಎಚ್ಚರಿಸಿದರು.
ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ‘ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಅಖಾಡ ಸಿದ್ಧಗೊಳ್ಳುತ್ತಿದೆ. ಆದರೆ, ಜಿಲ್ಲಾ ಮಟ್ಟದಲ್ಲಿ ಸಭೆಗಳಾಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ನಿಂದ ಸಮಿತಿ ರಚಿಸಿ, ಸಭೆ ನಡೆಸಿ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಬೇಕು. ಈ ಮೊದಲಿನಂತೆ ಮುಸ್ಲಿಂರು ಕಣ್ಣು ಮುಚ್ಚಿ ಮತ ಹಾಕುವ ಸ್ಥಿತಿಯಲ್ಲಿ ಇಲ್ಲ. ಎಚ್ಚೆತ್ತುಕೊಂಡು ಅವರಿಗೂ ಅವಕಾಶ ನೀಡಿದರೆ ಪಕ್ಷದ ಹಿತದೃಷ್ಠಿಯಿಂದ ಒಳ್ಳೆಯದು’ ಎಂದರು.