ಕಿತ್ತೂರು ಚನ್ನಮ್ಮ ಪ್ರತಿಮೆ ಲೋಕಾರ್ಪಣೆ, ರಕ್ತ ಹರಿಸಿದ ಕೈಗಳಿಗೆ ಅವಕಾಶ ಬೇಡ ಎಂದ ಪಂಚಮಸಾಲಿ ಮುಖಂಡರು

ವಿಜಯಪುರ ಜಿಲ್ಲಾಡಳಿತಕ್ಕೆ ಪಂಚಮಸಾಲಿ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ಬಿ.ಎಂ. ಪಾಟೀಲ, ನಿಂಗನಗೌಡ ಸೋಲಾಪುರ, ಶ್ರೀಶೈಲ ಮುಳಜಿ ಮತ್ತಿತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಪಂಚಮಸಾಲಿ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ಬಿ.ಎಂ. ಪಾಟೀಲ, ನಿಂಗನಗೌಡ ಸೋಲಾಪುರ, ಶ್ರೀಶೈಲ ಮುಳಜಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಕಿತ್ತೂರು ಚನ್ನಮ್ಮ ಪ್ರತಿಮೆ ಲೋಕಾರ್ಪಣೆ
  • ಪಂಚಮಸಾಲಿ ಸಮುದಾಯದಿಂದ ಮನವಿ
  • ಸಿಎಂ ಸಿದ್ದರಾಮಯ್ಯ ಆಹ್ವಾನಕ್ಕೆ ವಿರೋಧ
ವಿಜಯಪುರ: ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಚಾರ್ಜ್ ಮಾಡಿಸಿ, ರಕ್ತ ಹರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯಾವುದೇ ಕಾರಣಕ್ಕೂ ಸ್ವಾತಂತ್ರೃ ಹೋರಾಟಗಾರ್ತಿ ಕಿತ್ತೂರಿನ ರಾಣಿ ಚನ್ನಮ್ಮ ಪ್ರತಿಮೆ ಲೋಕಾರ್ಪಣೆಗೊಳಿಸಬಾರದೆಂದು ಆಗ್ರಹಿಸಿ ಪಂಚಮಸಾಲಿ ಸಮುದಾಯದ ಮುಖಂಡರು ಬುಧವಾರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರು ಸರ್ಕಾರದ ಜಾಗೆಯಲ್ಲಿ ಸಮುದಾಯದ ವಂತಿಗೆ ಹಣದಿಂದ ನಿರ್ಮಾಣಗೊಂಡ ಬೃಹತ್ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲು ಈಗಾಗಲೇ ಸಿದ್ಧತೆ ನಡೆದಿದೆ. ಆದರೆ, ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ಅವರಿಂದ ಲೋಕಾರ್ಪಣೆಗೆ ಅವಕಾಶ ಕಲ್ಪಿಸಲು ಬಿಡುವುದಿಲ್ಲ ಎಂದು ಮುಖಂಡರು ತಿಳಿಸಿದರು.
ಬೆಳಗಾವಿಯ ಅಧಿವೇಶನದ ಸಂದರ್ಭ ‘ಪಂಚಮಸಾಲಿ 2ಎ ಮೀಸಲಾತಿ’ ಗೆ ಆಗ್ರಹಿಸಿ ಹೋರಾಟ ನಡೆಸುತ್ತಿರಬೇಕಾದರೆ ಸಿದ್ದರಾಮಯ್ಯ ಸರ್ಕಾರ ಲಾಠಿ ಚಾರ್ಜ್ ಮಾಡಿಸಿತು. ಈ ವೇಳೆ ಸಮುದಾದವರ ರಕ್ತ ಹರಿಯಿತು. ಅನೇಕರು ಕೈ-ಕಾಲು ಮುರಿದುಕೊಂಡು ಗಾಯಗೊಂಡರು. ಈವರೆಗೂ ಚೇತರಿಸಿಕೊಳ್ಳದೇ ಅನೇಕರು ನೋವಿನಿಂದ ಬಳಲುತ್ತಿದ್ದಾರೆ. ಇಷ್ಟಕ್ಕೆಲ್ಲ ಕಾರಣರಾದ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಣಿ ಚನ್ನಮ್ಮ ಪ್ರತಿಮೆ ಲೋಕಾರ್ಪಣೆಗೊಳಿಸಬಾರೆಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ ಅವರು ಸರ್ಕಾರದಿಂದ ಜಾಗ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಿದ್ದು ಅವರ ಕುರಿತು ಸಮುದಾಯದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಲೋಕಾರ್ಪಣೆಗೊಳಿಸಬಾರದು. ಹಾಗೊಂದು ವೇಳೆ ಲೋಕಾರ್ಪಣೆಗೊಳಿಸಿದ್ದೇ ಆದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಎಂ. ಪಾಟೀಲ, ನಿಂಗನಗೌಡ ಸೋಲಾಪುರ, ಶ್ರೀಶೈಲ ಮುಳಜಿ, ಸಂತೋಷ ಮುಂಜಾನೆ, ಈರಣ್ಣಗೌಡ ಬಿರಾದಾರ, ಕುಮಾರ ಪಾಟೀಲ, ಸಿದ್ದಣ್ಣ ಮುಕರ್ತಿಹಾಳ, ಈರಣ್ಣ ಶಿರಮಗೊಂಡ, ಅಶೋಕ ಅಲ್ಲಾಪುರ, ಮಲ್ಲಿಕಾರ್ಜುನ ಕೆಂಗನಾಳ, ಸಿದ್ದನಗೌಡ ಬಿರಾದಾರ, ಸಿದ್ದು ಅವಟಿ, ಸಾಹೇಬಗೌಡ ಯರನಾಳ, ದಾನೇಶ ಅವಟಿ, ಶ್ರೀಶೈಲ ಬುಕ್ಕಣಿ, ರುದ್ರೇಶ ಯರನಾಳ, ಅಣ್ಣಾರಾಯ ಬಿರಾದಾರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net