ಸಚಿವ ಎಂ.ಬಿ. ಪಾಟೀಲರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ, ಅಧಿಕಾರಿಗಳಿಗೆ ಚಾಟಿ-ಆಡಳಿತ ಯಂತ್ರಕ್ಕೆ ಸಾಣೆ

ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬೆಳೆ ವಿಮೆ ರೂ.18 ಕೋಟಿ ಮಿಸ್‌ಮ್ಯಾಚ್
  • ಸಾವಯವ ಕೃಷಿಗೆ ಸರ್ಕಾರಿಂದ ಉತ್ತೇಜನ
  • ಬಿಳಿಜೋಳಕ್ಕೆ ಜಿಐ ಟ್ಯಾಗ್ ಕಲ್ಪಿಸಲು ಒತ್ತಾಯ
  • ಅಮೃತ 2.0 ಯೋಜನೆ ಪೂರ್ಣಗೊಳಿಸಲು ಗಡುವು
  • ಬೀದಿ ನಾಯಿ ಹಾವಳಿ ತಡೆಗೆ ‘ಡಾಗ್ ಶೆಲ್ಟರ್’
  • ಎಪಿಎಂಸಿಗಳಲ್ಲಿ ರೈತ ಭವನ ಕಟ್ಟಲು ಪ್ರಸ್ತಾವನೆ
ವಿಜಯಪುರ: ಕುಡಿಯುವ ನೀರಿನ ಸಮಸ್ಯೆ, ಬೆಳೆ ವಿಮೆ ಪಾವತಿ, ರೈತರಿಗೆ ಪರಿಹಾರ ವಿತರಣೆ, ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ, ಸಾವಯವ ಕೃಷಿಗೆ ಉತ್ತೇಜನ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ, ಜಾನುವಾರುವಿಗೆ ಚಿಕಿತ್ಸೆ ಹಾಗೂ ಎಪಿಎಂಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ಮಹತ್ವದ ಸಂಗತಿಗಳ ಕುರಿತ ಚರ್ಚೆಗೆ ಪ್ರಸಕ್ತ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಸಾಕ್ಷಿಯಾಯಿತು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದೀರ್ಘ 9 ತಿಂಗಳ ಬಳಿಕ ಭಾನುವಾರ ನಡೆದ 2025-26ನೇ ಸಾಲಿನ ಮೊದಲ ಹಾಗೂ ಎರಡನೇ ತ್ರೈಮಾಸಿಕ ಸಭೆಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಯಿತು.
ಇದೇ ಮೊದಲ ಬಾರಿಗೆ ಜಿಲ್ಲೆಯ ಬಹುತೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ನಾಮ ನಿರ್ದೇಶಿತ ಸದಸ್ಯರು ಪಾಲ್ಗೊಂಡಿರುವುದು ಸಭೆಯ ಕಳೆ ಹೆಚ್ಚಿಸಿತ್ತು. ಗಮನಾರ್ಹ ಸಂಗತಿ ಎಂದರೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯರೆಲ್ಲರೂ ಸಭೆಯಲ್ಲಿ ಭಾಗವಹಿಸಿ ಪ್ರಶ್ನೆಗಳ ಸುರಿಮಳೆಗೈಯ್ದರು. ಕಾಂಗ್ರೆಸ್‌ನಿಂದ ಬಸವನಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ ಹಾಗೂ ವಿಪ ಸದಸ್ಯ ಸುನೀಲ ಹೊರತುಪಡಿಸಿದರೆ ಉಳಿದೆಲ್ಲ ಜನಪ್ರತಿನಿಧಿಗಳು ಹಾಜರಿದ್ದು, ಬಗೆ ಹರಿಯದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದರು.
ಶಾಸಕ ಸಿ.ಎಸ್. ನಾಡಗೌಡ ಅವರು, ಜಿಲ್ಲೆಯ ಪಾಲಿಗೆ ಸಚಿವರೇ ಸರ್ಕಾರ. ಹೀಗಾಗಿ ಇಲ್ಲಿಯೇ ಸಮಸ್ಯೆ ಸಿಗದಿದ್ದರೆ ಮತ್ತೆಲ್ಲಿ ಸಿಗಲಿದೆ ಎಂದರೆ, ಅಮೃತ ಯೋಜನೆ ವಿಚಾರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಅಶೋಕ ಮನಗೂಳಿ ತೀವ್ರ ಅಸಮಾಧಾನ ಹೊರಹಾಕಿದರು. ಶಾಸಕ ನಾಡಗೌಡರಂತೂ ‘ನಮ್ಮ ಪಕ್ಷದ ಆಡಳಿತ ಇಷ್ಟೊಂದು ನಿಷ್ಕ್ರೀಯವೇ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಆರಂಭದಲ್ಲೇ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡುತ್ತಾ, ಅಂದಾಜು 10 ತಿಂಗಳ ಬಳಿಕ ಕೆಡಿಪಿ ಸಭೆ ನಡೆಯುತ್ತಿದೆ. ಹೀಗಾದರೆ ಹಿಂದಿನ ಸಭೆಯ ಅಂಶಗಳೇ ಮರೆತು ಹೋಗುತ್ತವೆ. ಇನ್ಮುಂದೆ ಸಕಾಲಕ್ಕೆ ಸಭೆ ಕರೆಯುವಂತೆ ಮನವಿ ಮಾಡಿದರು.
ಕೃಷಿ, ತೋಟಗಾರಿಕೆ, ಎಪಿಎಂಸಿ, ಪಶುಸಂಗೋಪನೆ ಇಲಾಖೆಯೊಂದಿಗೆ ಆರಂಭಗೊಂಡ ಪ್ರಗತಿ ಪರಿಶೀಲನೆ ಸಭೆ ಕುಡಿಯುವ ನೀರು ಸರಬರಾಜು, ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಕೂಲಂಕುಷವಾಗಿ ಪ್ರಗತಿ ಪರಿಶೀಲಿಸಿದ್ದು ಅತ್ಯಂತ ಅರ್ಥಪೂರ್ಣವಾಗಿತ್ತು. ಆಡಳಿತ ಯಂತ್ರಕ್ಕೆ ಚುರುಕು, ಜಿಡ್ಡುಗಟ್ಟಿದ ಅಧಿಕಾರಿ ವರ್ಗಕ್ಕೆ ಚಾಟಿ, ಆಗಾಗ ಹಾಸ್ಯ ಚಟಾಕಿಗಳು ಕೆಡಿಪಿ ಸಭೆಯ ವಿಶೇಷತೆಯನ್ನು ಹೆಚ್ಚಿಸಿದವು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಅತ್ಯಂತ ಸಾವಧಾನ ಹಾಗೂ ಶಾಂತಚಿತ್ತರಾಗಿ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ಮೂಲಕ ಸಭೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮುನ್ನಡೆಸಿಕೊಂಡು ಹೋದರು.
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಗೈರಾಗಿದ್ದರೆ ಸಂಸದ ರಮೇಶ ಜಿಗಜಿಣಗಿ ಉಪಸ್ಥಿತಿ ಎದ್ದು ಕಂಡಿತು.
ಶಾಸಕರಾದ ವಿಠಲ ಕಟಕದೊಂಡ, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ, ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ಪ್ರಕಾಶ ಹುಕ್ಕೇರಿ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net