ಬಿಲ್ ಮಾಡಲು ಲಂಚಕ್ಕೆ ಬೇಡಿಕೆ, ಕೆಬಿಜೆಎನ್‌ಎಲ್ ಅಭಿಯಂತರರು ಲೋಕಾ ಬಲೆಗೆ
ಸೇವುಲಾಲ್ ಚವಾಣ್ ಮತ್ತು ಸಾತಲಿಂಗಪ್ಪ ರೋಡಗಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾಲುವೆ ಕಾಮಗಾರಿ ಮಾಡಲು ಲಂಚ
ದೂರು ಆಧರಿಸಿ ಲೋಕಾಯುಕ್ತರ ದಾಳಿ
ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಸಿಬ್ಬಂದಿ
ವಿಜಯಪುರ: ಕಾಲುವೆ ಕಾಮಗಾರಿಯ ಬಿಲ್ ಮಂಜೂರಾತಿಗೆ ಲಂಚ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೃಷ್ಣಾ ಭಾಗ್ಯಜಲ ನಿಗಮದ ಉಪ ವಿಭಾಗ -1ರ ಸಾಲೋಟಗಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೇವುಲಾಲ ಚವಾಣ್ ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ರೋಡಗಿ ಬಂಧಿತರು.
ಕಾಲುವೆ ಕಾಮಗಾರಿಗೆ ಸಂಬಂಧಿಸಿದಂತೆ 3,71,419 ರೂ. ಮೊತ್ತದ ಬಿಲ್ ಪಾವತಿಸಲು ಸೇವುಲಾಲ್ ಚವಾಣ್ ರೂ.10 ಸಾವಿರ ಹಾಗೂ ಸಾತಲಿಂಗ ರೋಡಗಿ ರೂ.8 ಸಾವಿರಕ್ಕೆ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಜೂ. 5 ರಂದು ದೂರು ದಾಖಲಾಗಿತ್ತು. ಅದೇ ದಿನ ಸಂಜೆ ರೂ. 18,000 ಲಂಚ ಪಡೆಯುತ್ತಿದ್ದ ಈ ಇಬ್ಬರು ಅಭಿಯಂತರರನ್ನು ವಿಜಯಪುರ ಲೋಕಾಯುಕ್ತ ಪೊಲೀಸರು ಹೊಂಚು ಹಾಕಿ ಸಾಕ್ಷೃ ಸಮೇತ ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ ಮಾರ್ಗದರ್ಶನದಲ್ಲಿ, ಉಪಾಧೀಕ್ಷಕ ಮಲ್ಲಿಕಾರ್ಜುನ ಎಸ್. ತುಳಸಿಗೇರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಆನಂದ ಟಕ್ಕನ್ನವರ, ಆನಂದ ಡೋಣಿ, ನಿಂಗಪ್ಪ ಪೂಜೇರಿ ಹಾಗೂ ಸಿಬ್ಬಂದಿ ತಂಡದಲ್ಲಿದ್ದರು.