ಜಲಜೀವನ್ ಶೇ.10 ‘ಕ’ಮಿಷನ್ ಸದ್ದು ! ಬಿಸಿಲೂರಿನಲ್ಲಿ ಬಿಸಿಬಿಸಿ ಚರ್ಚೆ

ವಿಜಯಪುರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ.
ವಿಜಯಪುರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ.
Published on

ಪ್ರಮುಖ ಮುಖ್ಯಾಂಶಗಳು

  • ಇಂಜಿನಿಯರಿಂಗ್ ವಿಭಾಗದಲ್ಲಿ ಗುಸುಗುಸು
  • ಬಿಲ್ ಪಾವತಿಗೆ ಹಣ ಸಂಗ್ರಹದ ಆರೋಪ
  • ಗುತ್ತಿಗೆದಾರ-ಅಧಿಕಾರಿ ಮೇಲೆ ಗುಮಾನಿ
ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಜಲಜೀವನ್ ಮಿಷನ್’ ಯೋಜನೆಯ ಅವಾಂತರಗಳು ಒಂದಲ್ಲ...ಎರಡಲ್ಲ ! ಕಳಪೆ ಕಾಮಗಾರಿ, ಅವೈಜ್ಞಾನಿಕ ಯೋಜನೆ, ಅಸಮರ್ಪಕ ನೀರು ಪೂರೈಕೆ ಆರೋಪದ ಬಳಿಕ ಇದೀಗ ಶೇ. 10ರಷ್ಟು ಕಮೀಷನ್ ಆರೋಪ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.
ಪಂಚಾಯತ್ ರಾಜ್ ವ್ಯವಸ್ಥೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿ ಮೇಲೆಯೇ ಇಂಥದ್ದೊಂದು ಆರೋಪ ಕೇಳಿ ಬಂದಿದ್ದು, ಗುತ್ತಿಗೆದಾರರ ಮೂಲಕ ಶೇ. 10ರಷ್ಟು ಕಮೀಷನ್ ಸಂಗ್ರಹಿಸುತ್ತಿರುವ ಬಗ್ಗೆ ಸ್ವತಃ ಗುತ್ತಿಗೆದಾರರಿಂದಲೇ ಆರೋಪಗಳ ಸುರಿಮಳೆಯಾಗುತ್ತಿದೆ. ಶಿಸ್ತಿಗೆ ಹೆಸರಾದ ರಾಷ್ಟ್ರೀಯ ಪಕ್ಷ ಬೆಂಬಲಿತರ ಮೊಬೈಲ್‌ಗಳಿಂದಲೇ ಇಂಥದ್ದೊಂದು ಕಮೀಷನ್ ಸದ್ದು ರಿಂಗಣಿಸುತ್ತಿದ್ದು, ಅಸಲಿಗೆ ಮೇಲಾಧಿಕಾರಿಗಳ ಗಮನಕ್ಕಿಲ್ಲ ಎಂಬುದು ಸ್ವತಃ ಆ ಅಧಿಕಾರಿಗಳ ಪ್ರತಿಕ್ರಿಯೆಯಿಂದ ಸಾಬೀತಾಗಿದೆ.
ಕೆಳ ಹಂತದಲ್ಲಿ ಏನೆಲ್ಲ ನಡೆಯುತ್ತಿದ್ದರೂ ಮೇಲಾಧಿಕಾರಿಗಳ ಗಮನಕ್ಕಿಲ್ಲವೋ ಅಥವಾ ಗಮನಕ್ಕಿದ್ದರೂ ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತಿದ್ದಾರೋ ಎಂಬುದು ನಿಗೂಢ. ಆದರೆ, ಅಧಿಕಾರಿಯೊಬ್ಬರ ಕಮೀಷನ್ ಸಂಬಂಧಿತ ಸಂಭಾಷಣೆ ಕುರಿತ ಚರ್ಚೆ ಮಾತ್ರ ಜೋರಾಗಿಯೇ ಸದ್ದು ಮಾಡುತ್ತಿದ್ದು, ಯಾವಾಗ ಬೇಕಾದರೂ ಹೂರಣ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಈಚೆಗಷ್ಟೇ ಸಂಸದ ರಮೇಶ ಜಿಗಜಿಣಗಿ ಅವರನ್ನು ಪ್ರಶ್ನಿಸಲಾಗಿ ‘ಜೆಜೆಎಂನಲ್ಲಿ ಅವ್ಯವಹಾರ ನಡೆದಿದೆ ಎಂಬುದು ನನಗೂ ಅನ್ನಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಮಾತನಾಡಿದ್ದಾಗಿ’ ಪ್ರತಿಕ್ರಿಯಿಸಿದ್ದಾರೆ.

ಶೇ.10 ಕಮೀಷನ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಗಮನಕ್ಕಿಲ್ಲ. ಅಂಥ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಯಾವುದಾದರೂ ಅಧಿಕಾರಿ ಅಂಥ ಕೃತ್ಯ ನಡೆಸಿದ್ದು ಕಂಡು ಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು.

— ರಿಷಿ ಆನಂದ, ಜಿಲ್ಲಾ ಪಂಚಾಯಿತಿ ಸಿಇಒ


ಅವಾಂತರಗಳು ಹೊಸದೇನಲ್ಲ
ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದಲ್ಲಿ ಇಂಥ ಅವಾಂತರಗಳಿಗೇನೂ ಕೊರತೆಯಿಲ್ಲ. ಮತ್ತು ಇದು ಹೊಸದೂ ಅಲ್ಲ. ಈ ಹಿಂದೆಯೂ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಅನೇಕ ಯೋಜನೆಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ ಬಗ್ಗೆ ‘ವಿಜಯವಾಣಿ’ ಸರಣಿ ಲೇಖನಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಈ ಕುರಿತು ಸದನದಲ್ಲಿಯೂ ಚರ್ಚೆಗಳಾದವು. ಆದರೂ ರಾಜಕಾರಣಿಗಳ ಒತ್ತಡವೋ...ಕಮೀಷನ್ ದಾಹದಿಂದಲೋ ಅನೇಕ ಕಡೆ ಸಮರ್ಪಕವಾಗಿ ನೀರು ಪೂರೈಕೆಯಾಗದಿದ್ದರೂ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಕೊಳ್ಳಲಾಯಿತು. ಬಾಕಿ ಇರುವ ಬಿಲ್‌ಗಳನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಯಿತು ಮತ್ತು ಬಿಡುಗಡೆಗೊಳ್ಳುತ್ತಿದೆ.
ಕಮೀಷನ್ ಸಂಗ್ರಹದ ಆರೋಪ
ಶೀಘ್ರದಲ್ಲೇ ಬಾಕಿ ಇರುವ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನು ಅರಿತ ಗುತ್ತಿಗೆದಾರರಲ್ಲೇ ಕೆಲವರು ಕಮೀಷನ್ ಕೊಟ್ಟರೆ ಶೀಘ್ರದಲ್ಲೇ ಅನುದಾನ ಬಿಡುಗಡೆ ಮಾಡಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವ ಭರವಸೆ ಮೇರೆ ಕಮೀಷನ್ ಸಂಗ್ರಹಿಸಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಸದ್ಯ ಜಲ್ಲೆಯಲ್ಲಿ 442 ಬಿಲ್‌ಗಳು ಬಾಕಿ ಇದ್ದು, 58.38 ಕೋಟಿ ರೂಪಾಯಿ ಅನುದಾನ ಬರಬೇಕಿದೆ. ಈ ಹಂತದಲ್ಲಿ ಅಧಿಕಾರಿಯೊಬ್ಬರು ಗುತ್ತಿಗೆದಾರರೊಂದಿಗೆ ಸೇರಿ ಕಮಿಷನ್ ಸಂಗ್ರಹಿಸುತ್ತಿರುವ ಗುಸುಗುಸು ಜೋರಾಗುತ್ತಿದ್ದು, ಯಾವಾಗ ಗುಟ್ಟು ರಟ್ಟಾಗುವ ಮಾಹಿತಿ ಲಭಿಸಿತೋ ಆಗ ಕೆಲವರ ಹಣ ಹಿಂತಿರುಗಿಸಿರುವ ಮಾಹಿತಿಯೂ ‘ವಿಜಯವಾಣಿ’ಗೆ ಲಭ್ಯವಾಗಿದೆ.

‘ಜೆಜೆಎಂನಲ್ಲಿ ಅವ್ಯವಹಾರ ನಡೆದಿದೆ ಎಂಬುದು ನನಗೂ ಅನ್ನಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೂ ಮಾತನಾಡಿದ್ದೇನೆ. ಎಷ್ಟೋ ಕಡೆ ಕಾಮಗಾರಿಯೂ ಸರಿಯಾಗಿ ಮಾಡಿಲ್ಲ. ಎಲ್ಲೆಂದರಲ್ಲಿ ಹಡ್ಡಿ ಹಾಗೇ ಬಿಟ್ಟಿದ್ದಾರೆ. ಬಹಳ ಸ್ಪಷ್ಟವಾಗಿಯೂ ಹೇಳಿದ್ದೇನೆ. ಕೇಂದ್ರ ಸರ್ಕಾರದಿಂದ ಇಷ್ಟೆಲ್ಲ ಅನುದಾನ ತಂದರೂ ಸರಿಯಾಗಿ ಕಾಮಗಾರಿಯಾಗಿಲ್ಲ. ಗುತ್ತಿಗೆದಾರರ ಸಭೆ ನಡೆಸುವಂತೆಯೂ ತಿಳಿಸಿದ್ದೇನೆ.

— ರಮೇಶ ಜಿಗಜಿಣಗಿ, ಸಂಸದ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net