ಇದೇನಾ ಸಂಸ್ಕೃತಿ? ಬದಲಾಗಿ ಗೌಡ್ರೆ...! ಶಾಸಕ ಯತ್ನಾಳರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಅಂಗಡಿ ವಿನಂತಿ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಗುರುಲಿಂಗಪ್ಪ ಅಂಗಡಿ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಗುರುಲಿಂಗಪ್ಪ ಅಂಗಡಿ
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯತ್ನಾಳ ಪರೋಕ್ಷ ವಾಗ್ದಾಳಿ
  • ವೇದಿಕೆಯಿಂದ ಅಂಗಡಿ ನಿರ್ಗಮನ
  • ಮುಜುಗರದ ಬಳಿಕ ಪ್ರತಿಕ್ರಿಯೆ
  • ಬಸನಗೌಡರಿಗೆ ಮಹತ್ವದ ಸಲಹೆ
ವಿಜಯಪುರ: ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಧ್ಯೆ ರಾಜಕೀಯ ತುರುಸು ಆರಂಭಗೊಂಡಿದೆ.
ನಗರದಲ್ಲಿ ಗಣೇಶ ಪ್ರತಿಷ್ಟಾಪನೆ ಸಂದರ್ಭದಲ್ಲಿ ಶಾಸಕ ಯತ್ನಾಳ ಪರೋಕ್ಷವಾಗಿ ಅಂಗಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದ ಅಭಿವೃದ್ಧಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪಾತ್ರ ದೊಡ್ಡದಿದೆ ಎಂದಿದ್ದ ಅಂಗಡಿ ಹೇಳಿಕೆಗೆ ತಿರುಗೇಟು ನೀಡಲು ಗಣೇಶೋತ್ಸವವನ್ನು ಬಳಸಿಕೊಂಡ ಯತ್ನಾಳ ‘ನಗರದಲ್ಲಿ ಎರಡು ಕ್ಷೇತ್ರಗಳು ಬರುತ್ತವೆ. ನಾಗಠಾಣ ಹಾಗೂ ವಿಜಯಪುರ ನಗರ ಕ್ಷೇತ್ರ. ಹಾಗಾದರೆ ನಾಗಠಾಣ ಕ್ಷೇತ್ರದ ರಸ್ತೆಗಳೇಕೆ ಹದಗೆಟ್ಟಿವೆ. ವಿಜಯಪುರ ನಗರದ ರಸ್ತೆಗಳು ಹೇಗಿವೆ? ನೋಡ್ರಿ’ ಎನ್ನುತ್ತಾ ಏಕವಚನದಲ್ಲಿ ಅವಾಚ್ಯವಾಗಿ ತೂರಾಡಿದ್ದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮುಜುಗರದಿಂದ ಸಭೆಗೆ ಕೈ ಮುಗಿದು ನಿರ್ಗಮಿಸಿದ್ದರು. ಇದರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.
ಹೀಗಾಗಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ‘ಗೌಡ್ರೆ ನಿಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದೀರಿ, ಇದೇನಾ ನಿಮ್ಮ ಸಂಸ್ಕೃತಿ, ದಯವಿಟ್ಟು ವಿನಂತಿ ಮಾಡುತ್ತೇನೆ, ಅದರಿಂದ ಹೊರಬನ್ನಿ’ ಎಂದಿದ್ದಾರೆ.
ಮುಂದುವರಿದು, ವಿಜಯಪುರ ನಗರದ ಸೌಂದರ್ಯೀಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಪಾತ್ರ ಸಾಕಷ್ಟಿದೆ. ಅದನ್ನು ಲಕ್ಷ ಬಾರಿ ಹೇಳುತ್ತೇನೆ, ವಿಜಯೇಂದ್ರ ಯುವ ನಾಯಕ. ಅವರ ಹಿಂದೆ ಯುವ ಪಡೆ ಇದೆ. ಅವರನ್ನು ಮತ್ತು ಯಡಿಯೂರಪ್ಪ ಅವರನ್ನು ನಿಂದಿಸುವುದನ್ನು ಬಿಡಿ’ ಎಂದಿದ್ದಾರೆ.
‘ಮಾತೆತ್ತಿದರೆ ಮುಸ್ಲಿಂರನ್ನು ಟೀಕಿಸುವುದು, ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರನ್ನು ನಿಂದಿಸುವುದೇ ನಿಮ್ಮ ಭಾಷಣವಾಯಿತು. ಮುಸ್ಲಿಂ ಸಮುದಾಯದಲ್ಲಿ ದೇಶದ್ರೋಹಿ ಕೆಲಸ ಮಾಡಿದವರ ಬಗ್ಗೆ ಮಾತ್ರ ಮಾತನಾಡಿ. ವಿಚಾರವಾದಿಗಳನ್ನು ಮಾತನಾಡಬೇಡಿ. ದೇಶದ್ರೋಹಿಗಳ ಬಗ್ಗೆ ಮಾತನಾಡಿ. ಅಭ್ಯಂತರವಿಲ್ಲ’ ಎಂದರು.
‘ಆಶ್ರಮದ ಸಮೀಪ ನಡೆದ ಗಣೇಶೋಥ್ಸವದ ವೇಳೆ ಮೈಕ್ ಕಸಿದುಕೊಂಡು ನಾನು ಮಾತನಾಡುವುದು ಸರಿಯಲ್ಲ. ನನ್ನಲ್ಲೂ ಬಹಳ ವಿಚಾರಗಳಿದ್ದವು. ಆದರೆ ಮಾತನಾಡುವುದು ನನ್ನ ಸಂಸ್ಕೃತಿಯಲ್ಲ, ನಿಮಗಿದೆಲ್ಲ ಯಾಕೆ ಬೇಕು ಗೌಡ್ರೆ? ವಿನಂತಿ ಮಾಡಿಕೊಳ್ಳುವೆ. ಹೀಗೆ ಹೋದರೆ ನಿಮ್ಮ ರಾಜಕಾರಣ ಹಳಿ ತಪ್ಪುತ್ತದೆ’ ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net