ಮಾನ್ಯತೆ ನವೀಕರಣದಲ್ಲಾದ ಅಕ್ರಮ, ಯಾವ ಶಾಲೆ ಅಧಿಕೃತ-ಯಾವುದು ಅನಧಿಕೃತ?

DDPI-OFFICE
DDPI-OFFICE
Published on

ಪ್ರಮುಖ ಮುಖ್ಯಾಂಶಗಳು

  • ಪಾಲಕರಲ್ಲಿ ತೀವ್ರ ಆತಂಕ ಸೃಷ್ಠಿ
  • ಗುಣಮಟ್ಟದ ಶಿಕ್ಷಣ ಸಂಸ್ಥೆಗಾಗಿ ಹುಡುಕಾಟ
  • ಶಿಕ್ಷಣ ಇಲಾಖೆಯಿಂದ ಸಿಗದ ಸ್ಪಷ್ಟನೆ
ವಿಜಯಪುರ: ‘ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆ ನೀಡುವಲ್ಲಿ ಉಂಟಾದ ಅಕ್ರಮ’ದಿಂದಾಗಿ ಸಾರ್ವಜನಿಕರು ತೀವ್ರ ಆತಂಕಗೊಂಡಿದ್ದು, ಯಾವ ಶಾಲೆ ಅಧಿಕೃತ ಹಾಗೂ ಯಾವುದು ಅನಧಿಕೃತ ಎಂಬ ಗೊಂದಲ ಸೃಷ್ಠಿಯಾಗಿದೆ.
ಈಗಾಗಲೇ ಬೇಸಿಗೆ ರಜೆ ಆರಂಭಗೊಂಡಿದ್ದು ಆಗಲೇ ಪ್ರವೇಶಾತಿ ಪ್ರಕ್ರಿಯೆಗಾಗಿ ಕೆಲವು ಶಾಲೆಗಳು ಭರದ ಸಿದ್ಧತೆ ನಡೆಸಿವೆ. ಇನ್ನೊಂದೆಡೆ ಪಾಲಕರು ಮಕ್ಕಳ ಮುಂದಿನ ಶಿಕ್ಷಣಕ್ಕಾಗಿ ಗುಣಮಟ್ಟದ ಶಾಲೆಗಳ ಹುಡುಕಾಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಶಾಲೆಗಳ ಮಾನ್ಯತೆ ನವೀಕರಣದಲ್ಲಿ ಉಂಟಾದ ಅಕ್ರಮ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು, ಆಗಲೇ ಯಾವ ಶಾಲೆ ಅಧಿಕೃತ? ಯಾವ ಶಾಲೆಯ ಪರವಾನಿಗೆ ರದ್ದಾಗಬಹುದು? ಯಾವುದು ಸ್ಥಳಾಂತರಗೊಳ್ಳಬಹುದು? ಪ್ರವೇಶ ಪಡೆದ ಶಾಲೆಯೇ ಮುಚ್ಚಲ್ಪಟ್ಟರೆ ಹೇಗೆ? ಮಕ್ಕಳ ಭವಿಷ್ಯದ ಗತಿ ಏನು? ಎಂಬ ಆತಂಕ ಶುರುವಾಗಿದೆ.
2025 ಡಿಸೆಂಬರ್ ಅಂತ್ಯದವರೆಗಿನ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 446 ಸಂಸ್ಥೆಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು 206 ಸಂಸ್ಥೆಗಳಿಗೆ ಮಾನ್ಯತೆ ನವೀಕರಿಸಲಾಗಿದೆ. 94 ಅರ್ಜಿ ತಿರಸ್ಕರಿಸಲಾಗಿದ್ದು, ಇನ್ನೂ 146 ಅರ್ಜಿಗಳು ಬಾಕಿ ಇದ್ದವು. ಆ ಮೂಲಕ ರಾಜ್ಯದಲ್ಲೇ ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಮತ್ತು ಮಾನ್ಯತೆ ನವೀಕರಣಗೊಂಡ ಜಿಲ್ಲೆಗಳಲ್ಲಿ ವಿಜಯಪುರ ಪ್ರಥಮ ಸ್ಥಾನದಲ್ಲಿತ್ತು. ಇದರಿಂದಾಗಿ ಸಹಜವಾಗಿಯೇ ಉಂಟಾದ ಅನುಮಾನ ಅಕ್ರಮವನ್ನು ಪುಷ್ಠೀಕರಿಸಿತು. ಬಳಿಕ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆಯಲ್ಲಿ ಅಕ್ರಮ ನಡೆದಿರುವ ಸಂಗತಿ ರಾಜ್ಯಾದ್ಯಂತ ಸದ್ದು ಮಾಡಿತು.
ಆದರೆ, ಈವರೆಗೂ ಅಕ್ರಮಕ್ಕೆ ಸಂಬಂಧಿಸಿದಂತೆ ಯಾವ ಯಾವ ಶಾಲೆಗಳಿಗೆ ನಿಯಮ ಉಲ್ಲಂಘಿಸಿ ಅನುಮತಿ ನೀಡಲಾಗಿದೆ? ಆ ಶಾಲೆಗಳಲ್ಲಿರುವ ಮಕ್ಕಳ ಸ್ಥಿತಿ-ಗತಿ ಏನು? ಬರಲಿರುವ ಹೊಸ ಪ್ರವೇಶಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ನಿಲುವೇನು? ಹೊಸದಾಗಿ ಮಾನ್ಯತೆ ಪಡೆದ ಶಾಲೆಗಳ ಪೈಕಿ ದಾಖಲೆಗಳೇ ಇಲ್ಲದ, ಮೂಲ ಸೌಕರ್ಯಗಳಿಲ್ಲದಿದ್ದರೂ ಅನಧಿಕೃತವಾಗಿ ಮಾನ್ಯತೆ ನವೀಕರಿಸಿಕೊಂಡ ಮತ್ತು ಹೊಸದಾಗಿ ಮಾನ್ಯತೆ ಪಡೆದ ಶಾಲೆಗಳ ಪೈಕಿ ಯಾವ ಶಾಲೆಯ ಮಾನ್ಯತೆ ಉಳಿಯಲಿದೆ? ಯಾವುದರ ಮಾನ್ಯತೆ ರದ್ದಾಗಲಿದೆ? ಎಂಬ ಮಾಹಿತಿ ಲಭ್ಯವಿಲ್ಲ. ಇದು ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಸಿದೆ.

ಜಡ್ಡು ಗಟ್ಟಿದ ಆಡಳಿತ ವ್ಯವಸ್ಥೆ

ಶಾಲೆ ಮಾನ್ಯತೆ ನವೀಕರಣ ಹಾಗೂ ಪ್ರಥಮ ಮಾನ್ಯತೆ ಪ್ರಕರಣಗಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ ಹಾಗೂ ಧಾರವಾಡದ ಅಪರ ಆಯುಕ್ತರು ನೀಡಿದ ನೊಟೀಸ್‌ಗಳ ಮೇಲೆ ನೋಟಿಸ್ ನೀಡಿದ್ದಾಯಿತು, ಏಳು ದಿನಗಳ ಗಡುವು ಮುಗಿದದ್ದೂ ಆಯಿತು, ಲೋಕಾಯುಕ್ತರಿಂದ ತನಿಖೆಯಾಯಿತು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಅವರಿಂದ ಸಮಗ್ರ ತನಿಖಾ ವರದಿ ಸಲ್ಲಿಕೆಯೂ ಆಯಿತು. ಆದರೆ, ಈವರೆಗೂ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಂಡ ಉದಾಹರಣೆ ಇದೆಯಾ?
58 ಶಾಲೆಗಳ ಮಾನ್ಯತೆ ನವೀಕರಣದಲ್ಲಿ ಅಕ್ರಮ ನಡೆದಿರುವುದಾಗಿ ಖುದ್ದಾಗಿ ಡಿಡಿಪಿಐ ವೀರಯ್ಯ ಸಾಲಿಮಠ ಅವರೇ ಸೈಬರ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು ಅದಿನ್ನೂ ತನಿಖಾ ಹಂತದಲ್ಲಿದೆ. ಆದರೆ, ಈ 58 ಶಾಲೆಗಳ ಹೊರತಾಗಿಯೂ ಹಿಂದಿನ ಮತ್ತು ಇಂದಿನ ಡಿಡಿಪಿಐ ಹಾಗೂ ಸಿಬ್ಬಂದಿ ಸೇರಿ ಅನೇಕ ಶಾಲೆಗಳಿಗೆ ನಿಯಮ ಉಲ್ಲಂಘಿಸಿ ಮಾನ್ಯತೆ ನವೀಕರಿಸಿರುವುದು ಕಂಡು ಬಂದಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಲಂಚ ಪಡೆದಿರುವ ಆರೋಪವೂ ಇದೆ. ಆ ಕುರಿತು ಕ್ರಮ ಏನಾಯಿತು? 14 ಸಿಬ್ಬಂದಿಯನ್ನು ಎತ್ತಂಗಡಿ ಮಾಡಿದ್ದು ಬಿಟ್ಟರೆ ಈವರೆಗೆ ಆದ ಕಠಿಣ ಕ್ರಮವೇನು? ಅವರನ್ನು ಅನ್ಯ ಜಿಲ್ಲೆಗಳಿಗೆ ವರ್ಗಾಯಿಸಬೇಕೆಂಬ ಶಾಸಕರ ಪತ್ರಕ್ಕೆ ಬೆಲೆಯೇ ಇಲ್ಲವಾ? ಅಂಥ ಶಾಲೆಗಳ ಮಾನ್ಯತೆ ಮುಂದುವರಿಸುವ ಅಥವಾ ರದ್ದುಗೊಳಿಸುವುದರ ಬಗ್ಗೆ ಶಿಕ್ಷಣ ಇಲಾಖೆಯ ನಿಲುವೇನು? ದಾಖಲೆ ಅಸಮರ್ಪಕವಾಗಿದ್ದರೂ ಡಿಎಸ್‌ಸಿ ನೀಡಿರುವ ಇಂದಿನ ಮತ್ತು ಹಿಂದಿನ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಈವರೆಗೆ ಕ್ರಮ ಕೈಗೊಳ್ಳದೇ ಇರುವುದರ ಹಿಂದಿನ ಉದ್ದೇಶವೇನು? ಹೀಗೆ ಉತ್ತರವೇ ಇಲ್ಲದ ನೂರಾರು ಪ್ರಶ್ನೆಗಳು ಪಾಲಕರ ತಲೆ ಚಿಟ್ಟು ಹಿಡಿಸಿವೆ.

ಶಿಕ್ಷಣ ಇಲಾಖೆಯಲ್ಲಿ ಕಂಡು ಬಂದ ಅಕ್ರಮಕ್ಕೆ ಸಂಬಂಧಿಸಿದಂತೆ ಕೂಡಲೇ 2-3 ರೀತಿಯಲ್ಲಿ ಕ್ರಮ ಕೈಗೊಳ್ಳಬೇಕಿತ್ತು. ಒಂದೋ ಎರಡೋ ಶಾಲೆಯದ್ದಾಗಿದ್ದರೆ ಬೇರೆ. ಆದರೆ ಇಷ್ಟು ಪ್ರಮಾಣದಲ್ಲಾಗಿದ್ದು ಅಸಹಜ. ಈಗಾಗಲೇ ಪ್ರಾಥಮಿಕ ವರದಿ ಆಧರಿಸಿ 14 ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಲಾಗಿದೆ. ಲಾಗಿನ್ ದುರ್ಬಳಿಕೆಯಾಗಿದೆ ಎಂದು ಡಿಡಿಪಿಐ ಸಹ ಎಫ್‌ಐಆರ್ ದಾಖಲಿಸಿದ್ದಾರೆ. ಹಿಂದಿನದ್ದಾಗಲಿ, ಹೊಸದಾಗಿಯಾಗಲಿ ಎಲ್ಲದಕ್ಕೂ ಸಂಬಂಧಿಸಿದ ಅಧಿಕಾರಿಯೇ ಹೊಣೆಯಾಗಿರುತ್ತಾರೆ. ಜಿಲ್ಲಾ ಪಂಚಾಯಿತಿ ಸಿಇಒ ಅವರು ಕೂಡ ವಿಶೇಷ ತಂಡ ರಚಿಸಿ ಸಮಗ್ರ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ತ್ವರಿತವಾಗಿ ಕ್ರಮ ಜರುಗಿಸಲು ಮತ್ತು ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಪಟ್ಟಿಯನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net