ಭೀಮಾ ನದಿ ಪಾತ್ರದಲ್ಲಿ ಜೀವ ಜಲಕ್ಕಾಗಿ ‘ಮಹಾ’ ನಿಯೋಗ, ಮಹತ್ವದ ನಿರ್ಣಯ ಪ್ರಕಟಿಸಿದ ಇಂಡಿ ಶಾಸಕ

YASHAVANTRAYAGOUDA-PATIL
YASHAVANTRAYAGOUDA-PATIL
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆ
  • ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
  • ಐತಿಹಾಸಿಕ ನಿರ್ಣಯ ಕೈಗೊಳ್ಳಲು ಸಿದ್ಧತೆ
ವಿಜಯಪುರ: ಭೀಮಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯುವ ಬಗ್ಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಮಹತ್ವದ ತೀರ್ಮಾನ ಪ್ರಕಟಿಸಿದರು.
ರಣಬಿಸಿಲಿನಿಂದಾಗಿ ಬತ್ತಿದ ಭೀಮೆಗೆ ನೀರು ಹರಿಸುವ ನಿಟ್ಟಿನಲ್ಲಿ ಬರೆದ ಪತ್ರಕ್ಕೆ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಉಜನಿ ಜಲಾಶಯದಿಂದ 16 ಕ್ಯೂಸೆಕ್ ನೀರು ಹರಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸಿದೆ. ಆದರೆ, ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ ಜಿಲ್ಲೆಯ ಶಾಸಕರು ಸೇರಿದ ಉನ್ನತ ಮಟ್ಟದ ನಿಯೋಗ ಕೊಂಡೊಯ್ಯುವ ಬಗ್ಗೆ ಐತಿಹಾಸಿಕ ನಿರ್ಣಯ ಕೈಗೊಳ್ಳುತ್ತಿರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈ ಹಿಂದೆ ಮಹಾರಾಷ್ಟ್ರ ಸರ್ಕಾರ ನದಿಭಾಗದ ತನ್ನ ಹಳ್ಳಿಗಳ ಜನರಿಗಾಗಿ ನೀರು ಹರಿಸುತ್ತಿತ್ತು. ಆದರೆ, ಇದೀಗ ಉಜನಿ ಜಲಾಶಯದಿಂದ ಪೈಪ್‌ಲೈನ್ ಮೂಲಕ ಸೋಲಾಪುರಕ್ಕೆ ನೀರು ಪೂರೈಕೆ ಯೋಜನೆ ಕೈಗೊಂಡಿದೆ. ಹೀಗಾಗಿ ಈ ಬಾರಿ ಭೀಮಾ ನದಿಗೆ ನೀರು ಹರಿಸದ ಕಾರಣ ಸಮಸ್ಯೆ ಉಲ್ಭಣಿಸಿತ್ತು. ಭೀಮಾ ನದಿ ನೀರನ್ನೇ ಅವಲಂಬಿಸಿ ರೂಪುಗೊಂಡ ಕರ್ನಾಟಕ ಭಾಗದ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ಕೂಡಲೇ ನೀರು ಹರಿಸುವಂತೆ ಪತ್ರ ಬರೆಯಲಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರ ಎರಡು ಬಾರಿ ನೀರು ಹರಿಸಿರುವುದಾಗಿ ಶಾಸಕರು ಕೃತಜ್ಞತಾ ಭಾವ ವ್ಯಕ್ತಪಡಿಸಿದರು.
ಸಾಂಗ್ಲಿ, ಜತ್ತ ಮೊದಲಾದ ಭಾಗಗಳಿಗೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಕೂಡ ಮನವಿ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಮನವಿ ಹಾಗೂ ಸಲಹೆಯನ್ನು ನಾವು ಪರಿಗಣಿಸಬೇಕಿದೆ, ‘ನಾವು ನಿಮಗೆ ನೀರು ಕೊಡುತ್ತೇವೆ - ನೀವು ನಮಗೆ ನೀರು ಕೊಡಿ‘ ಎಂಬ ಸಹೋದರ ಭಾವನೆಯನ್ನು ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಸಿಎಂ ಹಾಗೂ ಡಿಸಿಎಂ ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ಸಮಗ್ರ ನೀರಾವರಿ

ಕೆರೆಗೆ ನೀರು ತುಂಬುವ ಯೋಜನೆ, ತಿಡಗುಂದಿ ವಿಸ್ತೃತ ಯೋಜನೆ, ಜಲಧಾರೆ ಮತ್ತಿತರ ಯೋಜನೆಗಳಿಂದಾಗಿ ಇಂಡಿ ಸಮಗ್ರ ನೀರಾವರಿಗೊಳಪಟ್ಟಿದೆ. ಒಂದು ಕಾಲದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಟ್ಯಾಂಕರ್ ನೀರು ಪೂರೈಸುವ ಸ್ಥಾನದಲ್ಲಿ ಇಂಡಿ ಇತ್ತು. ಇತ್ತೀಚೆಗೆ ಒಂದೇ ಒಂದು ಟ್ಯಾಂಕರ್ ಹಚ್ಚುವ ಪ್ರಮೇಯ ಉದ್ಭವಿಸಿಲ್ಲ. ಸದ್ಯ 79.91ರಷ್ಟು ಕ್ಷೇತ್ರ ನೀರಾವರಿಗೊಳಪಟ್ಟಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ, ಭೀಮಾ ನದಿ ನೀರು ಪೂರೈಕೆಯಿಂದಾಗಿ ಶೇ.80ರಷ್ಟು ಕ್ಷೇತ್ರ ನೀರಾವರಿಯಾಗಲಿದ್ದು, ಇಂಡಿ ಸಮೃದ್ಧ ನಾಡಾಗಲಿದೆ ಎಂದು ಯಶವಂತರಾಯಗೌಡರು ತಿಳಿಸಿದರು.

ಸರ್ವಾಂಗೀಣ ಪ್ರಗತಿ

ಭವಿಷ್ಯದಲ್ಲಿ ಇಂಡಿ ಜಿಲ್ಲಾ ಕೇಂದ್ರವಾಗಲು ಬೇಕಾದ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯುತ್ ಪೂರೈಕೆಯನ್ನು ಸರಾಗವಾಗಿಸಲು ಅನೇಕ 330 ಕೆವಿ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಜಿಟಿಟಿಸಿ ಕೇಂದ್ರ ತರಲಾಗಿದೆ, ಹೊಸದಾಗಿ ಮೂರು ಪಿಯುಸಿ ಕಾಲೇಜ್ ಮಂಜೂರಿಸಲಾಗಿದೆ, ವಸತಿ ನಿಲಯ, ಕಾರ್ಮಿಕ ಶಾಲೆ ಹೀಗೆ ಅನೇಕ ಸೌಲಭ್ಯಗಳು ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ ಎಂದರು.
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುವ ವಾಹನಗಳ ಸಂಚಾರ, ಅತೀವೃಷ್ಠಿಯಿಂದಾಗಿ ರಸ್ತೆಗಳು ಹಾಳಾಗಿದ್ದು ನಿಜ. ಆದರೆ ಅಷ್ಟೊಂದು ಪ್ರಮಾಣದಲ್ಲಿ ಸಮಸ್ಯೆ ಇಲ್ಲ, ಆದರೂ ಆರು ತಿಂಗಳಲ್ಲಿ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಇಂಡಿ ಕ್ಷೇತ್ರ ವ್ಯಾಪ್ತಿಯಲ್ಲಿ 111 ಕಿ.ಮೀ ರಾಜ್ಯ ಹೆದ್ದಾರಿ ಇದ್ದು ಅದರಲ್ಲಿ 83 ಕೀ.ಮಿ ರಸ್ತೆ ಸಂಪೂರ್ಣ ಸುಸ್ಥಿತಿಯಲ್ಲಿದ್ದು, ದುರಸ್ತಿಗೆ ಅಗತ್ಯವಿರುವ 28 ಕೀ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net