ಮುದ್ದೇಬಿಹಾಳ ಪಟ್ಟಣದ ನಗರದ ನಿವಾಸಿಗಳು ಮನೆಯ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ತಹಸೀಲ್ದಾರ ಕಚೇರಿ ಆವರಣದಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ರಿಯಾಜ್ ಇಸ್ಮಾಯಿಲ್‌ಸಾಬ್ ಉಣ್ಣಿಬಾವಿ, ಶ್ರೀವಿಷ್ಣು ಗಂಗಾಪೂರ, ಬಸವರಾಜ ಕೋಳೂರ ಮತ್ತಿತರರಿದ್ದರು.
ಮುದ್ದೇಬಿಹಾಳ: ಅಧಿಕಾರಿಗಳ ಧೋರಣೆಯಿಂದ ಬೇಸತ್ತ ಪಟ್ಟಣದ ಇಂದಿರಾ ನಗರದ ನಿವಾಸಿಗಳು, ಮನೆಗಳ ಹಕ್ಕು ಪತ್ರಕ್ಕಾಗಿ ತಹಸೀಲ್ದಾರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಹೋರಾಟ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಡಿಸೆಂಬರ್ 24ರಂದು ನಡುಗುವ ಚಳಿಯಲ್ಲಿ ನಿವಾಸಿಗಳು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದಾಗ, ಪರಿಸ್ಥಿತಿಯ ಗಂಭೀರತೆ ಅರಿತ ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿ ಸ್ಥಳಕ್ಕೆ ಧಾವಿಸಿ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸರ್ವೆ ಮಾಹಿತಿ ತರಿಸಿ, ಮೂರು ತಿಂಗಳೊಳಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಉತಾರೆ ನೀಡಲಾಗುವುದು ಎಂದು ಅಧಿಕೃತವಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ, ಐದು ತಿಂಗಳು ಕಳೆದರೂ ಅಧಿಕಾರಿಗಳು ಭರವಸೆ ಈಡೇರಿಸಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಧರಣಿ ನಿರತ ನಿವಾಸಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ, ನಮ್ಮನ್ನು ಕೇವಲ ಮತ ಕೇಳುವಾಗ ಮಾತ್ರ ನೆನಪಿಸಿಕೊಳ್ಳುವ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ನಮ್ಮ ಬದುಕಿನ ಬವಣೆ ಅರ್ಥವಾಗುತ್ತಿಲ್ಲವೇ? ಉತಾರ ಇಲ್ಲದೆ ಬ್ಯಾಂಕ್ ಸಾಲ ಸಿಗುತ್ತಿಲ್ಲ, ಮನೆ ದುರಸ್ತಿಗೆ ಅವಕಾಶವಿಲ್ಲ. ಸರ್ಕಾರದ ಸೌಲಭ್ಯಗಳಿಂದ ನಮ್ಮನ್ನು ವಂಚಿತರನ್ನಾಗಿ ಮಾಡಿದ್ದಾರೆ. ಈ ಬಾರಿ ಅಧಿಕಾರಿಗಳ ಯಾವುದೇ ಪೊಳ್ಳು ಭರವಸೆಗಳಿಗೆ ಮಣಿಯುವುದಿಲ್ಲ. ನಮ್ಮ ಕೈಗೆ ಮನೆ ಉತಾರ ಸೇರುವವರೆಗೂ ಹೋರಾಟದ ಸ್ಥಳದಿಂದ ಅಲುಗಾಡುವುದಿಲ್ಲ ಎಂದು ಕಿಡಿಕಾರಿದರು.