ಆಶಾ ಸಂಘಟನೆಯ ಜಿಲ್ಲಾ ಸಂಚಾಲಕ ಎಚ್.ಟಿ. ಭರತಕುಮಾರ ಮಾತನಾಡಿ, 2025ರ ಜನವರಿಯಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ ಕನಿಷ್ಠ 10,000 ರೂ. ಭರವಸೆ ನೀಡಿದ್ದರು. ಆದರೆ ಅದು ಇವತ್ತಿನವರೆಗೂ ಈಡೇರಿಸಿಲ್ಲ. ಅಲ್ಲದೇ, 2025ರ ಮಾರ್ಚ್ ಬಜೆಟ್‌ನಲ್ಲಿ ರಾಜ್ಯ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 1,000 ರೂ. ಹೆಚ್ಚಳ ಮಾಡುವುದಾಗಿ ಹೇಳಿದ್ದರೂ ಸಹ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಹೆಚ್ಚಳ ಮಾಡಲೇ ಇಲ್ಲ. ಜತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಈಗಿರುವ 5,000 ರೂ. ಗೌರವಧನ 8,000 ರೂ. ಏರಿಸುವುದಾಗಿ ಹೇಳಿದ್ದು ಕೂಡ ಅಧಿಕಾರಕ್ಕೆ ಬಂದ ನಂತರ ಅದನ್ನೂ ಮರೆತಿದ್ದಾರೆ. ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.