

ವಿಜಯಪುರ: ಬರದ ಸಂಕಷ್ಟದಿಂದ ಬಳಲುತ್ತಿರುವ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ಬರ ಪಟ್ಟಿಯಿಂದ ವಂಚಿತವಾಗಿರುವ ವಿಚಾರ ಇದೀಗ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ.
ತಮ್ಮದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಈ ಹಿಂದೆ ವಾಗ್ದಾಳಿ ನಡೆಸಿದ್ದ ಶಾಸಕ ಸಿ.ಎಸ್. ನಾಡಗೌಡರು, ಇದೀಗ ಬಿಜೆಪಿಯ ಹೋರಾಟ ಚುರುಕು ಪಡೆಯುತ್ತಿದ್ದಂತೆ ವಾಸ್ತವ ಅರಿತು ಮಾತನಾಡಬೇಕು ಎಂದು ಹೇಳುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬರ ಘೋಷಣೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಯಮಾವಳಿಗಳೇ ಕಾರಣ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆದರೆ, ಆಗ ಸಚಿವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ಶಾಸಕರು ತೀವ್ರ ವಾಗ್ದಾಳಿ ನಡೆಸಿದ್ದರು. ತಮ್ಮದೇ ಪಕ್ಷದ ವಿರುದ್ಧ ಹರಿಹಾಯ್ದಿದ್ದರಲ್ಲದೇ ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನೇರಾನೇರ ಆರೋಪ ಮಾಡಿದ್ದರು. ಇದೀಗ ಪ್ರತಿಪಕ್ಷದ ಹೋರಾಟದ ಬಿಸಿ ತಟ್ಟುತ್ತಿದ್ದಂತೆ ಕೇಂದ್ರದ ನಿಯಮಾವಳಿಗಳ ಅರಿವು ಮೂಡಿತೇ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಮೂಡಿದೆ.
ಈ ಮೊದಲು ಹೇಳಿದ್ದೇನು?:
‘ರಾಜಕೀಯ ಪ್ರೇರಿತವಾಗಿ, ನಾಯಕರ ಕೈವಾಡದಿಂದ ಮುದ್ದೇಬಿಹಾಳಕ್ಕೆ ಅನ್ಯಾಯ ಆಗಿದೆ. ನಮ್ಮವರೇ ಕೂತುಕೊಂಡು ಅನ್ಯಾಯ ಮಾಡಿದ್ದಾರೆ. ನಾ ಕ್ಯಾಬಿನೇಟ್‌ನಲ್ಲಿಲ್ಲ, ಮಂತ್ರಿನೂ ಅಲ್ಲ, ಒಳಗಡೆ ಏನು ನಡೆಯಿತು ಅಂತ ಗೊತ್ತಿಲ್ಲ. ಕ್ಯಾಬಿನೆಟ್‌ನಲ್ಲಿರುವ ಜಿಲ್ಲಾ ಮಂತ್ರಿಗಳು ನಿರ್ಲಕ್ಷೃ ವಹಿಸಿದ್ದಾರೆ’ ಎಂದು ಶಾಸಕ ನಾಡಗೌಡರು ನೇರ ಆರೋಪ ಮಾಡಿದ್ದರು.
ಮುಂದುವರಿದು ‘ಮುದ್ದೇಬಿಹಾಳಕ್ಕೆ ಅನ್ಯಾಯ ಮಾಡುವುದೇ ನಿಮ್ಮ ವಿಚಾರ ಆಗಿದ್ದರೆ ಮಂತ್ರಿ ಸ್ಥಾನ ತ್ಯಜಿಸಿ ಬನ್ನಿ ರಾಜಕಾರಣ ಮಾಡೋಣ. ಬಿಜೆಪಿಗರಿಗೆ ಫೋನ್ ಮಾಡಿ ಮನವಿ ಸಲ್ಲಿಸಲು ಬನ್ನಿ ಎನ್ನುತ್ತಾರೆ. ಅವರಿಂದ ಮನವಿ ಪಡೆಯುತ್ತಾರೆ. ನಾಳೆ ಬರ ಘೋಷಣೆಯಾದರೆ ಅದರ ಕ್ರೆಡಿಟ್ ಸರ್ಕಾರಕ್ಕೂ ಹೋಗಬಾರದು ಇತ್ತ ಶಾಸಕರಿಗೂ ಸಿಗಬಾರದೆಂಬುದು ಉದ್ದೇಶ. ಇಂಥವರನ್ನು ನಮ್ಮ ಜಿಲ್ಲಾ ಆಡಳಿತ ಮಂತ್ರಿ ಎಂದು ಕರೆಯಬೇಕೇ?’ ಎಂದಿದ್ದರು.
ಈಗ ಹೇಳುತ್ತಿರುವುದೇನು?:
ಮುದ್ದೇಬಿಹಾಳ ಕ್ಷೇತ್ರವನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಲು ಆಗ್ರಹಿಸಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಯಾವಾಗ ಹೋರಾಟ ಚುರುಕುಗೊಳಿಸಿದರೋ ಆಗ ಶಾಸಕ ಸಿ.ಎಸ್. ನಾಡಗೌಡರ ಮಾತಿನ ವರಸೆ ಬದಲಾದಂತಿದೆ. ತಾಳಿಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಸ್. ನಾಡಗೌಡರು, ‘ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಯಾರಿಂದಲೂ ಆಗಬಾರದು’ ಎಂದಿದ್ದಾರಲ್ಲದೇ ‘ಕೇಂದ್ರ ಸರ್ಕಾರದ ನಿಯಮಾವಳಿ ಅರಿತುಕೊಳ್ಳಬೇಕು’ ಎಂದಿದ್ದಾರೆ. ಹಾಗಾದರೆ, ಈ ಮುಂಚೆ ತಮ್ಮದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವಾಗ ಈ ವಾಸ್ತವದ ಅರಿವು ಶಾಸಕರಿಗಿರಲಿಲ್ಲವೇ? ಎಂಬುದೇ ಕಾವೇರಿದ ಚರ್ಚೆಯ ವಿಷಯ.
ಕೇಂದ್ರ ಸರ್ಕಾರದ ಬರ ಘೋಷಣೆ ನಿಯಮಾವಳಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಂದಾಯ ಸಚಿವರು ನೀಡಿದ್ದ ವಿವರಣೆಯನ್ನು ಆಗಲೇ ಪರಿಗಣಿಸಬಹುದಾಗಿತ್ತಲ್ಲವೇ? ರಾಜಕೀಯ ಒತ್ತಡ, ಪ್ರತಿರೋಧ ಹೆಚ್ಚಾದ ಬಳಿಕವಷ್ಟೇ ನಿಯಮಾವಳಿಗಳ ನೆನಪಾಗಿದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ರೈತರ ಪ್ರಶ್ನೆಗೆ ಉತ್ತರ ಯಾವಾಗ ?:
ಬರದ ಬವಣೆಯಲ್ಲಿರುವ ರೈತರಿಗೆ ರಾಜಕೀಯ ವಾಕ್ಸಮರಕ್ಕಿಂತ ಪರಿಹಾರ ಮುಖ್ಯ. ಕ್ಷೇತ್ರವನ್ನು ಬರ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲದಿದ್ದರೆ ಅದರ ಕಾರಣವೇನು? ಕೇಂದ್ರದ ನಿಯಮಾವಳಿಗಳೇ ಅಡ್ಡಿಯಾಗಿದ್ದರೆ ರಾಜ್ಯ ಸರ್ಕಾರದ ಪ್ರಯತ್ನಗಳೇನು? ಕ್ಷೇತ್ರದ ರೈತರಿಗೆ ಪರಿಹಾರ ಒದಗಿಸಲು ಕೈಗೊಂಡ ಕ್ರಮಗಳೇನು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಬೇಕಿದೆ.
ಮುದ್ದೇಬಿಹಾಳ ಕ್ಷೇತ್ರ ಬರ ಪಟ್ಟಿಯಿಂದ ವಂಚಿತವಾಗಿರುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು, ಕೇಂದ್ರದ ಬರ ಘೋಷಣೆ ನಿಯಮಾವಳಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಪ್ರಯತ್ನಗಳ ಬಗ್ಗೆ ಪಾರದರ್ಶಕ ಮಾಹಿತಿ ಹೊರಬರಬೇಕಿದೆ. ಬರದ ಸಂಕಷ್ಟದಲ್ಲಿರುವ ರೈತರಿಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಸರ್ಕಾರದ ಸ್ಪಷ್ಟ ನಿಲುವು ಮತ್ತು ಪರಿಹಾರ ಕ್ರಮಗಳ ಅಗತ್ಯವಿದೆ.