ವಿಜಯಪುರ: ‘ಮುಂಬರುವ 2029ರೊಳಗೆ ಎನ್‌ಡಿಎ ಆಡಳಿತವಿರುವ ದೇಶದ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಬಿಜೆಪಿ ಸನ್ನದ್ಧವಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
‘ಈಗಾಗಲೇ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ್ದು, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆ ರೂಪುಗೊಳ್ಳುತ್ತಿವೆ. ಹೀಗಾಗಿ ಆದಷ್ಟು ಬೇಗ ಬಹುದಿನದ ಕನಸೊಂದು ನನಸಾಗುತ್ತಿದೆಯಲ್ಲದೇ, ದೇಶದ ಜನರ ನಿರೀಕ್ಷಿತ ಬೇಡಿಕೆ ಈಡೇರಲಿದೆ’ ಎಂದಿದ್ದಾರೆ.
‘ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂತ ಎನ್‌ಡಿಎ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದೆ. ಒಂದೇ ಒಂದು ಗದ್ದಲ, ಗಲಭೆಗೆ ಅವಕಾಶ ಇಲ್ಲದಂತೆ ಮಹತ್ವದ ಮಸೂದೆಗಳನ್ನು ಮಂಡಿಸಿದೆಯಲ್ಲದೇ ಅನೇಕ ಕಾಯ್ದೆ ಮತ್ತು ಕಾನೂನುಗಳನ್ನು ಜಾರಿಗೊಳಿಸಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧುಗೊಳಿಸಲಾಗಿದೆ. ಸ್ವಾತಂತ್ರೃ ಕಾಲದಿಂದಲೂ ಬಗೆ ಹರಿಯದ ಸಮಸ್ಯೆಯಾಗಿದ್ದ ಬಾಬರಿ ಮಸೀದಿಯನ್ನು ತೆರವುಗೊಳಿಸಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಸುದೀರ್ಘಾವಧಿ ದೇಶವನ್ನಾಳಿದ ಕಾಂಗ್ರೆಸ್‌ನಿಂದ ಮಾಡಲಾಗದ ಕಾರ್ಯ ಎನ್‌ಡಿಎ ಮಾಡಿದೆ. ಇದೀಗ ಏಕರೂಪ ನಾಗರಿಕ ಸಂಹಿತೆ ಕೂಡ ಜಾರಿಗೊಳಿಸುವುದಾಗಿ ಅಮಿತ್ ಷಾ ಅವರು ಹೇಳಿರುವುದು ಬಹುದಿನದ ಕನಸು ನನಸಾಗುತ್ತಿದೆ’ ಎಂದರು.
‘ದೇಶದ ಪ್ರತಿಯೊಬ್ಬ ನಾಗರಿಕನಿಗೂ ಒಂದೇ ರೀತಿಯ ಕಾನೂನು ಅನ್ವಯವಾಗಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಮಹತ್ವದ ಹೆಜ್ಜೆಯಾಗಲಿದೆ. ಮಹಿಳೆಯರ ಹಕ್ಕುಗಳು, ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಜೊತೆಗೆ ದೇಶದಲ್ಲಿ ಏಕತೆ ಮತ್ತು ಸಮಾನತೆಯ ಮನೋಭಾವವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಸಂಹಿತೆ ಸಹಕಾರಿಯಾಗಲಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.