ಪಾವತಿಸದಿದ್ದರೆ ಬಿಲ್ ನೀರಿಲ್ಲ ಬಿಲ್‌ಕುಲ್ ! ಬಾರದ ಅನುದಾನಕ್ಕಾಗಿ ಬಕ ಪಕ್ಷಿಯಂತೆ ಕಾಯುತ್ತಿರುವ ಗುತ್ತಿಗೆದಾರ

ಇಂಡಿ ತಾಲೂಕಿನ ಅಗರಖೇಡದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ.
ಇಂಡಿ ತಾಲೂಕಿನ ಅಗರಖೇಡದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ.
Published on

ಪ್ರಮುಖ ಮುಖ್ಯಾಂಶಗಳು

  • ಬಹುಹಳ್ಳಿ ಕುಡಿಯುವ ನೀರಿನ ಯೋಜನೆ
  • ಸರ್ಕಾರದಿಂದ ಬಾರದ ಅನುದಾನ
  • ಬಕ ಪಕ್ಷಿಯಂತೆ ಕಾಯುತ್ತಿರುವ ಗುತ್ತಿಗೆದಾರ
  • ಕುಡಿಯುವ ನೀರು ಪೂರೈಕೆ ಸ್ಥಗಿತಕ್ಕೆ ನಿರ್ಧಾರ
  • ಬರದೂರಿನಲ್ಲಿ ಬೇಸಿಗೆ ಬವಣೆ ಆರಂಭ
ವಿಜಯಪುರ: ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಬಾಕಿ ಹಣಕ್ಕಾಗಿ ಬಾಯ್ತೆರೆದು ಕುಳಿತಿರುವ ಗುತ್ತಿಗೆದಾರರು ‘ಪಾವತಿಸದಿದ್ದರೆ ಬಿಲ್- ನೀರು ಕೊಡಲ್ಲ ಬಿಲ್‌ಕುಲ್’ ಎಂಬ ಘೋಷಣೆ ಮೊಳಗಿಸಿದ್ದಾರೆ !
ಭೀಮಾತೀರದ ಕೆಲವು ಹಳ್ಳಿಗಳಲ್ಲಿ ಈಗಾಗಲೇ ನೀರು ಪೂರೈಕೆ ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿರುವ ಗುತ್ತಿಗೆದಾರರು ಅಧಿಕಾರಿಗಳ ಸಮಜಾಯಿಷಿ, ವಿನಂತಿ ಮೇರೆಗೆ ನೀರು ಪೂರೈಸುತ್ತಿದ್ದರಾದರೂ ಸಮರ್ಪಕವಾಗಿ ನೀರಿನ ಲಭ್ಯತೆ ಇಲ್ಲ. ಹೀಗಾಗಿ ಬಾಕಿ ಹಣಕ್ಕಾಗಿ ಗುತ್ತಿಗೆದಾರ ಬಾಯ್ತೆರೆದು ಕುಳಿತರೆ ನೀರಿಗಾಗಿ ಜನಸಾಮಾನ್ಯರು ಬಾಯ್ತೆರೆಯುವ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಆರಂಭದಲ್ಲೇ ಪರಿಸ್ಥಿತಿ ಹೀಗಾದರೆ ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿರುವ ಬಿಸಿಲಾರ್ಭಟದ ಮಧ್ಯೆ ಜೀವ ಜಲಕ್ಕೆ ಸಮಸ್ಯೆಯುಂಟಾದರೆ ಹೇಗೆ? ಎಂಬ ಆತಂಕ ಎದುರಾಗಿದೆ. ಈ ಮಧ್ಯೆ ಗುತ್ತಿಗೆದಾರರು ಆಗಾಗ ನೀರು ಪೂರೈಕೆ ಸ್ಥಗಿತಗೊಳಿಸುತ್ತಿದ್ದು, ಆತಂಕ ಇಮ್ಮಡಿಸಿದೆ.

ಯೋಜನೆ ವಿವರ

ಜಿಲ್ಲೆಯಲ್ಲಿ 211 ಗ್ರಾಮ ಪಂಚಾಯಿತಿಗಳಿದ್ದು, 620 ಗ್ರಾಮಗಳಿವೆ. ಆ ಪೈಕಿ 1078 ಜನವಸತಿಗಳಿದ್ದು, ಬಹುಗ್ರಾಮ ಕುಡಿಯುವ ನೀರಿನ 40 ಯೋಜನೆಗಳಿವೆ. ಒಟ್ಟು 639 ಜನವಸತಿಗಳನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನಿರ್ವಹಿಸಲಾಗುತ್ತಿದೆ. ಆಲಮಟ್ಟಿಯಿಂದ (10 ಯೋಜನೆ), ನಾರಾಯಣಪುರ (8), ಭೀಮಾ ನದಿ (5) ಹಾಗೂ ಕಾಲುವೆ ಜಾಲ(17)ಗಳ ಮೂಲಕ ಬಹುಹಳ್ಳಿ ಕುಡಿಯುವ ನೀರಿನ (40) ಯೋಜನೆಗಳಿಗೆ ನೀರು ಪೂರೈಕೆಯಾಗುತ್ತಿದೆ. ಅಲ್ಲಿಂದ ಜನವಸತಿ ತಲುಪುತ್ತಿದ್ದು, ಕೆಲವೆಡೆ ಜಲ ಜೀವನ್ ಮಿಷನ್ ಮೂಲಕ ಮನೆ ಬಾಗಿಲಿಗೆ ನೀರು ತಲುಪುತ್ತಿದೆ. ಆದರೆ, ‘ಎ ಮತ್ತು ಎಂ ಲೆಕ್ಕಶೀರ್ಷಿಕೆಯಡಿ’ ಬಿಲ್ ಪಾವತಿಯಾಗದ ಹಿನ್ನೆಲೆ ನಿರ್ವಹಣೆ ಕಷ್ಟವಾಗುತ್ತಿದೆ.

ರೂ.28 ಕೋಟಿ ಬಾಕಿ

2025-26ನೇ ಸಾಲಿನ ಮಾರ್ಚ್ ಅಂತ್ಯದವರೆಗಿನ ಅವಧಿ ಪರಿಗಣಿಸಿದರೆ ಓ ಮತ್ತು ಎಂ ಲೆಕ್ಕ ಶೀರ್ಷಿಕೆಯಡಿ ಒಟ್ಟು 4458 ಲಕ್ಷ ರೂ. ಬಿಲ್ ಪಾವತಿಯಾಗಬೇಕಿದೆ. 2026ರ ಫೆಬ್ರವರಿ 11ರವರೆಗಿನ ಅವಧಿ ಪರಿಗಣಿಸಿದರೆ ಸದ್ಯಕ್ಕೆ 28 ಕೋಟಿ ರೂಪಾಯಿ ನೀಡಬೇಕಿದೆ. ಈಗಾಗಲೇ ಬಿಡುಗಡೆಯಾದ 3ನೇ ತ್ರೈಮಾಸಿಕ ಅನುದಾನದಡಿ ಭಾಗಶಃ ಬಿಲ್‌ಗಳನ್ನು ಪಾವತಿಸಲಾಗಿದೆ. 4ನೇ ತ್ರೈಮಾಸಿಕ ಅನುದಾನ ಬಿಡುಗಡೆಯಾದ ನಂತರ ಮತ್ತೊಮ್ಮೆ ಭಾಗಶಃ ಬಿಲ್ ಪಾವತಿಸಲಾಗುವುದು. ಹೀಗಾಗಿ ಯೋಜನೆ ಸ್ಥಗಿತಗೊಳಿಸದೆ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಹೆಚ್ಚುವರಿಯಾಗಿ ಅನುದಾನ ಕೋರಿ ಆರ್ಥಿಕ ಇಲಾಖೆಗೂ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗುತ್ತಿದೆ. ಆದರೆ, ಸಕಾಲಕ್ಕೆ ಬಿಲ್ ಪಾವತಿಯಾಗದೇ ಹೋದರೆ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೀಡಾಗಬೇಕಾಗುತ್ತದೆಯಲ್ಲದೇ ನಿರ್ವಹಣೆ ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಲಿದೆ.

ಬಿಲ್ ಪಾವತಿಸಲು ಪ್ರತಿ ತಿಂಗಳು ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈವರೆಗೆ 28 ಕೋಟಿ ರೂ. ಬಾಕಿ ಇದ್ದು ಕೂಡಲೇ ಬಿಡುಗಡೆಗೊಳಿಸಲು ಮನವಿ ಮಾಡಲಾಗಿದೆ. ಗುತ್ತಿಗೆದಾರರು ಅಲ್ಲಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಿದ್ದರಾದರೂ ಮನವಿ ಮಾಡಿ, ಮನವೊಲಿಸಿ ನೀರು ಪೂರೈಸಲಾಗುತ್ತಿದೆ. ಸದ್ಯಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಿಲ್ಲ. ಅನುದಾನ ಬರುತ್ತಿದ್ದಂತೆಯೇ ಬಿಲ್ ಪಾವತಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net