ನಂದಿ ಕಾರ್ಖಾನೆಯಲ್ಲಿ ಭಾರಿ ಗೋಲ್‌ಮಾಲ್, ಕಬ್ಬಿನ ತೂಕದಲ್ಲಿ ಮೋಸ, ರೈತರ ಹೆಸರಲ್ಲಿ ಬೋಗಸ್ ರಸೀದಿ, ರೂ.1.87 ಕೋಟಿಗೂ ಅಧಿಕ ನಷ್ಟ

ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ.
ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ.
Published on

ಪ್ರಮುಖ ಮುಖ್ಯಾಂಶಗಳು

  • ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ವಂಚನೆ
  • ಕಬ್ಬಿನ ತೂಕದಲ್ಲಿ ಭಾರಿ ಮೋಸ
  • ರೈತರ ಹೆಸರಲ್ಲಿ ಬೋಗಸ್ ರಸೀದಿ
  • ರೂ.1.87 ಕೋಟಿಗೂ ಅಧಿಕ ನಷ್ಟ
ವಿಜಯಪುರ: ಕೃಷ್ಣಾ ತೀರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಗೋಲ್‌ಮಾಲ್ ನಡೆದಿದೆ !
ಕಬ್ಬಿನ ತೂಕದಲ್ಲಿ ಭಾರಿ ಮೋಸ ನಡೆದಿದ್ದು, ರೈತರ ಹೆಸರಿನಲ್ಲಿ ಬೋಗಸ್ ರಸೀದಿ ಸಿದ್ಧಪಡಿಸಿ ವಂಚನೆಗೈದಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 1.87 ಕೋಟಿ ರೂಪಾಯಿ ವಂಚನೆ ನಡೆದಿರುವುದು ಕಂಡು ಬಂದಿದೆಯಾದರೂ ತನಿಖೆ ವೇಳೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಕಳೆದ ಎರಡು ವರ್ಷಗಳಲ್ಲಾದ ಮೋಸ ಮತ್ತು ವಂಚನೆ ಪರಿಗಣಿಸಿದರೆ 10 ಕೋಟಿ ರೂ.ಗಳಿಗೂ ಅಧಿಕ ವಂಚನೆ ನಡೆದಿರಬಹುದಾದ ಸಾಧ್ಯತೆ ಕಂಡು ಬರುತ್ತಿದೆ.

ಪ್ರಕರಣದ ವಿವರ

ನಂದಿ ಕಾರ್ಖಾನೆಯ ಕಬ್ಬು ತೂಕದ ವಿಭಾಗದಲ್ಲಿ ‘ವೇ ಬ್ರಿಡ್ಜ್ ಆಪರೇಟರ್’ ಎಂದು ಕಾರ್ಯನಿರ್ವಹಿಸುತ್ತಿದ್ದ ಧರೆಪ್ಪ ದುಂಡಪ್ಪ ನಾವಿ ಎಂಬಾತ ಕಬ್ಬಿನ ಲೋಡ್ ತೂಕದಲ್ಲಿ ಮೋಸ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಆ ಪ್ರಕಾರ 2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ತೂಕದ ರಸೀದಿಗಳನ್ನು ಪರಿಶೀಲಿಸಲಾಗಿ ಬೋಗಸ್ ಮಾಡಿರುವುದು ಕಂಡು ಬಂದಿದೆ. ಕೂಡಲೇ ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಬಿ.ಕೆ. ದೇಗಿನಾಳ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದಾರೆ. ಬಳಿಕ ಸಮಗ್ರವಾಗಿ ತನಿಖೆಗೆ ಮುಂದಾದಾಗ ಕಾರ್ಖಾನೆಗೆ ಕಬ್ಬು ಕಳುಹಿಸದೇ ಇರುವ ಬೇರೆ ಬೇರೆ ರೈತರ ಹೆಸರಿನಲ್ಲಿ 17981.725 ಮೆಟ್ರಿಕ್ ಟನ್ ತೂಕ ಬೋಗಸ್ ಮಾಡಲಾಗಿದೆ. ಒಟ್ಟು 1,87,18,324 ರೂಪಾಯಿ ಹಣ ತಮ್ಮ ಖಾತೆಗೆ ಹಾಕಿಕೊಂಡು ಕಾರ್ಖಾನೆಗೆ ನಷ್ಟ ಮಾಡಲಾಗಿದೆ. ಈ ಕುರಿತು ಕಾರ್ಖಾನೆಯ ಪ್ರಭಾರ ಪ್ರಧಾನ ವ್ಯವಸ್ಥಾಪಕ ಅಶೋಕ ಸಂಗಪ್ಪ ತಿಪರೆಡ್ಡಿ ಫೆ.12ರಂದೇ ಬಬಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನಿಖೆ ಚುರುಕು

ಕಳೆದ ಹಲವು ವರ್ಷಗಳಿಂದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಒಂದಿಲ್ಲಾ ಒಂದು ಕಾರಣಕ್ಕೆ ವಿವಾದದ ಗೂಡಾಗುತ್ತಲೇ ಇದೆ. ಈ ಹಿಂದೆ ಯಂತ್ರೋಪಕರಣಗಳ ಖರೀದಿಯಲ್ಲೂ ಸಾಕಷ್ಟು ಅವ್ಯವಹಾರದ ಆರೋಪ ಕೇಳಿ ಬಂದಿದ್ದವು. ಬಾಯ್ಲರ್ ಸ್ಪೋಟದಂಥ ಪ್ರಮುಖ ಘಟನಾವಳಿಗಳಿಗೆ ಕಳಪೆ ಗುಣಮಟ್ಟದ ಯಂತ್ರೋಪಕರಣಗಳ ಖರೀದಿಯೇ ಕಾರಣ ಎಂಬ ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಇದೀಗ ಕಬ್ಬಿನ ತೂಕದಲ್ಲಿ ನಡೆದಿರುವ ಗೋಲ್‌ಮಾಲ್ ರೈತರಲ್ಲಿ ಆತಂಕ ಸೃಷ್ಠಿಸಿದೆ. ಸಹಕಾರಿ ತತ್ವದಡಿ ನಡೆಯುತ್ತಿರುವ ಈ ಕಾರ್ಖಾನೆಗಾಗುವ ನಷ್ಟ ನೇರವಾಗಿ ರೈತರಿಗಾಗುವ ನಷ್ಟವೇ ಆಗಿದೆ. ಇದೀಗ ಕಂಡು ಬಂದ ವಂಚನೆ ಪ್ರಕರಣದಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗಲಿದೆ. ಸದ್ಯಕ್ಕೆ 1,87,18,324 ರೂ.ನಷ್ಟ ಕಂಡು ಬಂದಿದ್ದರೂ ತನಿಖೆ ವೇಳೆ ಇನ್ನಷ್ಟು ನಷ್ಟವಾಗಿರುವ ಸಾಧ್ಯತೆ ಕಂಡು ಬರುತ್ತಿದೆ. 2024-25ನೇ ಸಾಲಿನಲ್ಲಿಯೂ ಈ ವಂಚನೆ ನಡೆದಿರಬಹುದಾಗಿದ್ದು, ಅಂದಾಜು 10 ಕೋಟಿ ರೂ.ವಂಚನೆಯಾಗಿರುವ ಸಧ್ಯತೆ ಇದ್ದು ಸಂಪೂರ್ಣ ತನಿಖೆ ಬಳಿಕವೇ ಸ್ಪಷ್ಟತೆ ಸಿಗಲಿದೆ.

ವಂಚನೆಯ ಸ್ವರೂಪ

ಲಭ್ಯ ಮಾಹಿತಿ ಪ್ರಕಾರ ನಕಲಿ ಟೋಕನ್ ತಯಾರಿಸಿ ಈ ವಂಚನೆ ನಡೆದಿದೆ. ಕಾರ್ಖಾನೆಯಲ್ಲಿರುವ ಕೇನ್ ಸೂಪರ್‌ವೈಸರ್ ರೈತರ ಜಮೀನಿಗೆ ತೆರಳಿ ಕಬ್ಬಿನ ಜಿಪಿಎಸ್ ಮಾಡಿ ರೈತರ ಸಂಪೂರ್ಣ ವಿವರವನ್ನು ಕಾರ್ಖಾನೆಗೆ ಕಳುಹಿಸುತ್ತಾನೆ. ಟ್ರಾೃಕ್ಟರ್ ವಿವರ ಸಹ ಕಾರ್ಖಾನೆಗೆ ನೀಡಲಿದ್ದು, ಆ ಬಳಿಕವೇ ಟೋಕನ್ ಸಿದ್ಧಗೊಳ್ಳಲಿದೆ. ಬಳಿಕ ಕಬ್ಬು ತುಂಬಿದ ಟ್ರಾೃಕ್ಟರ್ ವೇಬ್ರಿಡ್ಜ್ ಮೇಲೆ ನಿಲ್ಲುತ್ತದೆ. ಈ ವೇಳೆ ಟ್ರಾೃಕ್ಟರ್ ಚಾಲಕ ಇಳಿಯಬೇಕು. ನಂತರ ಟ್ರಾೃಕ್ಟರ್ ಚಾಲಕನ ಸಹಿತ ಇಡೀ ಕಬ್ಬು ತುಂಬಿದ ಟ್ರಾೃಕ್ಟರ್‌ನ ತೂಕ ಮಾಡಿ ಟೋಕನ್ ಹಿಂದುಗಡೆ ಬರೆಯಾಲಗುತ್ತದೆ. ಆ ಬಳಿಕ ಟ್ರಾೃಕ್ಟರ್‌ನಿಂದ ಕಬ್ಬು ಖಾಲಿ ಮಾಡಿ ವಾಪಸ್ ಬರುವಾಗ ಖಾಲಿ ಟ್ರಾೃಕ್ಟರ್‌ನ ತೂಕ ಮಾಡಿ ಅದರ ಮಾಹಿತಿಯುಳ್ಳ ರಸೀದಿ ಕೊಟ್ಟು ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಫೀರ್ಡ್ ಆಫೀಸರ್ ಜೊತೆಗೂಡಿ ನಕಲಿ ಆಧಾರ್ ಕಾರ್ಡ್, ವಿಳಾಸ ಬಳಸಿ ನಕಲಿ ಟೋಕನ್ ತಯಾರಿಸಿ ಮೋಸಗೈದಿರುವುದು ಕಂಡು ಬಂದಿದೆ. ಕಾರ್ಖಾನೆಯಲ್ಲಿ ಕಬ್ಬಿನ ರಿಕವರಿ ಕಡಿಮೆ ಬರುತ್ತಿರುವ ಕಾರಣಕ್ಕೆ ಆಡಳಿತ ಮಂಡಳಿಯವರು ಪರಿಶೀಲನೆಗೆ ಮುಂದಾದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದ ಮೇರೆಗೆ ಸಿಪಿಐ ರಮೇಶ ಅವಜಿ ಹಾಗೂ ಬಬಲೇಶ್ವರ ಪಿಎಸ್‌ಐ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net