ಹಿರೇಮಸಳಿ ರಸ್ತೆಗೆ ದುರಸ್ಥಿ ಭಾಗ್ಯ, ವಿಜಯವಾಣಿ ಕಾರ್ಯಕ್ಕೆ ಗ್ರಾಮಸ್ಥರ ಶ್ಲಾಘನೆ

ಇಂಡಿ ತಾಲೂಕಿನ ಹಿರೇಮಸಳಿಯಲ್ಲಿರುವ ಪಿಎಂಜಿಎಸ್‌ವೈ ರಸ್ತೆಯಲ್ಲಿ ಜಂಗಲ್ ಕಟಿಂಗ್ ಕಾಮಗಾರಿ ಕೈಗೊಂಡಿರುವುದು.
ಇಂಡಿ ತಾಲೂಕಿನ ಹಿರೇಮಸಳಿಯಲ್ಲಿರುವ ಪಿಎಂಜಿಎಸ್‌ವೈ ರಸ್ತೆಯಲ್ಲಿ ಜಂಗಲ್ ಕಟಿಂಗ್ ಕಾಮಗಾರಿ ಕೈಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪಿಎಂಜಿಎಸ್‌ವೈ ಇಲಾಖೆಯಿಂದ ಸ್ಪಂದನೆ
  • ಗುತ್ತಿಗೆದಾರನಿಗೆ ಚಾಟಿ ಬೀಸಿದ ಅಧಿಕಾರಿಗಳು
  • ಜಂಗಲ್ ಕಟಿಂಗ್-ರಿಪೇರಿ ಕಾಮಗಾರಿ ಶುರು
ವಿಜಯಪುರ: ಗುತ್ತಿಗೆದಾರನ ನಿರ್ಲಕ್ಷೃದಿಂದಾಗಿ ಹದಗೆಟ್ಟ ರಸ್ತೆಯೊಂದಕ್ಕೆ ರಿಪೇರಿ ಭಾಗ್ಯ ಕರುಣಿಸಲಾಗಿದ್ದು, ‘ವಿಜಯವಾಣಿ’ ಕಾರ್ಯಕ್ಕೆ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಿಂದ ತಾಂಬಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಳ್ಳ ಹಿಡಿದಿತ್ತು. ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ’ಯಡಿ ನಿರ್ಮಾಣಗೊಂಡಿದ್ದ ಈ ರಸ್ತೆ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿತ್ತು. ಹೀಗಾಗಿ ಗ್ರಾಮಸ್ಥರು ‘ವಿಜಯವಾಣಿ’ಗೆ ಸಂಪರ್ಕಿಸಿ ಅಳಲು ತೋಡಿಕೊಂಡಿದ್ದರಲ್ಲದೇ ರಸ್ತೆ ದುರಸ್ಥಿಗೆ ಆಗ್ರಹಿಸಿದ್ದರು. ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.
ಪರಿಣಾಮ ಸೆ. 4ರಂದು ‘ಹಳ್ಳ ಹಿಡಿದ ಪಿಎಂಜಿಎಸ್‌ವೈ ರಸ್ತೆ’ ತಲೆಬರಹದಡಿ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಎಚ್ಚೆತ್ತುಕೊಂಡ ಅಧಿಕಾರಿ ವರ್ಗ ಗುತ್ತಿಗೆದಾರನ ಮೂಲಕ ಕಾಮಗಾರಿ ಆರಂಭಿಸಿದ್ದು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರನಿಗೆ ನೋಟಿಸ್

ಹಿರೇಮಸಳಿಯಿಂದ ಚಿಕ್ಕಮಸಳಿ, ಗೊರನಾಳ, ತೆನ್ನಿಹಳ್ಳಿ ಕ್ರಾಸ್ ಮೂಲಕ ತಾಂಬಾಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸಂಪೂರ್ಣ ಹಾಳಾಗಿತ್ತು. ಅಂದಾಜು 10 ಕಿಮೀ ಉದ್ದದ ಈ ರಸ್ತೆಯಲ್ಲಿ ತಗ್ಗು-ಗುಂಡಿಗಳಿಂದ ಆವೃತವಾಗಿದ್ದು ಸಂಚಾರಕ್ಕೆ ಅಯೋಗ್ಯವಾಗಿತ್ತು. ಗುಣಮಟ್ಟದ ಕೊರತೆಯಿಂದಾಗಿ ಈ ರಸ್ತೆ ರಿಪೇರಿಗೊಂಡ ಕೆಲವೇ ದಿನಗಳಲ್ಲಿ ಹಾಳಾಗುತ್ತಲೇ ಇದೆ. ಈ ಹಿಂದೆಯೂ ‘ವಿಜಯವಾಣಿ’ವರದಿ ಪ್ರಕಟಿಸಿದಾಗ ರಿಪೇರಿ ಕೈಗೊಳ್ಳಲಾಗಿತ್ತು. ಆಗಲೂ ಗ್ರಾಮಸ್ಥರು ಗುಣಮಟ್ಟದ ಬಗ್ಗೆ ಧ್ವನಿ ಎತ್ತಿದ್ದರು. ಬಳಿಕ ರಿಪೇರಿಗೊಂಡ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿತ್ತು. ಈಗಲೋ...ಆಗಲೋ...ಮತ್ತೆ ರಿಪೇರಿಯಾಗಬಹುದೆಂಬ ಜನರ ನಿರೀಕ್ಷೆ ಹಲವು ತಿಂಗಳುಗಟ್ಟಲೇ ಹುಸಿಯಾಯಿತು. ಮೂಲ ಗುತ್ತಿಗೆದಾರರು ತಾತ್ಕಾಲಿಕ ರಿಪೇರಿ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ. ಆಮೇಲೆ ಧ್ವನಿ ಎತ್ತುವವರೆಗೂ ಈ ರಸ್ತೆ ರಿಪೇರಿಯೇ ಆಗುವುದಿಲ್ಲ. ಜಿಲ್ಲೆಯಲ್ಲಿ ಈ ಯೋಜನೆಯಡಿ ಬಹುತೇಕ ರಸ್ತೆಗಳ ಸ್ಥಿತಿಯೂ ಇದೇ ಆಗಿದೆ ಎಂಬುದು ಗ್ರಾಮಸ್ಥರ ಆರೋಪ.

ಭರದಿಂದ ಸಾಗಿದ ಕಾಮಗಾರಿ

ತಾಂಬಾದಿಂದ ಗೊರನಾಳ, ಚಿಕ್ಕಮಸಳಿ ಹಾಗೂ ಹಿರೇಮಸಳಿಯವರೆಗೆ ಸದ್ಯ ಜಂಗಲ್ ಕಟಿಂಗ್ ಮಾಡಲಾಗುತ್ತಿದೆ. ಬಳಿಕ ತಗ್ಗು-ಗುಂಡಿಗಳನ್ನು ಮುಚ್ಚಿ ರಸ್ತೆ ರಿಪೇರಿಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಗ್ರಾಮಸ್ಥರು ರಸ್ತೆ ಹಾಳಾಗುವವರೆಗೂ ಬಿಟ್ಟಿದ್ದೇಕೆ? ಇಷ್ಟು ಸುದೀರ್ಘಾವಧಿ ರಸ್ತೆ ನಿರ್ವಹಣೆ ಮಾಡದೇ ಇರುವ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಯಾವುದೇ ಕಾರಣಕ್ಕೂ ಬಿಲ್ ಪಾವತಿಸಬಾರದು. ಪೂರ್ತಿ ರಸ್ತೆ ಡಾಂಬರೀಕರಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನನಗಿರುವ ಮಾಹಿತಿ ಪ್ರಕಾರ ಗುತ್ತಿಗೆದಾರನಿಗೆ ಈವರೆಗೆ ಬಿಲ್ ಪಾವತಿಸಿಲ್ಲ. ಈಗಾಗಲೇ 10 ನೋಟಿಸ್ ನೀಡಲಾಗಿದೆ. ಎ.ಎಸ್. ಪಾಟೀಲ ಎಂಬುವವರು ಮುಖ್ಯ ಗುತ್ತಿಗೆದಾರರು. ಕಪ್ಪು ಪಟ್ಟಿಗೆ ಸೇರಿಸಲು ಸಿದ್ಧತೆ ನಡೆದಿತ್ತು. ಇದೀಗ ಕಾಮಗಾರಿ ಆರಂಭಿಸಲಾಗಿದೆ. ಜಂಗಲ್ ಕ್ಲಿಯರ್ ಮಾಡಿಕೊಂಡು ಡ್ಯಾಮೇಜ್ ಕವರ್ ಮಾಡಿಕೊಳ್ಳಲಾಗುವುದು. ಇನ್ನೂ ಒಂದು ವರ್ಷ ನಿರ್ವಹಣೆ ಅವಧಿ ಇದೆ. ಐದು ವರ್ಷ ಮುಗಿದ ನಂತರ ಇಡೀ ರಸ್ತೆ ಪೂರ್ತಿ ಮಾಡಲೇಬೇಕು. ಪೂರ್ತಿ ಡಾಂಬರು ಮಾಡಿ ಜಿಲ್ಲಾ ಪಂಚಾಯಿತಿಗೆ ವರ್ಗಾಯಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net