ಐತಿಹಾಸಿಕ ನಗರಿಯಲ್ಲಿ ‘ಈದ್ ಮಿಲಾದುನ್ನಬಿ’ ವಿಜೃಂಭಣೆಯ ಆಚರಣೆ, ಬೃಹತ್ ಶಾಂತಿಯಾತ್ರೆ

ವಿಜಯಪುರ ನಗರದಲ್ಲಿ ಈದ್ ಮಿಲಾದುನ್ನಬಿ ಪ್ರಯುಕ್ತ ಭವ್ಯ ಶಾಂತಿ ಯಾತ್ರೆ ನಡೆಯಿತು.
ವಿಜಯಪುರ ನಗರದಲ್ಲಿ ಈದ್ ಮಿಲಾದುನ್ನಬಿ ಪ್ರಯುಕ್ತ ಭವ್ಯ ಶಾಂತಿ ಯಾತ್ರೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ಅವರ ಜಯಂತ್ಯುತ್ಸವ
  • ಭಾವೈಕ್ಯತೆ ಮೆರೆದ ಹಿಂದೂ ಮಠಾಧೀಶರು
  • ಶಾಂತಿಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದ ಧಾರ್ಮಿಕ ಮುಖಂಡರು

ವಿಜಯಪುರ: ಆದಿಲ್ ಶಾಹಿ ಸುಲ್ತಾರ ರಾಜಧಾನಿಯಾಗಿದ್ದ ಐತಿಹಾಸಿಕ ವಿಜಯಪುರ ನಗರದಲ್ಲಿ ಮಂಗಳವಾರ

ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ಅವರ 1500 ನೇ ಜಯಂತ್ಯುತ್ಸವ ಈದ್ ಮಿಲಾದುನ್ನಬಿ ಪ್ರಯುಕ ಅದ್ದೂರಿಯಾಗಿ ಮತ್ತು ಶಾಂತಿಯುತವಾಗಿ ಮೆರವಣಿಗೆ ನಡೆಸಲಾಯಿತು.

ಹಸಿರು ಬಾವುಟ ಹಿಡಿದ ಯುವಕರ ದಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ‘ಅಲ್ಲಾಹು ಅಕ್ಬರ್....ಯಾ ರಸೂಲ್ಲಾಹ...’ಎಂಬ ಉದ್ಘೋಷಗಳು ಪ್ರತಿಧ್ವನಿಸಿದವು. ಪ್ರವಾದಿ ಅವರ ಚಿಂತನೆ ಸಾರುವ ನಾತ್ (ಪವಿತ್ರ ಗೀತೆಗಳು) ಹಾಗೂ ಕವ್ಹಾಲಿಗಳ ಅನುರುಣಿಸಿದವು. ಮಾರ್ಗದುದ್ದಕ್ಕೂ ಮೆರವಣಿಗೆಗೆ ಪುಷ್ಪ ವೃಷ್ಠಿಗೈದು ಸ್ವಾಗತಿಸಲಾಯಿತು. ತಂಪು ಪಾನೀಯ, ಶರಬತ್, ಕುಡಿಯುವ ನೀರು ನೀಡಿ ಪ್ರೇರೇಪಿಸಲಾಯಿತು.
ಹಕೀಂ ವೃತ್ತದಿಂದ ಆರಂಭವಾದ ಬೃಹತ್ ಶಾಂತಿಯಾತ್ರೆ ಹಕೀಂ ಚೌಕ್, ಅತ್ತಾವುಲ್ಲಾ ಚೌಕ, ದಾತ್ರಿ ಮಸೀದಿ, ಟಿಪ್ಪು ಸುಲ್ತಾನ ಚೌಕ್, ಗಾಂಧಿ ಚೌಕ್, ಅಂಜುಮನ್ ಎ- ಇಸ್ಲಾಂ ಮುಖ್ಯ ಕಚೇರಿ, ಬಸವೇಶ್ವರ ವೃತ್ತದಿಂದ ಆಸಾರ್ ಮಹಲ್ ತಲುಪಿ ಸಂಪನ್ನವಾಯಿತು
ಹಜರತ್ ಹಾಸಿಂಪೀರ ದರ್ಗಾದ ಸಜ್ಜಾದೆ ನಷೀನ್ ಸೈಯ್ಯದ್ ಷಹಾ ಮುರ್ತುಜಾ ಹುಸೈನಿ ಹಾಶ್ಮಿ ಮುರ್ಷಿದ್ ಪೀರಾ, ಹಜರತ್ ಅರ್ಕಾಟ್ ದರ್ಗಾದ ಡಾ.ಸೈಯ್ಯದ್ ತಖೀ ಪೀರಾ ಹುಸೈನಿ, ಮನಗೂಳಿ ದರ್ಗಾದ ಡಾ.ಫೈರೋಜ್ ಇನಾಮದಾರ ಅವರು ಮೆರವಣಿಗೆಗೆ ಮೆರಗು ನೀಡಿದರು.

ಮಠಾಧೀಶರು ಸಾಥ್

ಹಿಂದೂ ಸಮಾಜದ ಅನೇಕ ಮಠಾಧೀಶರು ಶಾಂತಿಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆಲಮೇಲ ವಿರಕ್ತ ಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ದೇವರಹಿಪ್ಪರಗಿ ಅವುಗೇಶ್ವರ ತಪೋವನ ಪರದೇಸಿ ಮಠದ ಶಿವಯೋಗಿ ಶಿವಾಚಾರ್ಯರು, ದೇವರ ಹಿಪ್ಪರಗಿ ಜಡಿಮಠದ ಜಡಿಸಿದ್ದೇಶ್ವರ ಸ್ವಾಮೀಜಿ, ವಿರಕ್ತ ಮಠ ಮಸಬಿನಾಳದ ಸಿದ್ಧರಾಮಶಿವಾಚಾರ್ಯರು, ಮಮದಾಪುರವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ ಸೇರಿ ಅನೇಕ ಮಠಾಧೀಶರು ಪಾಲ್ಗೊಂಡು ಭಾವೈಕ್ಯತೆ ಮೆರೆದರು.

ಆಸಾರ್ ಮಹಲ್‌ನಲ್ಲಿ ಸಂದಲ್

ಐತಿಹಾಸಿಕ ಆಸಾರ್ ಮಹಲ್‌ನಲ್ಲಿ ಸಂದಲ್ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ಅವರ ಪವಿತ್ರ ಕೇಶಗಳನ್ನು ಇರಿಸಲಾಗಿರುವ ಪವಿತ್ರ ಪೆಟ್ಟಿಗೆಯನ್ನು ಸಾವಿರಾರು ಯುವಕರು ದರ್ಶನ ಮಾಡಿದರು. ಮುಶ್ರೀಫ್, ತಾವೀಲ್ದಾರ್ ಕುಟುಂಬಗಳ ಪ್ರಮುಖರು ಸಾಂಪ್ರದಾಯಿಕ ಹಾಗೂ ಶಾಹಿ ಕಿಲೀಕೈ ಮೂಲಕ ಕೋಣೆಯ ಬಾಗಿಲನ್ನು ತೆರೆದರು. ಎಲ್ಲ ಐತಿಹಾಸಿಕ ಸ್ಮಾರಕಗಳು ಬಣ್ಣದ ದೀಪಗಳಿಂದ ಕಂಗೊಳಿಸಿದವು. ಶಾಸ್ತ್ರಿ ಮಾರುಕಟ್ಟೆ, ಕೆಸಿ ಮಾರುಕಟ್ಟೆ, ಟಿಪ್ಪು ಸುಲ್ತಾನ್ ವೃತ್ತ, ಮಹಾತ್ಮ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬಣ್ಣದ ಬಲ್ಬ್‌ಗಳು ರಾರಾಜಿಸಿದವು. ಬೃಹತ್ ಕಟೌಟ್‌ಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net