ಇಂಡಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಇಂಡಿ ಪಟ್ಟಣದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ನಡೆಸಿದ ಬಂದ್ ಕರೆಯಲ್ಲಿ ಭಾಗವಹಿಸಿದ ಬೃಹತ್ ಜನಸ್ತೋಮ.
ಇಂಡಿ ಪಟ್ಟಣದಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ನಡೆಸಿದ ಬಂದ್ ಕರೆಯಲ್ಲಿ ಭಾಗವಹಿಸಿದ ಬೃಹತ್ ಜನಸ್ತೋಮ.
Published on
ಇಂಡಿ: ಟನ್ ಕಬ್ಬಿಗೆ 4 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ನೇತೃತ್ವದಲ್ಲಿ ಶುಕ್ರವಾರ ಕರೆ ನೀಡಿದ್ದ `ಇಂಡಿ ಬಂದ್'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೃಷಿ ಮಾರುಕಟ್ಟೆ, ವರ್ತಕರ ಸಂಘ, ಪಟ್ಟಣದ ವಿವಿಧ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ರಸ್ತೆ ಮೇಲೆ ಟಯರ್‌ಗೆ ಬೆಂಕಿ ಹಚ್ಚಿ, ಬೊಬ್ಬೆ ಹೊಡೆದು, ಹಲಿಗೆ ಬಾರಿಸಿ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವಶ್ಯಕ ಸೇವೆ ಹೊರತು ಪಡಿಸಿ ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು, ಸಾರಿಗೆ, ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಕಾಯಿಪಲ್ಲೆ, ಚಹಾ ಅಂಗಡಿಗಳು, ಹೋಟೆಲ್‌ಗಳು ಮುಚ್ಚಿದ್ದವು.
ವಾಹನಗಳ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡಿದರು. ಪಟ್ಟಣವು ಬಿಕೋ ಎನ್ನುತ್ತಿತ್ತು. ಪಟ್ಟಣದಲ್ಲಿ ಆಯೋಜಿಸಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿವಿಧ ಗ್ರಾಮಗಳಿಂದ ಬರುವ ಜನತೆಗೆ ತೀವ್ರ ತೊಂದರೆಯಾಯಿತು.

ಬಂದ್‌ಗೆ ಬೆಂಬಲ:

ಕರ್ನಾಟಕ ರೈತ ಸಂಘ , ಜೆಡಿಎಸ್, ಬಿಜೆಪಿ, ಕೆಆರ್‌ಎಸ್ ಪಕ್ಷ, ಕರವೇ, ಬಸವದಳ, ಇಂಡಿ ತಾಲೂಕು ಖಾಸಗಿ ವೈದ್ಯರ ಸಂಘ, ನಿವೃತ್ತ ಸೈನಿಕರ ಸಂಘ, ಕರ್ನಾಟಕ ಯುವ ರಕ್ಷಣಾ ವೇದಿಕೆ, ಟಿಎಸ್‌ಎಸ್ ಸಂಘ, ಅಟೋ ಚಾಲಕರು ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ವಿವಿಧ ಗ್ರಾಮಗಳ ರೈತರು ಬಂದ್ ಬೆಂಬಲಿಸಿದರು.
ಮಾಜಿ ಶಾಸಕ ರವಿಕಾಂತ ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮುಂದೆ ಗುರುವಾರ ರೈತರು ಪ್ರತಿಭಟನೆ ನಡೆಸಿದ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ, ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡರು ರೈತರ ಮೇಲೆ ದರ್ಪ ತೋರಿದ್ದಲ್ಲದೆ, ರೈತರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಕೂಡಲೇ ಶಾಸಕರು ರೈತರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಪಕ್ಷದ ಮುಖಂಡ ಬಿ.ಡಿ. ಪಾಟೀಲ, ಬಾಳು ಮುಳಜಿ, ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ, ಡಾ. ಅನೀಲ ವಾಲಿ, ಡಾ. ಎಸ್.ಎಂ. ಕೋಳಿ, ಬಿಜೆಪಿ ತಾಲೂಕು ಅಧ್ಯಕ್ಷ ಹಣಮಂತಗೌಡ ಪಾಟೀಲ, ದಯಾಸಾಗರ ಪಾಟೀಲ, ಗುಂದವಾನ ಪಟೇಲ, ಶೀಲವಂತ ಉಮರಾಣಿ, ಅನೀಲ ಜಮಾದಾರ ಮಾತನಾಡಿದರು.
ಮಲ್ಲಿಕಾರ್ಜುನ ಕಿವುಡೆ, ದೇವೆಂದ್ರ ಕುಂಬಾರ, ಕೆಆರ್‌ಎಸ್ ಪಕ್ಷದ ಅಶೋಕ ಜಾಧವ, ರೇವಣ್ಣ ಹತ್ತಳ್ಳಿ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಡಾ. ಎಂ.ಎಚ್. ಅಂಕಲಗಿ, ಡಾ. ರಮೇಶ ಪೂಜಾರಿ, ಡಾ. ಪರಮಾನಂದ ಬಿರಾದಾರ, ಡಾ. ಶಿವರಾಜ ಕೊಪ್ಪ, ಡಾ. ರಾಜು ತೋಳನೂರ, ಡಾ. ಕುಮಾರಗೌಡ ಪಾಟೀಲ, ಶಂಕರಗೌಡ ಬಂಡಿ, ರಾಜಶೇಖರ ಅಲಗೊಂಡ, ಅಂಬಣ್ಣ ಕವಟಗಿ ಇತರರಿದ್ದರು.
ರೈತ ಅದೃಷ್ಯಪ್ಪ ವಾಲಿ ಅವರು ಅರೆ ಬೆತ್ತಲೆ ಆಗಿ ಬಾರುಕೋಲಿನಿಂದ ಮೈಗೆ ಹೊಡೆದುಕೊಂಡು ಗಮನಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net