ಬರ ಪ್ರವಾಸ ಕೈಗೊಳ್ಳಿ-ಪರಿಹಾರ ನೀಡಿ, ಜಿಪಂ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಆಗ್ರಹ

ಉಮೇಶ ಕೋಳಕೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ
ಉಮೇಶ ಕೋಳಕೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
  • ರೈತರ ಸಮಸ್ಯೆ ಆಲಿಸಲು ಆಗ್ರಹ
  • ಶಾಸಕರ ಕಾರ್ಯವೈಖರಿಗೆ ಅಸಮಾಧಾನ
ವಿಜಯಪುರ: ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಅನ್ನದಾತರ ನೆರವಿಗೆ ಧಾವಿಸಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನೂ ಸಚಿವ ಸಂಪುಟ ರಚನೆಯಲ್ಲಿಯೇ ಕಾಲ ಹರಣ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕೋಳಕೂರ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬೆಳೆ ಹಾನಿ ಪರಿಶೀಲಿಸುವುದನ್ನು ಬಿಟ್ಟು ಇಡೀ ರಾಜ್ಯ ಸರ್ಕಾರವೇ ದೆಹಲಿಯಲ್ಲಿ ಠಿಕಾಣಿ ಹೂಡಿದೆ. ಇತ್ತ ರೈತರು ಮಳೆ-ಬೆಳೆ ಇಲ್ಲದೇ ಕಂಗಾಲಾಗಿದ್ದಾರೆ. ಜಾನುವಾರು ಮೇವು ಸಿಗದೇ ಪರಿತಪಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೂಡಲೇ ಸಂಪುಟ ರಚನೆಯ ಸರ್ಕಸ್ ಬಿಟ್ಟು ರೈತರ ಸಮಸ್ಯೆ ಆಲಿಸಬೇಕು. ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕು. ತ್ವರಿತವಾಗಿ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕ್ಷೇತ್ರದ ಜನರ ಪಾಲಿಗೆ ಶಾಸಕರ ಭೇಟಿ ‘ಮುಂಗಲಿ-ಮುಂಗಲಿ ಮೋತಿ ತೋರಿಸು’ ಎಂಬಂತಾಗಿದೆ. ತಿಂಗಳಲ್ಲಿ ಎರಡು ದಿನ ಕ್ಷೇತ್ರದಲ್ಲಿದ್ದರೆ ಇನ್ನುಳಿದ ಎಲ್ಲ ದಿನಗಳನ್ನು ರಾಜ್ಯ ರಾಜಧಾನಿ ಇಲ್ಲವೇ ದೇಶದ ರಾಜಧಾನಿಯಲ್ಲಿ ಕಳೆಯುತ್ತಿದ್ದಾರೆ. ಜನ ಯಾಕಾದರೂ ಈ ಕಾಂಗ್ರೆಸ್‌ಗೆ ಅಧಿಕಾರಕ್ಕೆ ತಂದೆವೋ ಎಂದು ಪಶ್ಚಾತಾಪ ಪಡುತ್ತಿದ್ದಾರೆ. ಗ್ಯಾರಂಟಿ ಹೆಸರಲ್ಲೇ ಅಧಿಕಾರವಧಿ ಪೂರ್ಣಗೊಳಿಸುತ್ತಿರುವ ಕಾಂಗ್ರೆಸ್‌ನ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಹದಗೆಟ್ಟ ರಸ್ತೆಗಳು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳು, ಮೂಲ ಸೌಕರ್ಯ ಕಾಣದ ಹಳ್ಳಿಗಳು, ಅಭಿವೃದ್ಧಿ ವಂಚಿತ ತಾಲೂಕು ಕೇಂದ್ರಗಳು ಕಾಂಗ್ರೆಸ್‌ನ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿವೆ ಎಂದು ಉಮೇಶ ಕೋಳಕೂರ ಹರಿಹಾಯ್ದಿದ್ದಾರೆ.
ಸಕಾಲಕ್ಕೆ ಸಾಮಾನ್ಯ ಸಭೆಗಳಾಗುತ್ತಿಲ್ಲ. ಕೆಡಿಪಿ ಸಭೆಗಳಂತೂ ಮರೀಚಿಕೆಯಾಗಿವೆ. ಆರಂಭದಲ್ಲಿ ಅದ್ಧೂರಿ ಚಾಲನೆ ಪಡೆದ ಜನಸಂಪರ್ಕ ಸಭೆಗಳು ಆನಂತರ ಕಾಣೆಯಾದವು. ಮುಖ್ಯಮಂತ್ರಿ ಸ್ಥಾನದ ಬದಲಾವಣೆ, ಸಚಿವ ಸಂಪುಟ ರಚನೆಯಲ್ಲಿಯೇ ಕಾಲಹರಣವಾಗಿದ್ದು ಬಿಟ್ಟರೆ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಸಂಪೂರ್ಣ ಗೌಣವಾಗಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗದ ದುಃಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಮಾತೆತ್ತಿದರೆ ಪ್ರಜಾಪ್ರಭುತ್ವ, ಸಂವಿಧಾನ ಎಂದು ಬೊಗಳೆ ಬಿಡುವ ಕಾಂಗ್ರೆಸ್ಸಿಗರು ಅಧಿಕಾರ ವಿಕೇಂದ್ರಿಕರಣ ಪದ್ಧತಿಯನ್ನೇ ಮೂಲೆಗುಂಪು ಮಾಡಿದ್ದಾರೆ. ಹೀಗಾಗಿ ಜನ ವಿಧಾನ ಸಭೆ ಚುನಾವಣೆಯನ್ನು ಎದುರು ನೋಡುತ್ತಿದ್ದು ಈ ಬಾರಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವು ನಿಶ್ಚಿತ ಎಂದು ಉಮೇಶ ಕೋಳಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net