ಸ್ತ್ರೀ ಪರವಾದ ಡೋಂಗಿತನ ಬಯಲು, ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಪಟ್ಟಣಶೆಟ್ಟಿ ವಾಗ್ದಾಳಿ

ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಸಂದೀಪ ಪಾಟೀಲ. ವಿಜಯ ಜೋಷಿ ಇದ್ದಾರೆ.
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸುದ್ದಿಗೋಷ್ಠಿ ನಡೆಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಸಂದೀಪ ಪಾಟೀಲ. ವಿಜಯ ಜೋಷಿ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ
  • ಕಾಂಗ್ರೆಸ್‌ನ ಮುಖವಾಡ ಕಳಚಿದೆ
  • ದೇಶದ ಜನರಿಗೆ ಅಸಲಿಯತ್ತು ಗೊತ್ತಾಗಿದೆ
ವಿಜಯಪುರ: ರಾಜಕೀಯವಾಗಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಕೇಂದ್ರ ಸರ್ಕಾರದ ಆಶಯಕ್ಕೆ ಕೊಕ್ಕೆ ಹಾಕುವ ಮೂಲಕ ಕಾಂಗ್ರೆಸ್ ಮಹಿಳಾ ಪರವಾದ ತನ್ನ ಕಾಳಜಿ ಡೋಂಗಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹರಿಹಾಯ್ದರು.
ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡನೆಗೆ ಮುಂದಾಗಿತ್ತು. ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆ ಮಸೂಗೆ ಕೂಡ ಮಂಡಿಸಲಾಗುತ್ತಿತ್ತು. ಆದರೆ, ಕಾಂಗ್ರೆಸ್ ವ್ಯಾಪಕವಾಗಿ ವಿರೋಧಿಸಿತು. ಆ ಮೂಲಕ ತನ್ನ ಡೋಂಗಿತನವನ್ನು ಪ್ರದರ್ಶನಕ್ಕಿಟ್ಟಿತು. ದೇಶದ ಜನರ ಮುಂದೆ ಕಾಂಗ್ರೆಸ್‌ನ ಮುಖವಾಡ ಕಳಚಿ ಬಿದ್ದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮಾತೆತ್ತಿದರೆ ಡಾ.ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮ ಗಾಂಧಿ ಹಾಗೂ ಬಸವೇಶ್ವರ ಅವರ ಕುರಿತು ಮಾತನಾಡುವ ಕಾಂಗ್ರೆಸ್ಸಿಗರು ಇದೀಗ ಮಹಿಳಾ ವಿರೋಧಿ ನೀತಿ ಅನುಸರಿಸುವ ಮೂಲಕ ಆ ಮಹಾತ್ಮರ ಆಶಯಕ್ಕೂ ತಣೀರು ಎರಚಿದೆ. ಬಾಬಾಸಾಹೇಬರು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದರು. ಬಸವೇಶ್ವರರು ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಅವಕಾಶ ನೀಡಿದ್ದರು. ಅಂಥ ಮಹಾತ್ಮರ ಹೆಸರು ಹೇಳಿಕೊಂಡು ಮತ ಪಡೆಯುವ ಕಾಂಗ್ರೆಸ್‌ನವರು ಇದೀಗ ಆ ಮಹಿಳಾ ಪರ ಮಸೂದೆಯನ್ನೇ ವಿರೋಧಿಸಿದ್ದ ಖಂಡನೀಯ ಎಂದರು.
ಕಾಂಗ್ರೆಸ್ ಹೊಟ್ಟೆ ಕಿಚ್ಚಿಗಾಗಿ ಮಸೂದೆ ಮಂಡನೆಯಾಗದಂತೆ ನೋಡಿಕೊಂಡಿದೆ. ಸ್ವತಃ ಪ್ರಧಾನಿಯವರು ಕ್ರೆಡಿಟ್ ಬೇಕಾದರೆ ತಾವೇ ಇಟ್ಟುಕೊಳ್ಳಿ, ಮಸೂದೆಗೆ ಮಂಡನೆಗೆ ಬೆಂಬಲಿಸಿ ಎಂದರೂ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮಹಿಳೆಯರಿಗೆ ಅನ್ಯಾಯ ಮಾಡಿದೆ. ಮಹಿಳಾ ವಿರೋಧಿಯ ತನ್ನ ಮನಃಸ್ಥಿತಿಯನ್ನು ಹೊರಹಾಕಿದೆ ಎಂದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿ, ನಾರಿ ಶಕ್ತಿ ಪರ ಎಂದು ಕಾಂಗ್ರೆಸ್ ನಾಯಕರು ದೊಡ್ಡದಾಗಿ ಭಾಷಣ ಮಾಡುತ್ತಿದ್ದರು. ಆದರೆ ಮಸೂದೆ ಮಂಡನೆಗೆ ಮತ ಹಾಕದೇ ತಮ್ಮ ಮಹಿಳಾ ವಿರೋಧಿ ಧೋರಣೆ ಅನಾವರಣಗೊಳಿಸಿದರು.
ಮೋದಿ ಸರ್ಕಾರ ಮಹಿಳೆಯರಿಗೆ ಸಾಕಷ್ಟು ಯೋಜನೆ ತಂದಾಗಲೂ ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ. ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹಿಳೆಯರಿಗೆ ಸಾಕಷ್ಟು ಬಲ ತುಂಬಿರುವ ಬಿಜೆಪಿ ಇದೀಗ ರಾಜಕೀಯವಾಗಿ ಬಲ ತುಂಬಲು ಮುಂದಾಗಿರುವುದನ್ನು ಸಹಿಸಲಾಗದೇ ಬಿಲ್ ಗೆ ವಿರೋಧಿಸಿದ್ದಾರೆ ಎಂದರು.
ಮುಖಂಡರಾದ ಸಂದೀಪ ಪಾಟೀಲ, ವಿಜಯ ಜೋಷಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net