ಫೆಬ್ರವರಿ-ಮಾರ್ಚ್‌ನೊಳಗೆ ವಿಜಯಪುರದಲ್ಲಿ ವಿಮಾನಗಳ ಹಾರಾಟ; ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಭರವಸೆ

ವಿಜಯಪುರ ನಗರದಲ್ಲಿ ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸುದ್ದಿಗೋಷ್ಠಿ ನಡೆಸಿದರು.
ವಿಜಯಪುರ ನಗರದಲ್ಲಿ ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಸುದ್ದಿಗೋಷ್ಠಿ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯಪುರ ವಿಮಾನ ನಿಲ್ದಾಣ ಯೋಜನೆ
  • ನಿರಾಕ್ಷೇಪಣ ಪತ್ರ ಪಡೆಯದ ಬಿಜೆಪಿ
  • ಹುಂಬುತನ ಪ್ರದರ್ಶನದಿಂದ ವಿಮಾನ ಹಾರಾಟ ವಿಳಂಬ
ವಿಜಯಪುರ: ಐತಿಹಾಸಿಕ ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಈ ಹಿಂದಿನ ಬಿಜೆಪಿ ಸರ್ಕಾರ ಅನುಸರಿಸಿದ ಹುಂಬುತನದ ಧೋರಣೆಯೇ ವಿಮಾನ ಹಾರಾಟ ವಿಳಂಬವಾಗಲು ಕಾರಣ ಎಂದು ಕರ್ನಾಟಕ ಕೈಗಾರಿಕಾ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಚೆಕ್ ಲೀಸ್ಟ್ ಆಧರಿಸಿ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರವನ್ನು ಆಗ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರ ಪಡೆಯಬೇಕಿತ್ತು. ಈ ಪತ್ರ ಅಂದು ದೊರಕಿದ್ದರೆ ವಿಮಾನಗಳು ಎಂದೋ ಹಾರಾಟವಾಗುತ್ತಿದ್ದವು. ಆಗ ಅನುಮತಿ ಪಡೆಯದೇ ಬಿಜೆಪಿ ಹುಂಬುತನ ಪ್ರದರ್ಶಿಸಿ ಕಾಮಗಾರಿ ಆರಂಭಿಸಿತು. ಪರಿಣಾಮ ಅನುಮತಿಗಾಗಿ ಪರದಾಡಬೇಕಾದ್ದರಿಂದ ವಿಮಾನ ಹಾರಾಟ ವಿಳಂಬವಾಯಿತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ವಿಮಾನ ನಿಲ್ದಾಣದ ಬಗ್ಗೆ ಬಿಜೆಪಿ ಸರ್ಕಾರದ ಅಂದಿನ ಜವಾಬ್ದಾರಿ ಹೊತ್ತಿರುವವರು ಅಂದೇ ವೈಜ್ಞಾನಿಕವಾಗಿ ಈ ಎಲ್ಲ ಪ್ರಕ್ರಿಯೆ ನಡೆಸಿದ್ದರೆ ಇಷ್ಟೊಂದು ವಿಳಂಬಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಈಗ ನಮ್ಮ ಮೇಲೆಯೇ ಬಿಜೆಪಿ ನಾಯಕರು ಆರೋಪ ಹೊರೆಸುತ್ತಿದ್ದಾರೆ ಎಂದರು.
‘ನೈಟ್ ಲ್ಯಾಂಡಿಂಗ್’ಗೆ ಪೂರಕವಾದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಾವು ಗಮನ ಹರಿಸಿದ್ದು, ಇದಕ್ಕೆ ಪೂರಕವಾದ ಪ್ರಕ್ರಿಯೆಗಳಿಗೆ ನಂತರ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಸಚಿವ ಡಾ.ಎಂ.ಬಿ. ಪಾಟೀಲ ವಿಶೇಷ ಮುತವರ್ಜಿ ವಹಿಸುತ್ತಿದ್ದಾರೆ ಎಂದರು.
ವಿಜಯಪುರದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದ್ದು, ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆಯಾಗಬೇಕಿದೆ, ಈ ನಿಟ್ಟಿನಲ್ಲಿಯೂ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಹಾರಾಟ

ಏರೋಡ್ರೋಂ ಅಥಾರಿಟಿಗೆ ಪರವಾನಿಗೆಗಾಗಿ ಪತ್ರ ಬರೆಯಲಾಗಿದ್ದು, 10 ರಿಂದ 12 ದಿನಗಳಲ್ಲಿ ಈ ಪರವಾನಿಗೆ ದೊರಕುವ ವಿಶ್ವಾಸವಿದೆ. ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ದೊರಕದ ಹಿನ್ನೆಲೆಯಲ್ಲಿ ಸುಪ್ರಿಂಕೋರ್ಟ್‌ನಲ್ಲಿ ವ್ಯಾಜ್ಯ ನಡೆಯಲಿದ್ದು, ಈ ತೀರ್ಪು ಸಹ ಇನ್ನೇನು ಬರುವ ನಿರೀಕ್ಷೆ ಇದೆ. ಹೀಗಾಗಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ವಿಮಾನ ಹಾರಾಟ ಆರಂಭವಾಗಬಹುದು ಎಂದು ನಂಜಯ್ಯನಮಠ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net