

ವಿಜಯಪುರ: ‘ಆಗಾಗ ಗುಸುಗುಸು ಎನ್ನುತ್ತಿದ್ದ ಸಿದ್ಧಸಿರಿಯ ಹಗರಣ ಕೊನೆಗೂ ಸ್ಪೋಟಗೊಂಡಿದ್ದು, ಬಹುದೊಡ್ಡ ಚರ್ಚೆಗೆ ನಾಂದಿ ಹಾಡಿದೆ...’
ಪ್ರತಿಷ್ಠಿತ ಸಿದ್ಧಸಿರಿ ಬ್ಯಾಂಕ್‌ನಲ್ಲಿ ಹಗರಣ ನಡೆದಿದೆ ಎಂಬ ಮಾತು ಆಗಾಗ ತೆರೆಮರೆಯಲ್ಲಿ ಮಾರ್ದನಿಸುತ್ತಲೇ ಇತ್ತು. ಇಂದು-ನಾಳೆ ಸ್ಪೋಟಗೊಳ್ಳಬಹುದೆಂಬ ಚರ್ಚೆಯೂ ಇತ್ತು. ಬಳಿಕ ಅಲ್ಲಿನ ಪ್ರಮುಖ ನೌಕರ ರಾಘವ ಅಣ್ಣಿಗೇರಿಯನ್ನು ವಜಾಗೊಳಿಸುತ್ತಿದ್ದಂತೆ ಆ ಕುರಿತ ಗುಮಾನಿ ಬಲವಾಯಿತು. ಈ ಮಧ್ಯೆ ಪ್ರತಿಬಂಧಕಾಜ್ಞೆ ತಂದಾಗಲಂತೂ ಹಗರಣಕ್ಕೆ ರೆಕ್ಕೆ ಪುಕ್ಕ ಬಂದವು.
ಇದೀಗ ಅಧಿಕೃತವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುವ ಮೂಲಕ ಪ್ರಕರಣದ ಹೂರಣ ಗಾಂಧಿ ಬಜಾರ್‌ತುಂಬ ಹವಾ ಎಬ್ಬಿಸಿದೆ. ಮಾತ್ರವಲ್ಲ, ಈ ಕುರಿತು ಆಸಕ್ತಿದಾಯಕ ಸಂಗತಿಗಳು ಹಂತ ಹಂತವಾಗಿ ಹೊರಬೀಳತೊಡಗಿವೆ.
ಸಿದ್ಧಸಿರಿಯಲ್ಲಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಠೇವಣಿ ಹಣ ವಂಚನೆಗೈಯ್ಯಲಾಗಿದೆ ಎಂದು ಸಿದ್ಧಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯ ನಿರ್ವಾಹಕ ಅಧಿಕಾರಿ ಜ್ಯೋತಿಬಾ ಮಾರುತಿ ಖಂಡಾಗಳೆ ಎಂಬುವರು ಗಾಂಧಿಚೌಕ್ ಠಾಣೆಯಲ್ಲಿ ಸೆ. 23ರಂದೇ ಈ ಕುರಿತು ದೂರು ದಾಖಲಿಸಿದ್ದಾರೆ.
ಮಾಜಿ ಜಂಟಿ ಸಹಾಯಕ ನಿರ್ದೇಶಕ ರಾಘವೇಂದ್ರ (ರಾಘವ) ಭೀಮಸೇನರಾವ ಅಣ್ಣಿಗೇರಿ ಮೇಲೆ ದೂರು ದಾಖಲಿಸಲಾಗಿದೆ. ದೂರಿನಲ್ಲಿ ರಾಘವ ಸಿದ್ಧಸಿರಿ ಬ್ಯಾಂಕ್‌ನಲ್ಲಿ ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಯಿಂದ ಭದ್ರತಾ ಠೇವಣಿಯ ಹಣ ಪಡೆದು ಬ್ಯಾಂಕ್‌ಗೆ ಕಟ್ಟದೇ 1,41,50,000 ರೂಪಾಯಿ ವಂಚನೆಗೈಯ್ದಿದ್ದಾರೆಂದು ತಿಳಿಸಲಾಗಿದೆ.
ಸಿದ್ಧಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಈ ಹಿಂದಿನ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದು ವಿವಿಧೋದ್ಧೇಶ ಸಂಸ್ಥೆಯಾಗಿದ್ದು, ಹಣಕಾಸಿನ ವ್ಯವಹಾರ ಮಾಡುತ್ತಾ ಬಂದಿದೆ. ಮೇ 29, 2006ರಂದು ನೌಕರನಾಗಿ ನಿಯುಕ್ತಿಗೊಂಡಿದ್ದ ರಾಘವೇಂದ್ರ ನಂತದ ಕಾಲ ಕಾಲಕ್ಕೆ ಬಡ್ತಿ ಪಡೆದು 2018 ಏ.1ಕ್ಕೆ ಜಾರಿಗೆ ಬರುವಂತೆ ಸೊಸೈಟಿಯ ಜಂಟಿವ್ಯವಸ್ಥಾಪಕ ನಿರ್ದೇಶಕರಾಗಿ ನಿಯುಕ್ತಿ ಹೊಂದಿದ್ದರು.
ಅಧಿಕಾರವಧಿಯಲ್ಲಿ ಸೊಸೈಟಿಯ ಸಿಬ್ಬಂದಿ ನೇಮಕಾತಿ ಅಧಿಕಾರ ರಾಘವೇಂದ್ರ ಅವರ ವ್ಯಾಪ್ತಿಗೆ ಬರುತ್ತಿತ್ತು. ಸೊಸೈಟಿಯ ಆಂತರಿಕ ನಿಯಮ ಅನ್ವಯ ಸಿಬ್ಬಂದಿ ನೇಮಕಾತಿ ಸಂಭರ್ದದಲ್ಲಿ ನೌಕರಿ ಭದ್ರತಾ ಠೇವಣಿಯನ್ನು ಪಡೆಯುವುದು ನಿಯಮ. ಅದರಂತೆ 2018-19ನೇ ಸಾಲಿನ ಮಧ್ಯದಲ್ಲಿ ನಿಯುಕ್ತಿಗೊಂಡ ಹಿರಿಯ ಅಧಿಕಾರಿಗಳಿಂದ 7 ಲಕ್ಷ ರೂಪಾಯಿ ಕಿರಿಯ ಅಧಿಕಾರಿಗಳಿಂದ 5 ಲಕ್ಷ ರೂಪಾಯಿ, ಜವಾನರಿಂದ 3 ಲಕ್ಷ ರೂಪಾಯಿ, 2019-2021ರ ಸಾಲಿನ ಮಧ್ಯದಲ್ಲಿ ನಿಯುಕ್ತಿಗೊಂಡ ಹಿರಿಯ ಅಧಿಕಾರಿಗಳಿಂದ 9 ಲಕ್ಷ ರೂಪಾಯಿ, ಕಿರಿಯ ಅಧಿಕಾರಿಗಳಿಂದ 7 ಲಕ್ಷ ರೂಪಾಯಿ, ಜವಾನರಿಂದ 5 ಲಕ್ಷ ರೂಪಾಯಿ, ಇನ್ನು 2021-2023ನೇ ಸಾಲಿನ ಮಧ್ಯದಲ್ಲಿ ನಿಯುಕ್ತಿಗೊಂಡ ಹಿರಿಯ ಅಧಿಕಾರಿಗಳಿಂದ 11 ಲಕ್ಷ, ಕಿರಿಯ ಅಧಿಕಾರಿಗಳಿಂದ 9 ಲಕ್ಷ, ಜವಾನರಿಂದ 5 ಲಕ್ಷ ರೂಪಾಯಿ, ಅದೇ ರೀತಿ 2023ರಿಂದ ಈವರೆಗೆ ನಿಯುಕ್ತಿಗೊಂಡ ಹಿರಿಯ ಅಧಿಕಾರಿಗಳಿಂದ 15 ಲಕ್ಷ ರೂಪಾಯಿ, ಕಿರಿಯ ಅಧಿಕಾರಿಗಳಿಂದ 11 ಲಕ್ಷ ರೂಪಾಯಿ, ಜವಾನರಿಂದ 5 ಲಕ್ಷ ರೂಪಾಯಿ ಪಡೆಯುವ ನಿಯಮವಿದೆ.
ಈಗ ಸೊಸೈಟಿಯ ಆಡಳಿತ ಮಂಡಳಿಗೆ ರಾಘವೇಂದ್ರ ತನ್ನ ಅಧಿಕಾರವಧಿಯಲ್ಲಿ ಅಂದರೆ 2019ರಿಂದ 2025ರ ಮಧ್ಯದ ಅವಧಿಯಲ್ಲಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಾಥಮಿಕ ತನಿಖೆ ನಡೆಸಲಾಗಿ ಸುಮಾರು 28 ಸಿಬ್ಬಂದಿಯಿಂದ ಹಣ ಪಡೆದು, ಭದ್ರತಾ ಮಂಡಳಿಗೂ ನೀಡದೇ, ಸಿಬ್ಬಂದಿ ಹಣ ನೀಡಿಲ್ಲವೆಂದು ಆಡಳಿತ ಮಂಡಳಿಗೆ ತಿಳಿಸಿ ನಿಯುಕ್ತಿ ಮಾಡಿಕೊಂಡಿದ್ದಾನೆ. ಆದರೆ, ಸಿಬ್ಬಂದಿ ಈತನಿಗೆ ಹಣ ನೀಡಿದ್ದಾರೆ. ಕೆಲವರಿಗೆ ಸ್ವಲ್ಪ ಹಣ ಹಿಂತಿರುಗಿಸಿರುವ ರಾಘವ ಅವರು, ಬಹುತೇಕ ಹಣ ಸ್ವಂತಕ್ಕೆ ಬಳಸಿದ್ದರಿಂದ ಸಂಸ್ಥೆಗೆ ಬರಬೇಕಿದ್ದ ಬಡ್ಡಿ ಹಣ ಸಹ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿರುವ ರಾಘವ ಅಣ್ಣಿಗೇರಿ, ‘ಒಂದೇ ಒಂದು ಪೈಸೆ ಹಣ ವಂಚಿಸಿದ ಬಗ್ಗೆ ಸಾಬೀತು ಪಡಿಸಿ’ ಎಂದು ಸವಾಲೆಸೆದಿದ್ದಾರೆ.
‘ಪ್ರತಿಬಂಧಕಾಜ್ಞೆ ಇರುವಾಗ ಯಾವುದೇ ಮಾಹಿತಿ ಹಂಚಿಕೊಳ್ಳಬಾರದೆಂದವರೇ ಈಗ ಮಾಹಿತಿ ಹಂಚಿಕೊಂಡಿದ್ದಾರೆ, ಅಮಿತ್ ಷಾ ಅವರೇ, ರಾಜ್ಯ ಸಹಕಾರಿ ಸಚಿವರೇ , ಮುಖ್ಯಮಂತ್ರಿಗಳೇ ಹಣ ಪಡೆದು ನೌಕರಿ ಕೊಡುವವರ ಮೇಲೆ ಕ್ರಮ ಏನು?’ ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು ತಮ್ಮದು ‘ಅಂಜುವ ಕುಲ ಅಲ್ಲ ನಂದು, ಆಂಜನೇಯನ ಕುಲ. ರಾಷ್ಟ್ರವಾದಿ ಹಿಂದೂ ನಾ...ನೀವು ಹೇಳಿದ್ದನ್ನೇ ನಾ ಮಾಡಿದ್ದೇನೋ ಮಾರಾಯಾ...ಬೇಕಾದರೆ ಸಾಮಾನ್ಯ ಸಭೆಗೆ ನನ್ನನ್ನು ಕರೆಯಿರಿ ಮುಕ್ತವಾಗಿ ಚರ್ಚೆಯಾಗಿ, ಸತ್ಯಾಸತ್ಯತೆ ಜನರಿಗೆ ಗೊತ್ತಾಗಲಿ...’ ಎಂದಿದ್ದಾರೆ.