ಅರ್ಜುಣಗಿ ಗ್ರಾಮದಲ್ಲಿ ರೈತರ ಪ್ರತಿಭಟನೆ, ಕಾಲುವೆ ಕೊನೆಯಂಚಿನವರೆಗೆ ನೀರು ಹರಿಸಲು ಒತ್ತಾಯ
ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆದ ರೈತರ ಪ್ರತಿಭಟನೆಯನ್ನುದ್ದೇಶಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು. ಮುಖಂಡ ರಾಮಪ್ಪ ಕರಜಗಿ, ರಾಜು ಕಂಬಾಗಿ, ಬಸವರಾಜ ಸಿದ್ದಾಪೂರ ಇತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜ್ಯ ಸರ್ಕಾರಕ್ಕೆ ಒಕ್ಕೋರಲ ಆಗ್ರಹ
ಮುಳವಾಡ ಏತ ನೀರಾವರಿ ಯೋಜನೆ
ಐದು ಹಳ್ಳಿಗಳಿಗೆ ನೀರು ಒದಗಿಸಲು ಒತ್ತಾಯ
ವಿಜಯಪುರ: ಮುಳವಾಡ ಏತ ನೀರಾವರಿಗೆ ಸಂಬಂಧಿಸಿದಂತೆ ಪಶ್ಚಿಮ ಕಾಲುವೆ ವ್ಯಾಪ್ತಿಯ ಗ್ರಾಮಗಳಿಗೆ ನೀರೊದಗಿಸಲು ಕಾಲುವೆಯ ಕೊನೆಯಂಚಿನವರೆಗೂ ನೀರು ಹರಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಬಳಿಕ ಬಹಿರಂಗ ಸಭೆಯಲ್ಲಿ ಒಕ್ಕೋರಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದರು.
ಆಲಮಟ್ಟಿ ಎಲ್‌ಬಿಎಸ್ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಪಶ್ಚಿಮ ಕಾಲುವೆ ವ್ಯಾಪ್ತಿಯ ಬಬಲೇಶ್ವರ ತಾಲೂಕಿನ ಹಳ್ಳಿಗಳಾದ ಹೆಬ್ಬಾಳಟ್ಟಿ, ಹೊಕ್ಕುಂಡಿ, ಯಕ್ಕುಂಡಿ, ಅರ್ಜುಣಗಿ, ತೊದಲಬಾಗಿಯ ಗ್ರಾಮಗಳಿಗೆ ನೀರೊದಗಿಸಲು ಕಾಲುವೆ ಕೊನೆಯಂಚಿನವರೆಗೆ ನೀರು ತಲುಪಿಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಐದು ಹಳ್ಳಿಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲ, ಜನ ಜಾನುವಾರುವಿಗೆ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಳವಾಡ ಏತ ನೀರಾವರಿಯ ಪಶ್ಚಿಮ ಕಾಲುವೆ ನಿರ್ಮಾಣವಾದಾಗಿನಿಂದ ನೀರು ಹರಿಸಿದ ಸಂದರ್ಭದಲ್ಲಿ ಕೊನೆ ಅಂಚಿನವರೆಗೆ ನೀರು ತಲುಪಿದ ಉದಾಹರಣೆ ಇಲ್ಲ. ಕೂಡಲೇ ಕಾಲುವೆ ಕೊನೆಯಂಚಿನವರೆಗೆ ನೀರು ತಲುಪಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಆಲಮಟ್ಟಿ ಜಲಾಶಯದಿಂದ ಬಳ್ಳಾರಿಯ ಜಿಂದಾಲ್‌ವರೆಗೆ ಯಾವುದೇ ಅಡತಡೆ ಇಲ್ಲದೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಆದರೆ ಹತ್ತಿರದಲ್ಲಿ ಆಣೆಕಟ್ಟು ಇದ್ದರೂ ಸಮೀಪದ ಹಳ್ಳಿಗಳಿಗೆ ನೀರು ಕೊಡಲು ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆಂದು ಹರಿ ಹಾಯ್ದರು.
ಇದರಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷೃ ಧೋರಣೆ ಎದ್ದು ಕಾಣುತ್ತಿದೆ. ಕಾಲುವೆ ಕೊನೆ ಅಂಚಿನವರೆಗೆ ನೀರು ತಲುಪಿಸಲು ಏನೇ ತಾಂತ್ರಿಕ ಸಮಸ್ಯೆಗಳಿದ್ದರೂ ಅಧಿಕಾರಿಗಳು ಹಗಲಿರುಳು ನಿಂತು ಬಗೆ ಹರಿಸಬೇಕು. ಒಟ್ಟಾರೆ ಕಾಲುವೆ ಕೊನೆ ಅಂಚಿನವರೆಗೆ ನೀರು ಹರಿಸದಿದ್ದರೆ ಹೋರಾಟ ಮುಂದುವರೆಯುತ್ತದೆ. ವಿಳಂಬ ನೀತಿ ಅನುಸರಿಸಿದರೆ ಹೋರಾಟದ ಸ್ವರೂಪ ಬದಲಾವಣೆ ಮಾಡಬೇಕಾಗುತ್ತದೆಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.
ತೊದಲಬಾಗಿಯ ರೈತ ಮುಖಂಡ ರಾಮಪ್ಪ ಕರಜಗಿ ಮಾತನಾಡಿ, ತಾಲೂಕಿನ ಈ ಎಲ್ಲ ಹಳ್ಳಿಗಳಲ್ಲಿ ನೀರಿಲ್ಲದೆ ಹೈನುಗಾರಿಕೆ ಕ್ಷೀಣಿಸುತ್ತಿದೆ. ಕೆರೆಗಳು ಬತ್ತಿ ಹೋಗಿವೆ, ಬೆಳೆಗಳು ಬತ್ತುತ್ತಿವೆ ಆದ್ದರಿಂದ ಕೂಡಲೆ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.