ವಿಜಯಪುರ: ಡಿಸೆಂಬರ್ 7 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025 ಅಂಗವಾಗಿ ಹಮ್ಮಿಕೊಂಡಿದ್ದ ನಿಬಂಧ ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಗಗನ ಮಹಲ್ ಉದ್ಯಾನದಲ್ಲಿ ಭಾನುವಾರ ಬೆಳಗ್ಗೆ ನಡೆದ ನಿಬಂಧ ಸ್ಪರ್ಧೆಯಲ್ಲಿ ವಿವಿಧ ಶಾಲೆಯ 350ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಒಂದು ದಶಕದಲ್ಲಿ ಬಸವನಾಡಿನ ಪರಿಸರದಲ್ಲಿ ಆಗಿರುವ ಅಮೂಲಾಗ್ರ ಬದಲಾವಣೆ ಕುರಿತು ನಿಬಂಧ ಬರೆದರು.
ಪ್ರಾಥಮಿಕ, ಹೈಸ್ಕೂಲ್ ಹಾಗೂ ಪಿಯು ಕಾಲೇಜು ಮೂರು ವಿಭಾಗಗಳಲ್ಲಿ ನಿಬಂಧ ಸ್ಪರ್ಧೆ ನಡೆಯಿತು. ಒಂದೂವರೆ ಗಂಟೆ ಸಮಯದಲ್ಲಿ 300 ಶಬ್ದಗಳಲ್ಲಿ ಜಿಲ್ಲೆಯ ಪರಿಸರದ ಕುರಿತು ಅಕ್ಷರ ರೂಪದಲ್ಲಿ ಬರೆದರು. ನೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿದ್ದ ಬರದ ಕುರಿತು ಬ್ರಿಟಿಷರ ದಾಖಲೆಯಲ್ಲಿಯೇ ಪ್ರಸ್ತಾಪವಾಗಿತ್ತು. ವಿಜಯಪುರ ಜಿಲ್ಲೆ ಬರಪೀಡಿತ ಜಿಲ್ಲೆ ಎಂದೇ ದಾಖಲಾಗಿತ್ತು. ಆದರೆ, ಸದ್ಯ ಒಂದು ದಶಕದಲ್ಲಿ ಪರಿಸ್ಥಿತಿ ಅಮೂಲಾಗ್ರವಾಗಿ ಬದಲಾಗಿದೆ. ಕೋಟಿ ವೃಕ್ಷ ಅಭಿಯಾನದಿಂದ ಪ್ರಾರಂಭವಾದ ಅರಣ್ಯ ಕ್ರಾಂತಿ ಈಗ ಒಂದೂವರೆ ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲಾಗಿದೆ. ನಗರ ಹೊರ ವಲಯದ ಕರಾಡ ದೊಡ್ಡಿ ಮತ್ತು ಮಮಾದಾಪುರ ಬಳಿ ಮಾನವ ನಿರ್ಮಿತ ಅರಣ್ಯ ವಾತಾವರಣವನ್ನೇ ಬದಲಾಯಿಸಿದೆ. ನೀರಾವರಿಯಿಂದಾಗಿ ಜಿಲ್ಲೆಯಲ್ಲಿ ಹಸಿರು ಕ್ರಾಂತಿಯೂ ಆಗಿದೆ. ಅದರಿಂದ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದ್ದು, ಬಿಸಿಲಿನ ತಾಪಮಾನವೂ ಕಡಿಮೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯು ಶುದ್ಧ ಗಾಳಿಯಲ್ಲಿ ದೇಶದಲ್ಲಿಯೇ ಮೊದಲ ಮೂರು ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈ ಎಲ್ಲ ವಿಷಯಗಳನ್ನು ಆಧರಿಸಿ ಜಿಲ್ಲೆಯಲ್ಲಿ ಉಂಟಾಗಿರುವ ಪರಿಸರ ಕ್ರಾಂತಿಯ ಬಗ್ಗೆ ವಿದ್ಯಾರ್ಥಿಗಳು ನಿಬಂಧ ಬರೆದರು.
ನಿಬಂಧದ ಮೂರು ಬೇರೆ ಬೇರೆ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ 10 ಸಾವಿರ ರೂ., ದ್ವಿತೀಯ ಸ್ಥಾನ 7 ಸಾವಿರ ರೂ., ತೃತೀಯ ಸ್ಥಾನ ಪಡೆದವರಿಗೆ 3 ಸಾವಿರ ರೂ. ಹಾಗೂ ತಲಾ ಇಬ್ಬರಿಗೆ ಸಮಾಧಾನಕರ 2,500 ರೂ. ನಗದು ಬಹುಮಾನ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ -ಫಲಿತಾಂಶ ಪ್ರಕಟಿಸಲಾಗುವುದು ಎಂದು ಸ್ಪರ್ಧೆಯ ಉಸ್ತುವಾರಿಗಳಾದ ಅಮೀತ ಬಿರಾದಾರ ಮತ್ತು ರಮೇಶ ಬಿರಾದಾರ ಮಾಹಿತಿ ನೀಡಿದರು.
ಸ್ಪರ್ಧೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪೋಷಕರಾದ ಅರವಿಂದ ಯಾದವ ಮತ್ತು ಶ್ರೀಮಂತ ಡೊಣಗಿ, ನಮ್ಮ ಮಕ್ಕಳು ಇಲ್ಲಿಗೆ ಬಂದು ನಿಬಂಧ ಬರೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಜಿಲ್ಲೆಯ ಪರಿಸರದಲ್ಲಾಗಿರುವ ಬದಲಾವಣೆ ಕಂಡಿರುವ ಮಕ್ಕಳು ಅದನ್ನು ಅಕ್ಷರ ರೂಪದಲ್ಲಿ ಮನಮುಟ್ಟುವಂತೆ ಬರೆಯುತ್ತಿರುವುದು ಸಂತಸ ಮೂಡಿಸಿದೆ. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿ ಜ್ಞಾನ ವೃದ್ಧಿಗೆ ಮತ್ತು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಮತ್ತಷ್ಟು ಉತ್ತೇಜನ ನೀಡುತ್ತವೆ ಎಂದು ತಿಳಿಸಿದರು.
ವಿಜಯಪುರ ಸೈಕ್ಲಿಂಗ್ ಗ್ರುಪ್ ಅಧ್ಯಕ್ಷ, ವೃಕ್ಷಥಾನ್ ಕೋರ್ ಕಮಿಟಿ ಡಾ. ಮಹಾಂತೇಶ ಬಿರಾದಾರ, ಡಾ. ಮುರುಗೇಶ ಪಟ್ಟಣಶೆಟ್ಟಿ, ಡಾ. ಪ್ರವೀಣ ಚೌರ, ವಿನಯ ಕಂಚ್ಯಾಣಿ, ಶಿವಾನಂದ ಯರನಾಳ, ಸೋಮಶೇಖರ ಸ್ವಾಮಿ, ಶಿವನಗೌಡ ಪಾಟೀಲ, ಸೋಮು ಮಠ ಇತರರಿದ್ದರು.