ವಿಜಯಪುರ ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶ್ರೀವಾದಿರಾಜತೀರ್ಥರ ಜಯಂತಿ ಅಂಗವಾಗಿ ನಡೆದ ಭಜನಾ ಕಾರ್ಯಕ್ರಮವನ್ನು ಗೋಪಾಲ ನಾಯಕ ಉದ್ಘಾಟಿಸಿದರು. ವಾಸುದೇವಾಚಾರ್ಯ ಅಗ್ನಿಹೋತ್ರಿ, ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ ಮತ್ತಿತರರಿದ್ದಾರೆ.
ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶುಕ್ರವಾರ ಶ್ರೀವಾದಿರಾಜತೀರ್ಥರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮಕ್ಕೆ ಶ್ರೀಮಠದ ಗೌರವಾಧ್ಯಕ್ಷ ಗೋಪಾಲ ನಾಯಕ ಚಾಲನೆ ನೀಡಿ, ಶ್ರೀವಾದಿರಾಜತೀರ್ಥರು ಸಮಾಜಕ್ಕೆ ಬಹು ದೊಡ್ಡ ಕೊಡುಗೆ ಕೊಡುವ ಮೂಲಕ ಮಹಾಮಹಿಮರು ಎನಿಸಿಕೊಂಡಿದ್ದಾರೆ. ಅವರು ಕೃತಿಗಳ ಮೂಲಕ ಲೋಕದ ಅಂಕು ಡೊಂಕು ತಿದ್ದಿದ್ದರು ಎಂದರು.
ಸಾನ್ನಿಧ್ಯ ವಹಿಸಿದ್ದ ಪಂ. ವಾಸುದೇವಾಚಾರ್ಯ ಅಗ್ನಿಹೋತ್ರಿ ಆಶೀರ್ವಚನ ನೀಡಿ, ಶ್ರೀ ವಾದಿರಾಜತೀರ್ಥರ ಜನ್ಮವೆ ಒಂದು ಪವಾಡ. ಯತಿಗಳ ಅನುಗ್ರಹದಿಂದ ಜನ್ಮವೆತ್ತಿ ತಮ್ಮ 8ನೇ ವಯಸ್ಸಿನಲ್ಲಿ ಯತಿ ಧರ್ಮ ಸ್ವೀಕರಿಸುವ ಮೂಲಕ ಹಲವು ಕೃತಿಗಳನ್ನು ಸಮಾಜದ ಒಳಿತಿಗೆ ಸಮರ್ಪಿಸಿದ್ದಾರೆ ಎಂದು ತಿಳಿಸಿದರು.
ಶ್ರೀಮಠದ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿದರು. ಖಜಾಂಚಿ ಅಶೋಕರಾವ್, ಸದಸ್ಯ ವಿಕಾಸ ಪದಕಿ ಉಪಸ್ಥಿತರಿದ್ದರು.
ಸ್ಥಳೀಯ 14 ಮಹಿಳಾ ಭಜನಾ ಮಂಡಳಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾದಿರಾಜತೀರ್ಥರಿಗೆ ಅವರ ಕೃತಿಗಳ ಭಜನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಅನಿತಾ ಪದಕಿ ಸ್ವಾಗತಿಸಿದರು. ಲಕ್ಷಿ÷್ಮÃ ಕುಲಕರ್ಣಿ ವಂದಿಸಿದರು.