ವಿಜಯಪುರ: ‘ಮುಂಜಾನೆ ಮುಸ್ಲಿಂ, ಮಧ್ಯಾಹ್ನ ಹಿಂದುಳಿದ ವರ್ಗ ಸಂಜೆ ದಲಿತರ ಹೆಸರು ಜಪಿಸುವ ಕಾಂಗ್ರೆಸ್ ಆ ಸಮುದಾಯಗಳ ಹಣವನ್ನೇ ನುಂಗಿ ನೀರು ಕುಡಿದಿದ್ದು, ರಾಜ್ಯದಲ್ಲಿ ಹಿಂದೆಂದೂ ಇಂಥ ಹೊಲಸು ಸರ್ಕಾರವನ್ನು ಜನ ನೋಡಿಯೇ ಇರಲಿಲ್ಲ’ ಎಂದು ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿಯಿಂದ ಮಂಗಳವಾರ ‘ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಲು ಆಗ್ರಹಿಸಿ ಮತ್ತು ಬರ ಪರಿಹಾರ ನೀಡಲು ಒತ್ತಾಯಿಸಿ’ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸ್ವತಃ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಸದನದಲ್ಲಿ ನಾಗೇಂದ್ರ ಮಾಡಿರುವ ಅವ್ಯವಹಾರವನ್ನು ಒಪ್ಪಿಕೊಂಡಿದ್ದರು. ಇದೀಗ ಅಂಥವರಿಗೆ ಮಂತ್ರಿಗಿರಿ ನೀಡಿರುವುದು ನಾಚಿಕೆಗೇಡು. ರಾಜ್ಯದಲ್ಲಿ ಇವರಿಗೆ ಹೇಳುವವರು-ಕೇಳುವವರು ಇಲ್ಲದಾಗಿದೆ. ಕೂಡಲೇ ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡಿ ಇಲ್ಲವೇ ತಮ್ಮದು ಭ್ರಷ್ಟಾಚಾರದ ಪಕ್ಷ ಎಂದು ಒಪ್ಪಿಕೊಳ್ಳಿ’ ಎಂದರು.
‘ಅಧಿಕಾರಕ್ಕಾಗಿ ಅಹಿಂದ ಜಪ ಮಾಡುವ ಕಾಂಗ್ರೆಸ್‌ನ ನಾಟಕ ಜನರಿಗೆ ಗೊತ್ತಾಗಿದೆ. ವಾಲ್ಮೀಕಿ ನಿಗಮದ 185 ಕೋಟಿ ರೂ. ಅನುದಾನದ ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ದಲಿತರ 42 ಸಾವಿರ ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡಿತು. ಈ ಹಿಂದೆ ಸಂಸದರಿಗೆ ಪ್ರತಿವರ್ಷ 5 ಕೋಟಿ ರೂ.ಅನುದಾನ ನೀಡಲಾಗುತ್ತಿತ್ತು. ಆದರೆ, ಈಗ ಅದೂ ನಿಂತು ಹೋಗಿದೆ. ರಾಜ್ಯದಲ್ಲಿ ಭೀಕರ ಬರ ಬಿದ್ದಿದೆ. ಜನ-ಜಾನುವಾರು ನೀರಿಗಾಗಿ ಪರಿತಪಿಸುವಂತಾಗಿದೆ. ಇಷ್ಟಾದರೂ ಸರ್ಕಾರ ಕ್ಯಾರೆ ಎನ್ನದಿರುವುದು ಖೇದಕರ ಸಂಗತಿ’ ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ‘ಭ್ರಷ್ಟಾಚಾರ ಮಾಡಿದ ಶಾಸಕ ಬಿ.ನಾಗೇಂದ್ರ ಅವರನ್ನು ಮಂತ್ರಿಮಂಡಲದಲ್ಲಿ ಸೇರಿಸಿಕೊಂಡಿದ್ದು ಖಂಡನೀಯವಾಗಿದೆ. ವಾಲ್ಮೀಕಿ ನಿಗಮವನ್ನೇ ಲೂಟಿ ಮಾಡಿದ ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಡಬೇಕು. ವಿಜಯಪುರ ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಜಿಲ್ಲೆಯಾದ್ಯಂತ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯಬೇಕು’ ಎಂದು ಒತ್ತಾಯಿಸಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ‘ಭ್ರಷ್ಟಾಚಾರದ ಆರೋಪ ಹೊತ್ತಿದ್ದ ನಾಗೇಂದ್ರನನ್ನು ಸಿದ್ಧರಾಮಯ್ಯನವರು ತೆಗೆದು ಹಾಕಿದರು. ಆದರೆ ಡಿ.ಕೆ.ಶಿವಕುಮಾರ ರವರು ಮತ್ತೆ ಅದೇ ಭ್ರಷ್ಟನನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡು ಉದ್ಧಟತನ ಮೆರೆದಿದ್ದಾರೆ. ಆತನನ್ನು ಹೊರಗಿಟ್ಟು ಅಧಿವೇಷನ ನಡೆಸಬೇಕು, ಆತನನ್ನು ಸಂಪುಟದಿಂದ ಕೈ ಬಿಡಬೇಕು’ ಎಂದರು.
ಮುಖಂಡ ವಿವೇಕಾನಂದ ಡಬ್ಬಿ ಮಾತನಾಡಿ, ‘ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರವನ್ನು ಒಪ್ಪಿಕೊಂಡಂತಾಗಿದೆ. ವಾಲ್ಮೀಕಿ ನಿಗಮದ ಹಗರಣದ ಹಿಂದೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಇರುವುದು ಪರೋಕ್ಷವಾಗಿ ಗೋಚರಿಸುತ್ತಿದೆ. ಕೂಡಲೇ ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಕಾಸುಗೌಡ ಬಿರಾದಾರ ಮಾತನಾಡಿ, ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಪ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ವಿಜಯಕುಮಾರ ಪಾಟೀಲ, ರಮೇಶ ಭೂಸನೂರ, ಸಂಜೀವ ಐಹೊಳ್ಳಿ, ಉಮೇಶ ಕಾರಜೋಳ, ಚಂದ್ರಶೇಖರ ಕವಟಗಿ, ಉಮೇಶ ಕೋಳಕೂರ, ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಅನೀಲ ಜಮಾದಾರ, ರವಿ ವಗ್ಗೆ, ಈರಣಗೌಡ ಪಾಟೀಲ, ಶ್ರೀದೇವಿ ಕುಲಕರ್ಣಿ, ಅನ್ನಪ್ಪ ಖೈನೂರ (ಹೊರ್ತಿ), ಸ್ವಪ್ನಾ ಕನಮುಚನಾಳ, ಚಿದಾನಂದ ಚಲವಾದಿ, ರಾಜಕುಮಾರ ಸಗಾಯಿ, ಭೀಮಾಶಂಕರ ಹದನೂರು, ಕೃಷ್ಣಾ ಗುನ್ಹಾಳಕರ, ರಾಜೇಶ ತವಸೆ, ವಿಜಯ ಜೋಷಿ, ಕಾಂತು ಶಿಂಧೆ, ಮಂಜುನಾಥ ಮೀಸೆ, ಸಚೀನ ಬೊಂಬಳೆ, ಭರತ ಕೋಳಿ, ರಜನಿ ಸಂಬಣ್ಣಿ, ಭಾರತಿ ಭುಯ್ಯರ ಇತರರಿದ್ದರು.