ನಾಟಕೋತ್ಸವಕ್ಕೆ ಅಭೂತಪೂರ್ವ ಸ್ಪಂದನೆ, ಡಾ.ಕೆ.ವಿ. ನಾಗರಾಜ್ ಮೂರ್ತಿ ಸಂತಸ ವ್ಯಕ್ತ

ವಿಜಯಪುರ ನಗರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ್ ಮೂರ್ತಿ ಸುದ್ದಿಗೋಷ್ಠಿ ನಡೆಸಿದರು. ನಾಟಕ ಅಕಾಡೆಮಿ ಸದಸ್ಯೆ ಜ್ಯೋತಿ ಮಂಗಳೂರು, ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಇದ್ದಾರೆ.
ವಿಜಯಪುರ ನಗರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ್ ಮೂರ್ತಿ ಸುದ್ದಿಗೋಷ್ಠಿ ನಡೆಸಿದರು. ನಾಟಕ ಅಕಾಡೆಮಿ ಸದಸ್ಯೆ ಜ್ಯೋತಿ ಮಂಗಳೂರು, ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವೃತ್ತಿ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ
  • ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಯೋಜನೆ
  • ಬೆಂಗಳೂರಿನಲ್ಲಿಯೂ ನಾಟಕೋತ್ಸವಕ್ಕೆ ಸಿದ್ಧತೆ
ವಿಜಯಪುರ: ‘ಗ್ರಾಮೀಣ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಪೌರಾಣಿಕ ರಂಗಭೂಮಿಯ ನಾಟಕೋತ್ಸವಗಳನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದ್ದು, ತನ್ನಿಮಿತ್ತ ವಿಜಯಪುರ ಜಿಲ್ಲೆಯ ವಿವಿಧ ವೃತ್ತಿ ರಂಗಭೂಮಿ ಕಲಾವಿದರಿಂದ ಸೆ.10 ರಿಂದ 12ರವರೆಗೆ ಮೂರು ದಿನಗಳ ನಾಟಕೋತ್ಸವ ಆಯೋಜಿಸಲಾಗಿದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜ್ ಮೂರ್ತಿ ಹೇಳಿದರು.
‘ಸೆ. 10 ರಂದು ಗ್ರಾಮ ಪಂಚಾಯಿತಿ ಗಂಗವ್ವ ನಾಟಕ ಪ್ರದರ್ಶನಗೊಂಡಿದೆ. ಸೆ.11 ರಂದು ಗಂಡನಿಗೆ ತಕ್ಕ ಹೆಂಡತಿ ಪ್ರದರ್ಶನಗೊಂಡರೆ ಸೆ. 12 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
‘ಬೆಂಗಳೂರಿನಲ್ಲಿ ವೃತ್ತಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಧುತ್ತರಗಿಯವರ ನಾಟಕಗಳ ಉತ್ಸವವನ್ನು ನವೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದೆ. ರಾಮನಗರ ಜಿಲ್ಲೆ (ಈಗಿನ ಬೆಂಗಳೂರು ದಕ್ಷಿಣ) ಮತ್ತು ತುಮಕೂರು ಜಿಲ್ಲೆಗಳಲ್ಲಿ ಗ್ರಾಮೀಣ ರಂಗಭೂಮಿ ಪೌರಾಣಿಕ ನಾಟಕೋತ್ಸವವನ್ನು ಆಯೋಜಿಸಲಾಗುತ್ತಿದೆ’ ಎಂದ ಅವರು, ‘ವಿವಿಧ ಜಿಲ್ಲೆಗಳಲ್ಲಿ ತಲಾ 9 ಗ್ರಾಮೀಣ, ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ನಾಟಕೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.
‘ಕರ್ನಾಟಕದ ಎಲ್ಲಾ ಜಿಲ್ಲೆಗಳ ಮಾಹಿತಿಯನ್ನೊಳಗೊಂಡ ವೆಬ್ ಸೈಟ್, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ನಾಟಕಗಳ ಬೃಹತ್ ರಂಗ ಪರಿಷೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ರಂಗಭೂಮಿಯನ್ನು ಸದೃಢಗೊಳಿಸುವ ಕೆಲಸವನ್ನು ನಾಟಕ ಅಕಾಡೆಮಿ ಮಾಡುತ್ತಿದೆ’ ಎಂದವರು ತಿಳಿಸಿದರು.
‘ಅಕಾಡೆಮಿಯು ಅರ್ಹರನ್ನು ಗುರುತಿಸಿ ಕಳೆದ ಎರಡೂವರೆ ವರ್ಷಗಳಲ್ಲಿ 160ಕ್ಕೂ ಹೆಚ್ಚು ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಆದರೆ ಒಂದು ವರ್ಷಕ್ಕೆ 20 ಪ್ರಶಸ್ತಿಗಳು ಮಾತ್ರ ಇದ್ದು, ಎಲ್ಲಾ ಜಿಲ್ಲೆಗಳನ್ನು ಪ್ರತಿನಿಧಿಸಿ, ಪ್ರಶಸ್ತಿ ನೀಡುವುದು ಒಂದು ದೊಡ್ಡ ಸವಾಲಾಗಿದೆ. ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರತಿವರ್ಷ ಫೆಬ್ರವರಿ 1 ರಿಂದ 6ರವರೆಗೆ ಬೆಂಗಳೂರಿನ ಕಲಾ ಗ್ರಾಮದಲ್ಲಿ ರಾಷ್ಟ್ರೀಯ ನಾಟಕೋತ್ಸವ ಹಾಗೂ ರಂಗ ಪರಿಷೆಯನ್ನು ಅತ್ಯಂತ ವೈಭವವಾಗಿ ಆಯೋಜಿಸುತ್ತಿದೆ’ ಎಂದರು.
‘ಕವಿ, ನಾಟಕಕಾರ ಡಾ ಕೆ.ವೈ.ನಾರಾಯಣಸ್ವಾಮಿ ಅವರು ಸುಮಾರು ಒಂದು ವರ್ಷಗಳ ಕಾಲ ಸಂಶೋಧನೆ ನಡೆಸಿ, ವಚನ ಕಲ್ಯಾಣ ರಂಗರೂಪಕವನ್ನು ಸಿದ್ಧಪಡಿಸಿದ್ದಾರೆ. ಈ ಕೃಷಿ ರಚನೆಗಾಗಿ ಬಸವಣ್ಣನವರ ಮತ್ತು ಇತರ ವಚನಕಾರರ ಸ್ಥಳಗಳಿಗೆ ಭೇಟಿ ನೀಡಿ ಹಲವಾರು ಉಪಯುಕ್ತ ಮಾಹಿತಿಗಳೊಂದಿಗೆ ಈ ಕೃತಿ ರಚಿಸಲಾಗಿದೆ ಎಂದ ಅವರು, ಈ ಸಂದರ್ಭದಲ್ಲಿ ಅತ್ಯಂತ ವೈಚಾರಿಕ ಯುಗವೆನಿಸಿದ 12ನೇ ಶತಮಾನದ ವಚನ ಚಳುವಳಿಯ ವೈಭವವನ್ನು ಜನರ ಮುಂದೆ ತರುವುದೇ ಈ ರಂಗರೂಪಕದ ಉದ್ದೇಶವಾಗಿದೆ’ ಎಂದರು.
‘ಪ್ರಸಿದ್ಧ ರಂಗ ವಿಮರ್ಶಕ ಹಾಗೂ ನಾಟಕಕಾರ ಡಾ. ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಈ ರಂಗರೂಪಕವನ್ನು ಸಿದ್ಧಪಡಿಸಲು ತಾಂತ್ರಿಕ ಸಮಿತಿ ರಚಿಸಿದ್ದು, ರಂಜಾನ್ ದರ್ಗಾ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕಾ.ತ. ಚಿಕ್ಕಣ್ಣ, ಶಶಿಧರ ಅಡಪ, ಡಾ. ಕೆ.ವಿ.ನಾಗರಾಜ ಮೂರ್ತಿ, ಡಾ. ಕೆ.ವೈ. ನಾರಾಯಣಸ್ವಾಮಿ, ಡಾ. ಮೀನಾಕ್ಷಿ ಬಾಳಿ ಅವರನ್ನೊಳಗೊಂಡ ಸಮಿತಿ ರಚಿಸಿದೆ. ಈಗಾಗಲೇ ಈ ಸಮಿತಿ ಸಭೆ ಸೇರಿ ನಾಟಕದ ರೂಪು-ರೇಷೆಗಳನ್ನು ಸಿದ್ಧಪಡಿಸಿ ನವೆಂಬರ್ ತಿಂಗಳಿನಿಂದ ಈ ರೂಪಕವನ್ನು ರಾಜ್ಯಾದ್ಯಂತ ಪ್ರದರ್ಶಿಸಲು ಪೂರ್ವ ಸಿದ್ಧತೆ ನಡೆಸಿದೆ’ ಎಂದರು.
ನಾಟಕ ಅಕಾಡೆಮಿ ಸದಸ್ಯೆ ಜ್ಯೋತಿ ಮಂಗಳೂರು, ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net