ಸ್ವಾತಂತ್ರೃ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮ ಪುತ್ಥಳಿ ಲೋಕಾರ್ಪಣೆ, ಕೊನೆಗೂ ಮುಹೂರ್ತ ನಿಗದಿ, ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಹೇಳಿದ್ದೇನು ಗೊತ್ತಾ?

ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ  ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಟಾಪನೆ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಸುದ್ದಿಗೋಷ್ಠಿ ನಡೆಸಿದರು. ಪುಟ್ಟು ಸಾವಳಗಿ, ರವಿ ತೊರವಿ, ಅಶೋಕ ಸಲಗರ ಮತ್ತಿತರರಿದ್ದಾರೆ.
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಟಾಪನೆ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಸುದ್ದಿಗೋಷ್ಠಿ ನಡೆಸಿದರು. ಪುಟ್ಟು ಸಾವಳಗಿ, ರವಿ ತೊರವಿ, ಅಶೋಕ ಸಲಗರ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವೀರರಾಣಿ ಚನ್ನಮ್ಮ ಮೂರ್ತಿ ಲೋಕಾರ್ಪಣೆ
  • ಅಂದಾಜು 2 ಕೋಟಿ ವೆಚ್ಚದಲ್ಲಿ ಮೂರ್ತಿ ಸಿದ್ಧ
  • 10 ಅಡಿ ಪೀಠದ ಮೇಲೆ 22 ಅಡಿ ಎತ್ತರದ ಮೂರ್ತಿ
  • ಸಮುದಾಯದ ವಂತಿಗೆಯಿಂದ ಪುತ್ಥಳಿ ನಿರ್ಮಾಣ
ವಿಜಯಪುರ: ಐತಿಹಾಸಿಕ ನಗರಿಯ ಕೇಂದ್ರ ಬಸ್ ನಿಲ್ದಾಣದ ಎದುರು ‘ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಟಾಪನೆ ಸಮಿತಿ’ಯಿಂದ ಪ್ರತಿಷ್ಟಾಪನೆಗೊಂಡಿರುವ ಸ್ವಾತಂತ್ರೃ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮನವರ ಭವ್ಯ ಮೂರ್ತಿ ಲೋಕಾರ್ಪಣೆಗೆ ಮುಹೂರ್ತ ನಿಗದಿಗೊಳಿಸಲಾಗಿದ್ದು, 2026ರ ಜ. 4 ರಂದು ಅತ್ಯಂತ ವಿಜೃಂಭಣೆಯಿಂದ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ತಿಳಿಸಿದರು.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯಕ್ರಮಗಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ಗಣ್ಯಾತಿಗಣ್ಯರ ನೇತೃತ್ವದಲ್ಲಿ ಭವ್ಯ ಕಾರ್ಯಕ್ರಮದೊಂದಿಗೆ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸರ್ಕಾರದ ಹಣಕಾಸು ನೆರವಿಲ್ಲದೇ ಕೇವಲ ಸಮುದಾಯದ ವಂತಿಗೆಯೊಂದಿಗೆ ಅಂದಾಜು 2 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರ್ತಿ ನಿರ್ಮಿಸಲಾಗಿದೆ. ಒಟ್ಟು 32 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ. 10 ಅಡಿ ಎತ್ತರದ ಪೀಠದ ಮೇಲೆ 22 ಅಡಿ ಎತ್ತರದ ಪಂಚಲೋಹದ ಮೂರ್ತಿ ಪ್ರತಿಷ್ಟಾಪಿಸಲಾಗಿದೆ. ಖ್ಯಾತ ಕಲಾವಿದರಿಂದ ಆಕರ್ಷಕವಾಗಿ ಮೂರ್ತಿ ಸಿದ್ಧಪಡಿಸಲಾಗಿದೆ. ಎತ್ತರದ ಧ್ವಜ ಸ್ಥಂಬ ನಿರ್ಮಿಸಿ ಕರ್ನಾಟಕದ ಧ್ವಜ ಹಾರಿಸಲು ತೀರ್ಮಾನಿಸಲಾಗಿದೆ. ಲೋಕಾರ್ಪಣೆ ಬಳಿಕ ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದ್ದು, ರಾಣಿ ಚನ್ನಮ್ಮ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎನ್ನಿಸಿಕೊಳ್ಳಲಿದೆ ಎಂದು ಕೋಳಕೂರ ತಿಳಿಸಿದರು.

ಸುದೀರ್ಘ ಪಯಣ

ಚನ್ನಮ್ಮ ಮೂರ್ತಿ ಪ್ರತಿಷ್ಟಾಪನೆ ಹಿಂದೆ ಸುದೀರ್ಘ ಹೋರಾಟ ಮತ್ತು ಪರಿಶ್ರಮವಿದೆ. ಆರಂಭದಲ್ಲಿ ಬಸ್ ನಿಲ್ದಾಣದ ಮುಂಭಾಗದ ಕೂಡು ರಸ್ತೆ ಮಧ್ಯೆ ವೃತ್ತ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ, ಸ್ಥಳದ ಅಭಾವದ ಹಿನ್ನೆಲೆ ಕೆಎಸ್‌ಆರ್‌ಟಿಸಿಯವರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಜಾಗ ಕೊಡುವುದಾಗಿ ಭರವಸೆ ನೀಡಿದ್ದರಿಂದ ಅಲ್ಲಿಯೇ ಮೂರ್ತಿ ಪ್ರತಿಷ್ಟಾಪಿಸಲು ಯೋಜಿಸಲಾಯಿತು. 2019ರಿಂದಲೇ ಪ್ರಕ್ರಿಯೆ ಆರಂಭಗೊಂಡಿದ್ದು, ಸಾಕಷ್ಟು ಸವಾಲುಗಳನ್ನು ಎದುರಿಸಲಾಗಿದೆ. ಆರಂಭದಲ್ಲಿ ಕೆಲವು ಶಿಲ್ಪಿಗಳು ಅರ್ಧಕ್ಕೆ ಕೈ ಬಿಟ್ಟ ಕಾರಣ ಮೂರ್ತಿ ತಯಾರಿಕೆ ವಿಳಂಬವಾಯಿತು. ಅಲ್ಲದೇ ಲಿಫ್ಟ್ ಸ್ಥಾಪಿಸುವುದು ಸೇರಿದಂತೆ ಹಲವು ಕಾಮಗಾರಿಗಳು ನಂತರದಲ್ಲಿ ಸೇರ್ಪಡೆಗೊಂಡ ಕಾರಣ ವಿಳಂಬವಾಯಿತು ಎಂದು ಕೋಳಕೂರ ಮೆಲಕು ಹಾಕಿದರು.

ಸರ್ಕಾರದ ನೆರವಿಲ್ಲ

ಪುತ್ಥಳಿ ನಿರ್ಮಾಣಕ್ಕೆ ಜಾಗಕಲ್ಪಿಸಿದ್ದು ಬಿಟ್ಟರೆ ಸರ್ಕಾರದಿಂದ ಯಾವುದೇ ಸಹಾಯಧನ ಪಡೆದಿಲ್ಲ. ಸಮುದಾಯದ ವಂತಿಗೆಯಲ್ಲಿಯೇ ಪುತ್ಥಳಿ ನಿರ್ಮಾಣಗೊಂಡಿದೆ. ಇದೀಗ ಸಮುದಾಯದ ಸಹಭಾಗಿತ್ವದಲ್ಲಿಯೇ ಮೂರ್ತಿ ಪ್ರತಿಷ್ಟಾಪನೆಗಳ್ಳಲಿದೆಯಾದರೂ ಸಂಬಂಧಿಸಿದ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಸಹಿತ ಹಿರಿಯ ಅಧಿಕಾರಿ ವರ್ಗಕ್ಕೂ ಆಹ್ವಾನ ನೀಡಲಾಗುವುದು ಎಂದು ಕೋಳಕೂರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಮಿತಿಯ ಮುಖಂಡರಾದ ಪುಟ್ಟು ಸಾವಳಗಿ, ರವಿ ತೊರವಿ, ಅಶೋಕ ಸಲಗರ, ಈರಣ್ಣ ಜುಗತಿ, ಚನ್ನಪ್ಪ ರೋಡಗಿ ಮತ್ತಿತರರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net