ಜನಗಣತಿಯಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿ, ಜಿಲ್ಲಾಧಿಕಾರಿ ಡಾ.ಆನಂದ ಕೆ ಮನವಿ

ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳ ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಇದ್ದಾರೆ.
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳ ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ 1 ರಿಂದ ಜನಗಣತಿ ಆರಂಭ
  • ಎರಡು ಹಂತದಲ್ಲಿ ನಡೆಯಲಿರುವ ಗಣತಿ
  • ಭಾರತದ ಮೊದಲ ಡಿಜಿಟಲ್ ಜನಗಣತಿ
  • ಡಿಸಿ ಆನಂದ ಕೆ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ವಿಜಯಪುರ: ದೇಶಾದ್ಯಂತ ಏ.1 ರಿಂದ ಆರಂಭಗೊಳ್ಳಲಿರುವ ಜನಗಣತಿಯಲ್ಲಿ ತಪ್ಪದೇ ಭಾಗವಹಿಸಬೇಕು. ಸ್ವಯಂ ಪ್ರೇರಿತವಾಗಿ ವಿವರ ದಾಖಲಿಸುವ ಮೂಲಕ ಜನಗಣತಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಗಣತಿಯು ಜನಸಂಖ್ಯೆಯ ಗಣತಿಯ ಜೊತೆಗೆ, ದೇಶದ ಸಾಮಾಜಿಕ-ಆರ್ಥಿಕ ಸ್ಥಿತಿಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ದಾಖಲಿಸುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಭಾರತದ ಮೊದಲ ಡಿಜಿಟಲ್ ಜನಗಣತಿ ಮತ್ತು 16 ನೇ ಜನಗಣತಿ ಇದಾಗಿದ್ದು, ಏಪ್ರಿಲ್ ನಿಂದ 2 ಹಂತದಲ್ಲಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಏ. 16 ರಿಂದ ಮೇ 15 ರವರೆಗಿನ ಅವಧಿಯಲ್ಲಿ ಗಣತಿದಾರರು ಮನೆಗೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸುತ್ತಾರೆ. ಒಂದು ವೇಳೆ ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಅವರು ನಿಮ್ಮಿಂದಲೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಅವಧಿಯಲ್ಲಿ ಶೇ.100ರಷ್ಟು ಗೌಪ್ಯತೆ ಇಟ್ಟು ನಿಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲೆಯಲ್ಲಿ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ಏ.16 ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ 15 ದಿನಗಳ ಮುಂಚಿತವಾಗಿ ಅಂದರೆ ಏಪ್ರಿಲ್ 1 ರಿಂದ 15 ವರೆಗೆ ಸ್ವಯಂ ಗಣತಿ ಕಾರ್ಯಕ್ಕೆ ಅವಕಾಶ ನೀಡಲಾಗಿದೆ. ಏ. 1ರಿಂದ ಏ.15 ರವರೆಗೆ ಸ್ವಯಂ ಗಣತಿ ವೆಬ್ ಪೋರ್ಟಲ್ ಲಭ್ಯವಿದೆ.  ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಸಾಧನಗಳ ಮೂಲಕ ನಮೂದಿಸಬಹುದು. ಇದರಿಂದ ಸಮಯದ ಉಳಿತಾಯ ಜೊತೆಗೆ ನಿಖರ ಹಾಗೂ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿ ಆಗಲಿದೆ ಎಂದರು.
ಮಾಹಿತಿ ಭರ್ತಿಯ ವೇಳೆ, ಕುಟುಂಬಗಳು ತಮ್ಮ ಸ್ಥಳದ ವಿವರಗಳನ್ನು (ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ/ಪಟ್ಟಣ/ನಗರ ಇತ್ಯಾದಿ) ಕಡ್ಡಾಯವಾಗಿ ನಮೂದಿಸಬೇಕು. ಸ್ಥಳವನ್ನು ನಿಖರವಾಗಿ ಗುರುತಿಸಲು ಪಿನ್ ಕೋಡ್ ಮತ್ತು ಡಿಜಿಟಲ್ ಮ್ಯಾಪ್ ಮೂಲಕ ಮನೆಯ ಸ್ಥಳವನ್ನು ಗುರುತಿಸುವ ವ್ಯವಸ್ಥೆಯೂ ಇರುತ್ತದೆ.
ಸ್ವಯಂ-ಗಣತಿ ಪೋರ್ಟಲ್ ನಲ್ಲಿ ಕೇಳಿರುವ, ಕೇಳುವ ಪ್ರಶ್ನೆಗಳಿಗೆ ಮನೆಪಟ್ಟಿ ಕಾರ್ಯಾಚರಣೆ ಮೊಬೈಲ್ ಆಪ್ ನಲ್ಲಿರುವಂತೆಯೇ ರೂಪಿಸಲಾಗಿದ್ದು, ಕೆಲವು ಮಾಹಿತಿಗಳು ಪೂರ್ವ ಭರ್ತಿಯಾಗಿರಬಹುದು. ಸಾರ್ವಜನಿಕರಿಗೆ ಸಹಾಯವಾಗುವಂತೆ ಪದೇ ಪದೇ ಕೇಳುವ ಪ್ರಶ್ನೆಗಳು ಮತ್ತು ಮಾರ್ಗಸೂಚಿಗಳನ್ನೂ ಒದಗಿಸಲಾಗಿದೆ. 
ಕುಟುಂಬವು ತಮ್ಮ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಅವರಿಗೆ ಒಂದು ವಿಶಿಷ್ಟ ಸ್ವಯಂ-ಗಣತಿ ಐಡಿ ನೀಡಲಾಗುತ್ತದೆ. ಈ ಐಡಿಯನ್ನು ಎಸ್ ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಅದನ್ನು ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಸಾರ್ವಜನಿಕರು ಹಂಚಿಕೊಳ್ಳಬಹುದೆಂದು ಜಿಲ್ಲಾಧಿಕಾರಿ ತಿಳಿಸಿದರು.
ಒಂದು ವೇಳೆ ಸಾರ್ವಜನಿಕರು ತಮ್ಮ ಸ್ವಯಂ ಗಣತಿ ಪೂರ್ಣಗೊಳಿಸದಿದ್ದರೆ, ಗಣತಿದಾರರು ತಮ್ಮಿಂದಲೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ.
ಸ್ವಯಂ ಗಣತಿಯು ಶೇ. 100 ರಷ್ಟು ಗೌಪ್ಯತೆಯ ಭದ್ರತೆ ನೀಡಲಿದ್ದು, ಪ್ರತಿಯೊಬ್ಬರೂ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ, ದೇಶದ ಜವಾಬ್ದಾರಿಯುತ ನಾಗರಿಕರಾಗಬೇಕಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net