

ವಿಜಯಪುರ: ‘ಐದು ಜನರಿರುವ ಒಂದು ಕುಟುಂಬದಲ್ಲಿ ಓರ್ವ ಮನಸೋ ಇಚ್ಛೆ ವರ್ತಿಸಿದರೆ ಆ ಮನೆಯ ನೆಮ್ಮದಿ ಕೆಡಲಿದೆ. ಹೀಗಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಕ್ಷಕ್ಕೆ ಬಂದರೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಲಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಪ್ರತಿಕ್ರಿಯಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಯತ್ನಾಳರ ಭೇಟಿ ವಿಚಾರಕ್ಕೆ ಸಂಬಂಧಿಸಿದ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ವಿಜಯೇಂದ್ರ ಅವರು ವಿಶಾಲ ಹೃದಯದವರು. ಹಿರಿದಾದ ವ್ಯಕ್ತಿತ್ವವುಳ್ಳವರು. ಈ ಹಿಂದೆ ಯತ್ನಾಳರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗಲೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಇದೀಗ ಸಾಕಷ್ಟು ಹಿಂಸೆ ನೀಡಿದರೂ ವಿಜಯೇಂದ್ರ ಅವರು ಯಾವತ್ತಿಗೂ ಯತ್ನಾಳರ ಬಗ್ಗೆ ಅಗೌರವಯುತವಾಗಿ ಮಾತನಾಡಿಲ್ಲ. ಇದರಿಂದ ವಿಜಯೇಂದ್ರ ಅವರ ವ್ಯಕ್ತಿತ್ವಕ್ಕೆ ಮೆರಗು ಬಂದಿದೆ’ ಎಂದರು.
ಮುಂದುವರಿದು, ‘ಯತ್ನಾಳರು ಕೂಡ ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಬಿಜೆಪಿಯ ಹಿರಿಯರಾಗಿ, ಶಾಸಕರಾಗಿ, ಕೇಂದ್ರದಲ್ಲಿ ಮಂತ್ರಿಯಾಗಿದ್ದು ಈಗ ಅದೇ ಪಕ್ಷಕ್ಕೆ ಅನ್ಯಾಯ ಮಾಡುವುದನ್ನು ಬಿಡಬೇಕು’ ಎಂದರು.
‘ಯತ್ನಾಳರು ಬಿಜೆಪಿ ರಾಜ್ಯಾಧಕ್ಷರಿಗೆ ಮಾತನಾಡಿದ್ದು ಮನಸ್ಸಿಗೆ ನೋವಾಗುತ್ತದೆ. ಆದರೆ, ವಿಜಯೇಂದ್ರ ಅವರು ಇಂದಿಗೂ ಯತ್ನಾಳ ಬಗ್ಗೆ ಮಾತನಾಡದೇ ಪಕ್ಷ ಸಂಘಟನೆಗೆ ಆದ್ಯತೆ ನೀಡಿ ಎನ್ನುತ್ತಾರೆ. ಇದು ವಿಜಯೇಂದ್ರ ಅವರ ವ್ಯಕ್ತಿತ್ವದ ಹಿರಿಮೆ’ ಎಂದರು.
‘ಯತ್ನಾಳರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಲಿ, ಹೊರ ಹಾಕುವುದಾಗಲಿ ನನ್ನ ಕೈಯಲ್ಲಿಲ್ಲ. ಪಕ್ಷದಲ್ಲಿ ಅವರಿಗೆ ಬಹಳ ವಿರೋಧ ಇದೆ. ಕಾರ್ಯಕರ್ತರು ಬಿಜೆಪಿಗಾಗಿ ಜೀವ ಸವೆಸಿದ್ದಾರೆ. ಅಂಥ ಕಾರ್ಯಕರ್ತರಿಗೆ ಕಾರ್ಪೋರೇಶನ್ ಚುನಾವಣೆಯಲ್ಲಿ ಟಿಕೆಟ್ ವಿಚಾರದಲ್ಲಿ ಹಿಂಸೆ ಕೊಟ್ಟಿದ್ದಾರೆ. ಇದೆಲ್ಲ ಬಂದ್ ಮಾಡಬೇಕು’ ಎಂದರು.