ರಾಜ್ಯಪಾಲರು ಯಾವುದೇ ಪಕ್ಷದ ವಕ್ತಾರರಲ್ಲ, ಅವರು ಸಂವಿಧಾನದ ರಕ್ಷಕರು. ಸರ್ಕಾರ ತಯಾರಿಸಿದ ಪಠ್ಯವನ್ನು ಯಾಂತ್ರಿಕವಾಗಿ ಓದಲೇಬೇಕು ಎಂಬ ನಿಯಮ ಸಂವಿಧಾನದಲ್ಲಿಲ್ಲ. ಸಂವಿಧಾನದ ವಿಧಿ 163, 175 ಮತ್ತು 176 ರಾಜ್ಯಪಾಲರಿಗೆ ವಿವೇಚನಾಧಿಕಾರ ನೀಡುತ್ತವೆ. ತಪ್ಪು, ಅಸಂಬದ್ಧ ಅಥವಾ ಸಂವಿಧಾನ ವಿರೋಧಿ ಅಂಶಗಳನ್ನು ಓದದೇ ಬಿಡುವುದು ರಾಜ್ಯಪಾಲರ ಸಂವಿಧಾನಾತ್ಮಕ ಹಕ್ಕು. ಈ ಹಕ್ಕಿನ ಅಡಿಯಲ್ಲಿಯೇ ಕರ್ತವ್ಯ ನಿರ್ವಹಣೆ ಮಾಡಿದ್ದು ತಪ್ಪೇ? ಸಂವಿಧಾನ ಬದ್ಧವಾಗಿ ನಡೆದುಕೊಂಡ ರಾಜ್ಯಪಾಲರಿಗೆ ಈ ರೀತಿ ಅಗೌರವ ತೋರುವುದು ಅಕ್ಷಮ್ಯ ಅಪರಾಧ. ಸಾಂವಿಧಾನಿಕವಾಗಿ ಗೌರವಯುತ ರಾಜ್ಯಪಾಲರನ್ನು ನಾವು ‘ಘನತೆವೆತ್ತ’ ರಾಜ್ಯಪಾಲರು ಎಂದು ಕರೆಯುತ್ತೇವೆ. ಆದರೆ ಈ ಕಾಂಗ್ರೆಸ್‌ನವರು ರಾಜ್ಯಪಾಲರಿಗೆ ಅಗೌರವ ತೋರುವ ಕೆಲಸ ಮಾಡಿದ್ದಾರೆ. ಕೂಡಲೇ ರಾಜ್ಯಪಾಲರಿಗೆ ಅಗೌರವ ತೋರಿದ ಎಲ್ಲ ಕಾಂಗ್ರೆಸ್ ಸದಸ್ಯರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಿ ಶಿಸ್ತುಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.