ಕಾಲುವೆ ಜಾಲಕ್ಕೆ ನೀರು ಹರಿಸಲು ಒತ್ತಾಯ, ಅಖಂಡ ಕರ್ನಾಟಕ ರೈತ ಸಂಘದಿಂದ ಮನವಿ

ವಿಜಯಪುರ ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ ಇತರರಿದ್ದಾರೆ.
ವಿಜಯಪುರ ಜಿಲ್ಲಾಡಳಿತಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಕಾಲಕ್ಕೆ ಮುಗಿಯದ ಕ್ಲೋಜರ್ ಕಾಮಗಾರಿ
  • ಪ್ರತಿ ವರ್ಷ ತಪ್ಪದ ರೈತರ ಗೋಳು
  • ಕಾಲುವೆಗಳಿಗೆ ಹರಿಯದ ನೀರು
ವಿಜಯಪುರ: ಸಕಾಲಕ್ಕೆ ಕ್ಲೋಜರ್ ಕಾಮಗಾರಿ ನಡೆಸಿ ಕಾಲುವೆ ಕೊನೆಯ ಭಾಗದ ರೈತರಿಗೆ ನೀರು ತಲುಪುವಂತೆ ಕ್ರಮಕೈಗೊಳ್ಳಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತದ ಮೂಲಕ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಕ್ಲೋಸರ್ ಕಾಮಗಾರಿಯನ್ನು ಸಕಾಲಕ್ಕೆ ಪ್ರಾರಂಭಿಸಿ ಸರಾಗವಾಗಿ ಕಾಲುವೆ ಜಾಲಕ್ಕೆ ನೀರು ಹರಿಸಿದಾಗ ಕಾಲುವೆ ಕೊನೆಯ ಅಂಚಿನವರೆಗೂ ನೀರು ತಲುಪುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷ ಕ್ಲೋಸರ್ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವ ಮುನ್ನವೇ ಟೆಂಡರ್ ಕರೆದು ಎಲ್ಲ ಸಿದ್ಧತೆಗಳನ್ನು ಮೊದಲೆ ತಯಾರಿ ಮಾಡಿಕೊಂಡಿರಬೇಕು. ಒಡೆದ ಕಾಲುವೆಗಳ ದುರಸ್ತಿ, ಕಾಲುವೆಗಳಲ್ಲಿ ತುಂಬಿದ ಹೂಳು, ಮುಳ್ಳು ಕಂಟಿಗಳ ತೆರವುಗೊಳಿಸುವುದೆಲ್ಲವೂ ಕ್ಲೋಸರ್ ಕಾಮಗಾರಿಯಡಿ ನಡೆಯುತ್ತವೆ. ಹಲವಾರು ವರ್ಷಗಳಿಂದ ಅನುದಾನ ಕೊರತೆಯಿಂದ ಕ್ಲೋಸರ್ ಕಾಮಗಾರಿಗೆ ಗ್ರಹಣ ಆವರಿಸಿತ್ತು. ಕಳೆದ ವರ್ಷ ಕೆಲವು ಕಡೆ ಕಾಮಗಾರಿ ಮಾಡಿದ್ದರು. ಆದರೆ ಅದು ಕೂಡ ಸರಿಯಾದ ರೀತಿಯಲ್ಲಿ ಆಗಲಿಲ್ಲ ಎಂದರು.
ಆಲಮಟ್ಟಿ ಎಡದಂಡೆ ಕಾಲುವೆಯ 5ನೇ ವಿತರಣಾ ಕಾಲುವೆಯ 2ನೇ ಮತ್ತು 3ನೇ ಲ್ಯಾಟರಲ್ ಗಳನ್ನು ನಿರ್ಮಿಸಿದ ನಂತರ ಇಲ್ಲಿಯವರೆಗೂ ದುರಸ್ತಿ ಕೆಲಸ ಮಾಡಿಲ್ಲ. ಇದರಿಂದ ಸಾವಿರಾರು ರೈತರ ಜಮೀನುಗಳಿಗೆ ಸಕಾಲಕ್ಕೆ ನೀರು ದೊರೆತಿಲ್ಲ. ಇದನ್ನು ಆ ಭಾಗದ ರೈತರು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಕುಲಕರ್ಣಿ ಹರಿಹಾಯ್ದರು.
ಜಿಲ್ಲೆಯಲ್ಲಿ 2.30 ಲಕ್ಷ ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಟ್ಟಿದ್ದರೂ ಕಾಲುವೆ ಜಾಲದ ರೈತರ ಗೋಳು ತಪ್ಪಿಲ್ಲ. ವಿವಿಧ ಕಾಲುವೆಗಳ ಬಹುತೇಕ ವಿತರಣಾ ಕಾಲುವೆಗಳಲ್ಲಿ ಅಪಾರ ಪ್ರಮಾಣದ ಹೂಳು, ಮುಳ್ಳು-ಕಂಟಿಗಳು ಬೆಳೆದಿವೆ. ನೀರು ಮುಂದೆ ಸಾಗದೆ ಇರುವುದರಿಂದ ಅಲ್ಲೇ ಶೇಖರಣೆಗೊಂಡು ರೈತರ ಜಮೀನುಗಳಿಗೆ ನುಗ್ಗಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ನೀರಿನಲ್ಲಿ ಕೊಳೆತು ಹೋಗಿ ಸಾಕಷ್ಟು ಪ್ರಮಾಣ ಹಾನಿಯಾದ ಉದಾಹರಣೆಗಳಿವೆ. ಸಾಕಷ್ಟು ಹೂಳು ತುಂಬಿಕೊಂಡಿದೆ. ಹೀಗಾಗಿ ಕಾಲುವೆಗಳ ಕೊನೆಯಂಚಿನ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಕಾಲುವೆ ನಿರ್ಮಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಕಾಲುವೆ ಅಕ್ಕಪಕ್ಕದ ರಸ್ತೆಗಳು ಮುಳ್ಳುಕಂಟಿಗಳಿಂದ ಆವರಿಸಿದ್ದರಿಂದ ರೈತರು ಜಮೀನುಗಳಿಗೆ ಹೋಗಲು ಕೂಡ ಪರದಾಡುವಂತಾಗಿದೆ. ಇದು ಪ್ರತಿ ವರ್ಷ ರೈತರಿಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ತಕ್ಷಣ ಕ್ಲೋಸರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು.
ಬಸವನಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನ ಬಾಗೇವಾಡಿ ತಾಲೂಕು ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಸೋಮೇಶ ನಾಗರೆಡ್ಡಿ, ಮಲ್ಲನಗೌಡ ಮೇಟಿ, ಮಾಳಪ್ಪ ಪೂಜಾರಿ, ಲಂಕೇಶ ತಳವಾರ, ಸಂಗು ಚಲವಾದಿ, ಸಿದ್ದು ಹಿರೇಮಠ, ಮಲ್ಲಿಕಾರ್ಜುನ ಭಜಂತ್ರಿ, ಮಡಿವಾಳಪ್ಪ ನಾಗರೆಡ್ಡಿ, ಶ್ರೀಶೈಲ ಕುರಣದ, ವಿಠಲ ಬಿರಾದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net